ಕುಡಿಯುವ ನೀರು ಪೂರೈಕೆಗೆ ಖಾಲಿ ಕೊಡ ಪ್ರದರ್ಶನ
ಬಂಗಾರಪೇಟೆ: ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಪುರಸಭೆ ಅಧಿಕಾರಿಗಳು ಮಾತ್ರ ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ ಎಂದು ದಲಿತ ಸಮಾಜ ಸೇನೆ ಕಾರ್ಯಕರ್ತರು ಖಾಲಿ ಬಿಂದಿಗೆ ಪ್ರದರ್ಶಿಸಿ, ಪ್ರತಿಭಟಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿ, ತಿಂಗಳಿಗೆ, ಒಂದುವರೆ ತಿಂಗಳಿಗೆ ನೀರು ಪೂರೈಸಿದರೆ ಬದುಕುವುದು ಹೇಗೆ? ನೀರು ಪೂರೈಕೆ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಎಎಲ್‌ಎನ್. ಸ್ವಾಮಿ, ರಮೇಶ್, ನಟರಾಜ್, ಆಟೋ ಜಾನ್, ಯತೀಶ್, ನಾಗರತ್ನಮ್ಮ, ಮುನಿಸ್ವಾಮಿ, ಗೋವಿಂದ, ಹನುಮಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
9ನೇ ತರಗತಿ ಫೇಲಾದ ವಿದ್ಯಾರ್ಥಿಗಳಿಗೆ ಗೇಟ್ ಪಾಸ್: ಕ್ರಮಕ್ಕೆ ಕರವೇ ಆಗ್ರಹ
ಮಾಲೂರು: 9ನೇ ತರಗತಿ ಫೇಲಾದ ವಿದ್ಯಾರ್ಥಿಗಳಿಗೆ ಪಾಸ್ ಮಾಡಿ ಟಿ.ಸಿ. ನೀಡುತ್ತೇವೆ ಬೇರೆ ಶಾಲೆ ಸೇರಿ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳು ಒತ್ತಾಯಿಸುತ್ತಿವೆ. ಇಂಥ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ, ಮಾತನಾಡಿದ ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ದಡ್ಡ ವಿದ್ಯಾರ್ಥಿಗಳನ್ನು ವಿದ್ಯಾವಂತರಾಗಿ ಮಾಡದ ಖಾಸಗಿ ಶಾಲೆಗಳು, 9 ನೇ ತರಗತಿ ಫೇಲಾದ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಆಸೆ ತೋರಿಸಿ, ತಮ್ಮ ಶಾಲೆಯಿಂದ ಹೊರ ಹಾಕುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣ್ಯ, ಅಂಥ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ತಾಲೂಕಿನ ಖಾಸಗಿ ಶಾಲೆಗಳಲ್ಲಿ ನೋಟ್ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಬಂದಿದೆ. ಈ ಬಗ್ಗೆ ಕಠಿಣವಾಗಿ ಖಾಸಗಿ ಶಾಲೆಗಳಿಗೆ ತಿಳಿಸಲಾಗಿದೆ ಎಂದರು. ದಯಾನಂದ್,ಎಸ್.ಕೆ.ಶಿವುಕುಮಾರ್, ಕಡತೂರು ಮಂಜು, ಆಟೋ ಮಧು, ವೇಣು, ನಾರಾಯಣಸ್ವಾಮಿ, ಎಂ.ಕೆ.ನಾರಾಯಣಸ್ವಾಮಿ ಇದ್ದರು.