ಮುಂದಿನ ಬಾರಿ ಬಿಜೆಪಿಗೆ ಅಧಿಕಾರ: ನಾರಾಯಣಸ್ವಾಮಿ
ಕೋಲಾರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 134 ಸ್ಥಾನಗಳು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಆಗ್ನೇಯ ಕ್ಷೇತ್ರದ ಅಭ್ಯರ್ಥಿ ಶಿವಯೋಗಿಸ್ವಾವು ಪರ ಮಾತಯಾಚಿಸಿ ಮಾತನಾಡಿ, ಇದು ಪ್ರತಿಷ್ಠೆಯ ಚುನಾವಣೆ. ರಾಜ್ಯದ ಹಿತ ಕಾಪಾಡುವ ವ್ಯಕ್ತಿ ಅಗತ್ಯ. ಶಿವಯೋಗಿಸ್ವಾವು ಎರಡು ಬಾರಿ ಆಯ್ಕೆಯಾಗಿ ಉತ್ತಮ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಬಾರಿಸಲು ಆಶೀರ್ವದಿಸಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಬೀಸಲಾರಂಭಿಸಿದೆ, ಈ ತಕ್ಷಣ ಚುನಾವಣೆ ನಡೆದರೂ ಬಿಜೆಪಿ 134ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ, ಕಾಂಗ್ರೆಸ್ 70, ಜೆಡಿಎಸ್ 20 ಸ್ಥಾನಗಳನ್ನು ಮಾತ್ರ ಗೆಲ್ಲುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು, ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕೆಂದರು. ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಂ.ಎಸ್. ನಾಗೇಂದ್ರ ಅವರು ಮಾತನಾಡಿದರು.