ಹಿರಿಯ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಲಿ
ಚಿಕ್ಕಬಳ್ಳಾಪುರ: ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಕಿರಿಯ ಅಧಿಕಾರಿಗಳ ಜೊತೆಗೆ ದರ್ಪದಿಂದ ವರ್ತಿಸಬಾರದು. ಸೌಜನ್ಯದಿಂದ ವರ್ತಿಸುವುದರಿಂದ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ರೋಷನ್ ಬೇಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಠಾಣೆ ಕಟ್ಟಡ ಹಾಗೂ ಪೊಲೀಸ್ ಕ್ಯಾಂಟೀನ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ದಿನದ 24 ಗಂಟೆ ಕಾಲ ದುಡಿಯುವ ನಿಸ್ವಾರ್ಥ ಸೇವಾ ಮನೋಭಾವ ಉಳ್ಳವರಾಗಿದ್ದಾರೆ. ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ವಿನಾ ಕಾರಣ ಬಯ್ಯುವುದು, ಏಕವಚನದಲ್ಲಿ ಮಾತನಾಡಿಸುವುದನ್ನು ನಿಲ್ಲಿಸಬೇಕು ಎಂದರು.
ಇಲ್ಲಿ ಪೊಲೀಸ್ ಕ್ಯಾಂಟೀನ್ ಪ್ರಾರಂಭವಾಗಿರುವುದರಿಂದ ಶೇ.30-40 ರಷ್ಟು ರಿಯಾಯಿತಿ ದರದಲ್ಲಿ ದಿನ ಬಳಕೆ ವಸ್ತುಗಳು ಸಿಗುತ್ತವೆ. ಜಿಲ್ಲಾ ಕೇಂದ್ರದಲ್ಲಿ ಪೊಲೀಸರಿಗಾಗಿ ಜಿಮ್, ಗ್ರಂಥಾಲಯ ಹಾಗೂ ಕ್ಲಿನಿಕ್ ಅನ್ನು ತೆರೆಯಲು ಪೊಲೀಸ್ ಇಲಾಖೆ ಬೇಡಿಕೆ ಇಡಲಾಗಿದೆ ಎಂದರು.
ಬೆಂಗಳೂರು ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕ ಸೈಯದ್ ಉಲ್ಫತ್ ಹುಸೇನ್ ಮಾತನಾಡಿದರು.
ಎಸ್ಪಿ ದಿವ್ಯಾ ಗೋಪಿನಾಥ್ ಮಾತನಾಡಿ, ಜೂ.1ರಿಂದ 8ರವರೆಗೆ ಪೊಲೀಸ್ ಕಲ್ಯಾಣ ಸಪ್ತಾಹ ಆಚರಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಕರಾಟೆ, ಪೊಲೀಸ್ ಪತ್ನಿಯರಿಗೆ ಕಸೂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ನಗರಸಭೆ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್, ಜಿಪಂ ಸಿಇಒ ನೀಲಾ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.