ಮೇಲ್ಸೇತುವೆಯೆಂಬ ಮರೀಚಿಕೆ!
ಟೇಕಲ್ ರೈಲು ನಿಲ್ದಾಣದ ಮೇಲ್ಸೇತುವೆ ಇನ್ನು ಅಂಡರ್ಪಾಸ್?
-ಟೇಕಲ್ ಲಕ್ಷ್ಮೀಶ್
ಟೇಕಲ್: ಮರೀಚಿಕೆಯಾಗಿ ಉಳಿದ ಟೇಕಲ್ ರೈಲು ನಿಲ್ದಾಣದ ಮೇಲ್ಸೇತುವೆ ಇದೀಗ ಇಲಾಖೆ ಮೂಲಗಳ ಪ್ರಕಾರ ಅಂಡರ್ ಪಾಸ್ ಆಗುವ ಸಾಧ್ಯತೆ ಕೇಳಿ ಬರುತ್ತಿದ್ದು, ವಾರದ ಹಿಂದೆ ರೈಲ್ವೆ ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯನಡೆಸಿದ್ದಾರೆ.
ಸುಮಾರು 5 ವರ್ಷದ ಹಿಂದೆ ನಮ್ಮ ಜಿಲ್ಲೆಯವರಾದ ಸಂಸದ ಹಾಗೂ ಅಂದು ರೈಲ್ವೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಅವರು ರೈಲ್ವೆ ಬಜೆಟ್ನಲ್ಲಿ ಮೇಲ್ಸೇತುವೆ ಕಟ್ಟಲು ರು. 9 ಕೋಟಿ ಅನುಮೋದಿಸಿದ್ದರು. ಅದರಂತೆ ರೈಲ್ವೆ ಬಜೆಟ್ನಲ್ಲಿ ಅಂಗೀಕಾರವಾಗಿ ಮಂಡನೆಯಾಯಿತು. ಆದರೆ ಅಂದಿನಿಂದ ಇಂದಿನವರೆಗೂ ಟೇಕಲ್ ಭಾಗದ ಜನತೆಗೆ ರೈಲ್ವೆ ಬ್ರಿಡ್ಜ್ ಎಲ್ಲಿ ಆಗುತ್ತದೆ, ಯಾವಾಗ ಆಗುತ್ತದೆ ಎಂಬ ಜಿಜ್ಞಾಸೆಯಲ್ಲೇ ಕಾಲದೂಡತ್ತಿದ್ದಾರೆ. ಟೇಕಲ್ ಜನರಂತೂ ಮೇಲ್ಸೇತುವೆ ನಿರ್ಮಿಸಲು ನೀಲನಕ್ಷೆ ತಯಾರಾಗಿದೆಯೇ? ಹೇಗೆ ಕಟ್ಟುತ್ತಾರೆ? ರೈಲ್ವೆ ನಿಲ್ದಾಣದ ಆಸುಪಾಸಿನಲ್ಲಿ ಅಂಗಡಿ ಮುಂಗಟ್ಟು ಹಾಗೂ ಮನೆಗಳನ್ನು ನಿರ್ಮಿಸುತ್ತಿದ್ದವರು ಅಂದಿನಿಂದ ಇಂದಿನವರೆಗೂ ಮೇಲಂತಸ್ತಿನ ಕಟ್ಟಡ ಕಟ್ಟಿದರೆ ಮೇಲ್ಸೇತುವೆಯಿಂದ ತೊಂದರೆಯಾಗುವ ಸಾಧ್ಯತೆಯನ್ನು ಕಲ್ಪಿಸಿಕೊಂಡು ಕಟ್ಟಡ ಕಟ್ಟದೇ ಉಳಿದಿದ್ದಾರೆ.
ಈ ಹಿಂದೆ ರೈಲ್ವೆ ಅಧಿಕಾರಿಗಳು ಹಾಗೂ ಸರ್ವೆ ಇಲಾಖೆಯವರು ಒಟ್ಟುಗೂಡಿ ಮೇಲ್ಸೇತುವೆ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದ್ದು, ನೀಲನಕ್ಷೆ ತಯಾರಾಗಿದೆ ಎಂದು ಅಧಿಕಾರ ವರ್ಗದಲ್ಲಿ ಕೇಳಿಬಂದಿತ್ತು. ಆದರೆ ರೈಲ್ವೆ ಬಜೆಟ್ ಮಂಡನೆಯಾಗಿ 5 ವರ್ಷ ಕಳೆದರೂ ಮೇಲ್ಸೇತುವೆ ಮರೀಚಿಕೆಯಾಗಿಯೆ ಉಳಿದಿದೆ.