ಸಾಧನೆಯ ಕಿರು ಪುಸ್ತಕ ಶೀಘ್ರದಲ್ಲೇ ಬಿಡುಗಡೆ
ಬಂಗಾರಪೇಟೆ: ಶಾಸಕನಾಗಿ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ಶೀಘ್ರದಲ್ಲೇ ಕಿರು ಪುಸ್ತಕವನ್ನು ಬಿಡುಗಡೆ ಮಾಡುವುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಕುವೆಂಪು ನಗರದ ನೂತನವಾಗಿ ಕೊರೆದಿರುವ ಕೊಳವೆ ಬಾವಿಯನ್ನು ಜನರಿಗೆ ಅರ್ಪಿಸಿ ಮಾತನಾಡುತ್ತಾ ವಿರೋಧ ಪಕ್ಷದವರು ತಮ್ಮ ವಿರುದ್ಧ ಮಾಡುತ್ತಿರುವ ಟೀಕೆಗೆ ಉತ್ತರ ನೀಡಲು ಸಾಧನೆಗಳ ಪುಸ್ತಕವನ್ನು ಹೊರ ತರುವುದಾಗಿ ಹೇಳಿದರು.
ಕುವೆಂಪು ನಗರದಲ್ಲಿ ಎಸ್‌ಸಿಪಿ ಯೋಜನೆಯಡಿ ಸುಮಾರು ರು. 5 ಲಕ್ಷ ಅನುದಾದಲ್ಲಿ ಸಿಮೆಂಟ್ ರಸ್ತ್ತೆ ಹಾಕಲಾಗುವುದು ಹಾಗೂ ನಬಾರ್ಡ್ ಮತ್ತು 13ನೇ ಹಣಕಾಸು ಯೋಜನೆಯಡಿ ಬೆಮಲ್ ನಗರದಿಂದ ಉರಿಗಾಂವರೆಗೆ ರಸ್ತೆ ಅಗಲಿಕರಣ ಮಾಡಲಾಗುವುದು ಎಂದು ಅವರು ತಿಳಿಸಿದರು.
ಶಾಸಕನಾಗಿ ವರ್ಷದಲ್ಲಿ ನಾನು ಸುಮ್ಮನೆ ಕುಳಿತಿಲ್ಲ. ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿರುವೆ. ಕ್ಷೇತ್ರದಲ್ಲಿ ಇರುವ ನೀರಿನ ಸಮಸ್ಯೆಗೂ ಸ್ಪಂದಿಸಿ ಇದುವರೆಗೂ 350ಕ್ಕೂ ಹೆಚ್ಚು ಬೋರ್ ಕೊರೆಸುವ ಮೂಲಕ ದಾಖಲೆ ಮಾಡಲಾಗಿದೆ. ಇದು ನನ್ನ ಸಾಧನೆ ಅಲ್ಲವೆ ಎಂದು ವಿರೋಧಿಗಳನ್ನು ಪ್ರಶ್ನಿಸಿದರು.