ಮರಳು ಮಾಫಿಯಾಗೆ ಕೆರೆಗಳ ಬಲಿ
-ಪಾ.ಶ್ರೀ. ಅನಂತರಾಮ್
ಕೋಲಾರ: ಅತಿ ಹೆಚ್ಚು ಕೆರೆಗಳು ಇರುವ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಕುಸಿತಕ್ಕೆ ಮಳೆಯ ಕೊರತೆಯ ಜೊತೆಗೆ ಮರಳು ಮಾಫಿಯಾಗಳು ಪೂರ್ವಿಕರು ಕಟ್ಟಿಸಿರುವ ಕೆರೆಗಳನ್ನು ಹಣದಾಸೆಯಿಂದ ನಾಶ ಮಾಡುತ್ತಿರುವುದರಿಂದ ಜನ-ಜಾನುವಾರುಗಳು ಬೋಗಸೆ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ನೂರಾರು ಕೆರೆಗಳ ಮೂಲ ವಿನ್ಯಾಸ ಮಾರುಳು ಮಾಫಿಯಾದವರಿಂದ ವಿಕೃತಗೊಂಡಿದೆ. ಕೆರೆಗಳ ಸಮತಟ್ಟು ಹಾಳಾಗಿ ಮಳೆಯ ನೀರು ಭೂಮಿಯಲ್ಲಿ ಇಂಗದಂತಾಗಿದೆ, ಕೆರೆ ಅಚ್ಚುಕಟ್ಟೆ ಅಕ್ಕ-ಪಕ್ಕದ ಪ್ರಬಲರು ಇದನ್ನೇ ಬಂಡವಾಳ ಮಾಡಿಕೊಂಡು ಕೆರೆಯ ಏರಿಯನ್ನು ಕತ್ತರಿಸಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಛೀಮಾರಿಗೆ ಒಳಗಾಗಿರುವುದು ಉಂಟು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಾರ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಮರಳು ನಿಕ್ಷೇಪಗಳು ಇಲ್ಲ, ಪಾಲಾರ್, ಪೆನ್ನಾರ್, ಕೌಂಡಿನ್ಯ ನದಿಗಳ ಪಾತ್ರ ಅನೇಕ ವರ್ಷಗಳ ಹಿಂದೆಯೇ ಮುಚ್ಚಿ ಹೋಗಿವೆ, ಸರ್ಕಾರದ ಕಟ್ಟುನಿಟ್ಟಿನ ಆದೇಶಗಳು ಹೊರ ಹೊಮ್ಮುವ ಮುನ್ನವೇ ನದಿ ಪಾತ್ರದಲ್ಲಿ ಮರಳು ಶೋಧಿಸಿ ಪ್ರತಿ ಕ್ಯೂಬಿಕ್ ಮೀಟರ್ ಮರಳನ್ನು ಬೆಂಗಳೂರು ಇನ್ನಿತರ ಕಡೆಗೆ ಸಾಗಾಣೆ ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸಿ ಮುಂದಿನ ಪೀಳಿಗೆ ಹಿತವನ್ನು ಮರೆತಿದ್ದಾರೆ.
ನದಿ ಪಾತ್ರದಲ್ಲಿ ಮರಳು ಕರಗಿದ ಮೇಲೂ ಹಣ ಸಂಪಾದನೆಯ ದುರಾಸೆಯಿಂದ ಕೆರೆಗಳಲ್ಲಿ ಹಾಗೂ ಕೃಷಿಗೆ ಯೋಗ್ಯವಾಗಿದ್ದ ಜಮೀನುಗಳಲ್ಲೂ ಮರಳು ಶೋಧಿಸಿ ಹೊಟ್ಟೆ ತುಂಬಿಸಿಕೊಂಡು ಭೂಮಿಯನ್ನು 1,400 ರಿಂದ 1,600 ಅಡಿಗಳ ತನಕ ಬಗೆದರೂ ಅಂತರ್ಜಲ ಸಿಗದಂತೆ ಮಾಡಿದ್ದಾರೆ.
ಅಕ್ರಮವಾಗಿ ಮರಳು ಸಾಗಾಣೆ ಮಾಡುವವರಿಗೆ ಲಗಾಮು ಹಾಕಲು ಎಷ್ಟೇ ಪ್ರಯತ್ನಗಳು ನಡೆಯುತ್ತಿದ್ದರೂ ಮರಳು ಲಾರಿಗಳ ಸದ್ದು ನಿಲ್ಲಿಸಲಾಗಿಲ್ಲ, ಚೆಕ್ ಪೋಸ್ಟ್ಗಳು ಬೆದರುಗೊಂಬೆಯಾಗಿವೆ, ಅಲ್ಲಿ ಕೆಲಸಕ್ಕೆ ನಿಯೋಜಿತರಾಗಿರುವವರು ಜೀವ ಭಯದಿಂದ ಮೌನಕ್ಕೆ ಶರಣಾಗಿದ್ದಾರೆ, ಕೈಗೆ ಸಿಕ್ಕಷ್ಟು ಹಣವನ್ನು ಜೇಬಿನಲ್ಲಿಟ್ಟುಕೊಂಡು ಜಾಣ ಮೌನಕ್ಕೆ ಶರಣಾಗಿದ್ದಾರೆ.
ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚು ಮರಳು ಫಿಲ್ಟರ್ ದಂಧೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮ ತಡೆಯಲು ಹೋಗಿ ಜೀವ ಬೆದರಿಕೆ ಅನುಭವಿಸಿದ್ದು ಉಂಟು, ಜೆಸಿಬಿ ಚಾಲಕರು, ಮರಳು ಲಾರಿಯವರು ಅಧಿಕಾರಿಗಳ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿರುವುದು ಉಂಟು.
ಕಳೆದ ಮೂರು ವರ್ಷಗಳ ಹಿಂದೆ ಮರಳು ಲಾರಿಯ ಚಾಲಕನೊಬ್ಬ ಮುಳಬಾಗಿಲಿನಲ್ಲಿ ಜಾಗೃತ ದಳದ ಸಿಬ್ಬಂದಿಯೊಬ್ಬರನ್ನು ಬಲಿ ತೆಗೆದುಕೊಂಡರೆ, ಕೆಲವು ತಿಂಗಳ ಹಿಂದೆ ಕೋಲಾರ ಎಪಿಎಂಸಿ ಬಳಿ ಪೊಲೀಸ್ ಒಬ್ಬರು ಲಾರಿಯನ್ನು ತಡೆಯಲು ಹೋಗಿ ಪ್ರಾಣ ಕಳೆದುಕೊಂಡರು ಅಕ್ರಮ ತಡೆಗಟ್ಟಲು ಸಾಧ್ಯವಾಗಿಲ್ಲ.
ಮರಳು ಮಾಫಿಯಾ ತಡೆಗೆ ಮುಖ್ಯವಾಗಿ ಸಂಬಂಧಪಟ್ಟ ಇಲಾಖೆಗಳಲ್ಲಿ ಸಮನ್ವಯದ ಕೊರತೆ ಪ್ರಮುಖ ಕಾರಣವಾಗಿದೆ, ಜಂಟಿಯಾಗಿ ಕಾರ್ಯಾಚರಣೆ ಮಾಡುವ ಬದಲು ಹಠಕ್ಕೆ ಬಿದ್ದು ಪೊಲೀಸರು ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಪ್ರತ್ಯೇಕವಾಗಿ ದಾಳಿ ಮಾಡುತ್ತಿದ್ದು ಇದರಲ್ಲಿ ಪಾರದರ್ಶಕತೆ ಇಲ್ಲವೆಂಬ ಆರೋಪಗಳು ಕೇಳಿ ಬರುತ್ತಿದೆ.
ಕವಡೆ ಕಾಸಿಗೆ ಬೆಲೆ ಇಲ್ಲ: ಬೇರೆ ಯಾವುದೋ ಸಭೆಗಳಲ್ಲಿ ಮರಳು ವಿಚಾರ ಬಂದಾಗ ಕೆಲ ಜನಪ್ರತಿನಿಧಿಗಳು ಮರಳು ವ್ಯಾಪಾರಿಗಳ ಪರವಾಗಿ ಧಾರಾಳತನ ತೋರಿ ಟೀಕೆಗಳು ಬಂದರೂ ತಲೆ ಕೆಡಿಸಿಕೊಳ್ಳದೆ ರಕ್ಷಣೆಗೆ ನಿಂತಿರುವುದರಿಂದ ಕೋಲಾರ ಜಿಲ್ಲೆಯಲ್ಲಿ ಎಷ್ಟೇ ದಕ್ಷ,ಪ್ರಾಮಾಣಿಕ ಅಧಿಕಾರಿಗಳು ಬಂದರೂ ಮರಳು ದಂಧೆ ತಡೆಯಲು ಆಗದೆ ಗಂಟು ಮೂಟೆ ಕಟ್ಟಿಕೊಂಡು ಜಿಲ್ಲೆಯಿಂದ ನಿರ್ಗಮಿಸಿದ್ದಾರೆ.
ಇತ್ತೀಚೆಗೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪನವರು ಮರಳು ದಂಧೆಯಲ್ಲಿ ತೋಡಗುವವರ ವಿರುದ್ಧ ಗೂಂಡಾ ಕಾಯಿದೆ ಜಾರಿಗೆ ಆದೇಶಿಸಿದ್ದಾರೆ, ಆದರೆ,ಕೆರೆಗಳಲ್ಲಿ ಮರಳು ಶೋಧನೆ, ಸಾಗಾಣೆ ತಡೆ ಸಾಧ್ಯವಾಗಿಲ್ಲ.
ಒಗ್ಗಟು ಮುಖ್ಯ: ಜಿಲ್ಲೆಯ ಕೆರೆಗಳನ್ನು ಉಳಿಸಿಕೊಂಡು ಅಭಿವೃದ್ಧಿ ಪಡಿಸದಿದ್ದರೆ ಶಾಶ್ವತ ನೀರಾವರಿಯ ಕನಸು ವರಿಯಾಗುವುದು ಸ್ಪಷ್ಟ. ನೆನವು ಆದಾಗ ಶಾಶ್ವತ ನೀರಾವರಿ ಕುರಿತು ಮಾತನಾಡುವ ಸಂಘಟನೆಗಳ ಮುಖಂಡರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಕೆರೆಗಳ ಸಂರಕ್ಷಣೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ.