ದ್ವೇಷದ ಹಿನ್ನೆಲೆ: ಯುವಕನ ಕೊಲೆ ಯತ್ನ
ಕೆಜಿಎಫ್: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವಿನಾಕಾರಣ ಜಗಳ ಮಾಡಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಬ್ಲ್ಯೂ ಬ್ಲಾಕ್ ನಿವಾಸಿ ಕುಮಾರ್ ಎಂಬುವರ ಮಗನಾದ ಸಂತೋಷ್(17) ಯುವಕ ತಮ್ಮ ಮನೆಯ ಪಕ್ಕದಲ್ಲಿ ತೆಂಗಿನಕಾಯಿ ಹೊಡೆದು ಅದರ ನೀರನ್ನು ಲೋಟದಲ್ಲಿ ಹಾಕುತ್ತಿದ್ದಾಗ ಅಲ್ಲಿಗೆ ಬಂದ ವಳ್ಳಲ್ ಎಂಬುವನು ತೆಂಗಿನ ನೀರನ್ನು ಕೊಡಲು ಹೇಳಿದ್ದು ಸಂತೋಷ್ ಕೊಡಲು ನಿರಾಕರಿಸಿದ ಕಾರಣ ವಿನಾಕಾರಣ ಜಗಳ ತೆಗೆದು ಆತನ ಬಳಿಯಿದ್ದ ಒಂದು ಚಾಕುವಿನಿಂದ ಸಂತೋಷ್‌ಗೆ ಬರ್ಬರವಾಗಿ ಇರಿದು ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಆತನನ್ನು ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು ಹಳೇ ದ್ವೇಷದ ಹಿನ್ನೆಲೆಯಲ್ಲಿ ತನ್ನ ಮಗನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಕುಮಾರ್ ಚಾಂಪಿಯನ್‌ರೀಫ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಘಟನೆಗೆ ಮಾನ್ಯತೆ ನೀಡಿ
ಚಿಂತಾಮಣಿ: ನಗರದ ತಾಲೂಕು ಕಚೇರಿಯಲ್ಲಿ ಸಾಹಿತ್ಯ ಮತ್ತು ಸಾಂಸ್ಕತಿಕ ಸಂಘಟನೆಯಾದ ಸಿರಿಗನ್ನಡ ವೇದಿಕೆಯನ್ನು ತಾಲೂಕು ವ್ಯಾಪ್ತಿಯ ವಿವಿಧ ನಾಡು ಹಾಗೂ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿ ಜಿ.ವಿ. ಹನುಮಂತರೆಡ್ಡಿರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಎನ್. ಅಕ್ರಂ ಪಾಷ, ಉಪಾಧ್ಯಕ್ಷ ಸಿ. ವೆಂಕಟರಮಣಪ್ಪ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಪದಾಧಿಕಾರಿಗಳಾದ ತ್ಯಾಗರಾಜ್, ಕೃಷ್ಣಪ್ಪ ಇದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯ ಅಂಕವೀರರಿಗೆ ಸನ್ಮಾನ
ಚಿಕ್ಕಬಳ್ಳಾಪುರ: ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೇಷ್ಮೆ ಮಂಡಳಿ ನಿರ್ದೇಶಕ ಯಲುವಳ್ಳಿ ರಮೇಶ್ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ನಗರದಲ್ಲಿರುವ ಯಲುವಹಳ್ಳಿ ರಮೇಶ್ ಅವರ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದ ಬಾಗೇಪಲ್ಲಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿನಿ ವಿ. ಶೃತಿ, ಬಿಎಸ್ಸಿ ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು 3 ಚಿನ್ನದ ಪದಕ ಸೇರಿ ಒಟ್ಟು 7 ಬಹುಮಾನ ಪಡೆದ ಚಿಂತಾಮಣಿಯ ವಿದ್ಯಾರ್ಥಿನಿ ಚೈತ್ರಾ ಹಾಗೂ ಹೆಚ್ಚು ಅಂಕ ಗಳಿಸಿದ್ದ ಬಾಗೇಪಲ್ಲಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ ಡಿ.ಆರ್. ಪ್ರೀತಂ ಸನ್ಮಾನದ ಗೌರವಕ್ಕೆ ಪಾತ್ರರಾದರು.
ನಂತರ ಮಾತನಾಡಿದ ಯಲುವಹಳ್ಳಿ ರಮೇಶ್, ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸಿದಾಗ ಇನ್ನೂ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತದೆ ಎಂದ ಅವರು, ಬಡತನದ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹವರಿಗೆ ಉಳ್ಳವರು ಅಗತ್ಯವಿರುವ ನೆರವನ್ನು ಒದಗಿಸಬೇಕೆಂದರು.
ಉದ್ಯಮ ಸ್ಥಾಪನೆಗೆ ಆರ್ಥಿಕ ನೆರವು
ಕೆಜಿಎಫ್: ಯುವ ಉದ್ಯಮಿಗಳಿಗೆ ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ಸಹಕಾರ ಒಕ್ಕೂಟ ಲಿ. ಮೂಲಕ ಸಹಕಾರ ನೀಡಲಾಗುತ್ತದೆ ಎಂದು ಒಕ್ಕೂಟದ ದಕ್ಷಿಣ ಭಾರತದ ಸಂಚಾಲಕ ವೆಂಕಟಪತಿರಾಜು ಹೇಳಿದರು. ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಉದ್ದಿಮೆದಾರರಿಗೆ ಸಾಲ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಉದ್ಯಮ ಸ್ಥಾಪಿಸಲು ಯೋಜನೆ ರೂಪಿಸುವುದು, ಮಾರುಕಟ್ಟೆ ಸೌಲಭ್ಯ ಒದಗಿಸುವುದು ಸೇರಿ ಮುಂತಾದ ಕಾರ್ಯಗಳನ್ನು ಒಕ್ಕೂಟ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸುತ್ತಿದೆ ಎಂದು ತಿಳಿಸಿದರು. ಕೆಜಿಎಫ್ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಇಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು. ಕಾರ್ಮಿಕ ಕೆ.ರಾಜೇಂದ್ರನ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ವಿವಿಧ ಕಾರ್ಮಿಕ ಸಂಘಗಳ ಮುಖಂಡರು, ಉದ್ಯಾಮಿಗಳು ಮತ್ತು ನಿರುದ್ಯೋಗಿಗಳು ಭಾಗವಹಿಸಿದ್ದರು.
ಗ್ರಾಮೀಣರು ಬ್ಯಾಂಕ್ ವ್ಯವಹಾರ ನಡೆಸುವಂತಾಗಲಿ
ಮಾಲೂರು: ಸರ್ಕಾರದ ಎಲ್ಲ ರೀತಿಯ ಸವಲತ್ತುಗಳು ಬ್ಯಾಂಕ್ ಮೂಲಕ ನೀಡಿದಾಗ ಮಾತ್ರ ಯೋಜನೆಯ ಉದ್ದೇಶವು ಸಫಲತೆ ಪಡೆಯಲು ಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಕೆ.ಹೆಚ್. ಮುನಿಯಪ್ಪ ಹೇಳಿದರು. ಅವರು ತಾಲೂಕಿನ ತೂರ್ನಹಳ್ಳಿ ಗ್ರಾಮದಲ್ಲಿ ಪ್ರಗತಿ ಕೃಷ್ಣ ಗ್ರಾಮಿಣ ಬ್ಯಾಂಕ್ ನ ನೂತನ ಶಾಖೆಯನ್ನು ಉದ್ಘಾಟಿಸಿ, ಪ್ರತಿ ಗ್ರಾಮದಲ್ಲೂ ಬ್ಯಾಂಕ್ ಸ್ಥಾಪಿಸಿ ಗ್ರಾಮೀಣ ಭಾಗದ ಜನರು ಬ್ಯಾಂಕಿಂಗ್ ವ್ಯವಹಾರ ನೆಡಸುವಂತಾಗಬೇಕು ಎಂಬ ಉದ್ದೇಶದಿಂದ ಈ ಹಿಂದಿನ ಯುಪಿಎ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿ ಬಹುತೇಕ ಯಶಸ್ವಿ ಆಗಿತ್ತು ಎಂದರು. ಲೋಕ ಸಭಾ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ 30 ಶಾಖೆ ತೆರೆಯಬೇಕೆಂಬ ನಮ್ಮ ಗುರಿ ಯಶಸ್ವಿಯಾಗಿದ್ದು, ಇದು ಜಿಲ್ಲೆಯ 77 ನೇ ಶಾಖೆ ಎಂದರು. ಗ್ರಾಮೀಣ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಎಂ.ಜಿ.ಭಟ್ ಮಾತನಾಡಿ, ಬ್ಯಾಂಕ್ 110 ಲಕ್ಷ ಗ್ರಾಹಕರನ್ನು ಹೊಂದಿದ್ದು, 426 ಕೋಟಿ ರು.ಗಳ ಸಾಲವನ್ನು ನೀಡಿದೆ ಎಂದರು. ಕೋಲಾರ-ಚಿಕ್ಕಬಳ್ಳಾಪುರ ಪ್ರದೇಶದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಾತನಾಡಿ, ಇಂದು ಪ್ರಾರಂಭವಾದ ಇಲ್ಲಿನ ಬ್ಯಾಂಕ್‌ನಲ್ಲಿ ಒಂದೇ ದಿನದಲ್ಲಿ 162 ಖಾತೆಗಳು ತೆರೆದು 14 ಲಕ್ಷ ವ್ಯವಹಾರ ಮಾಡಲಾಗಿದೆ ಎಂದರು. ಮಾಲೂರು ಶಾಖೆಯ ವ್ಯವಸ್ಥಾಪಕ ವೇಣುಗೋಪಾಲ್, ತೂರ್ನಹಳ್ಳಿ ಶಾಖೆಯ ವ್ಯವಸ್ಥಾಪಕ ಎಂ. ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಚೆನ್ನ ಕೇಶವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆನ್ನರಾಯಪ್ಪ, ಎಸ್.ಎನ್. ರಘುನಾಥ್, ಜಿ.ಪಂ.ಮಾಜಿ ಸದಸ್ಯ ರಾಜಣ್ಣ, ಯುವ ಕಾಂಗ್ರೆಸ್‌ನ ಪಾಪರೆಡ್ಡಿ,ಪ್ರವೀಣ್ ಕುಮಾರ್, ಶಬ್ಬೀರ್, ಲಕ್ಷ್ಮಿನಾರಾಯಣ್, ಗುಂಡಪ್ಪ, ಮೋಹನ್ ಕೃಷ್ಣ, ಶ್ರೀನಿವಾಸ್, ರಾಜಗೋಪಾಲ್ ರೆಡ್ಡಿ ಇದ್ದರು.