ಕ್ಷುಲ್ಲಕ ಕಾರಣಕ್ಕೆ ಗ್ರಾಪಂ ಅಧ್ಯಕ್ಷೆ ಪತಿ ಮೇಲೆ ಹಲ್ಲೆ
ಚಿಂತಾಮಣಿ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟಣೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಗಲ್ ಗ್ರಾಮದಲ್ಲಿ ನಡೆದಿದೆ. ಕೋಟಗಲ್ ಗ್ರಾಪಂ ಅಧ್ಯಕ್ಷೆ ಅಂಜುಮನ್ ಜಹೀರಾ ಭಾನು ಅವರ ಪತಿ, ಗ್ರಾಪಂ ಮೇಲ್ವಿಚಾರಕ ಬಾಬು ಹಾಗೂ ಇದೇ ಗ್ರಾಮದ ಶೆಟ್ಟಿವಾರ ಶ್ರೀರಾಮಪ್ಪ ಕುಟುಂಬ ಮಧ್ಯೆ ರುದ್ರಭೂಮಿಯಲ್ಲಿನ ಬೆಟ್ಟದಹೂ ಮರದ ಮೇವಿನ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಶೆಟ್ಟಿವಾರು ಕುಟುಂಬದ ಕೃಷ್ಣಪ್ಪ, ರಾಜಣ್ಣ ಮತ್ತು ವೆಂಕಟರಮಣ ಅವರು ಗುಂಪುಕಟ್ಟಿಕೊಂಡು ಬಾಬು ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಬಾಬು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ತಾಪಂ ಉಪಾಧ್ಯಕ್ಷ ನಾಗರಾಜ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗ್ರಾಮದ ಮುಖಂಡರ ನೇತೃತ್ವದಲ್ಲಿ ಈ ಪ್ರಕರಣದ ಬಗ್ಗೆ ನ್ಯಾಯ ಪಂಚಾಯ್ತಿ ನಡೆದಿದೆ.
ಕಳ್ಳನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದರು
ಚಿಂತಾಮಣಿ: ವೃದ್ಧೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಯುವಕನೊಬ್ಬ ಚಾಕು ತೋರಿಸಿ ಅಪಹರಿಸಲು ಯತ್ನಿಸಿದಾಗ, ನೆರೆಹೊರೆಯವರು ಆತನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಕಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸೀಕಲ್ ಗ್ರಾಮದ ವೃದ್ಧೆ ನಾರೆಮ್ಮ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಅಪರಿಚಿತ ಯುವಕ ಆಕೆಯ ಕತ್ತಿಗೆ ಚಾಕು ತೋರಿಸಿ ಚಿನ್ನಾಭರಣ ಕಿತ್ತುಕೊಂಡಿದ್ದಾನೆ. ಆಕೆಯ ತಲೆಗೆ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.
ಆಗ ನಾರೆಮ್ಮ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ತಕ್ಷಣ ನೆರೆಹೊರೆ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಅಲ್ಲಿಗೆ ಬಂದು ಯುವಕನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಾರೆಮ್ಮ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ
ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿನ ಸಂಸ್ಕೃತ ಪಾಠಶಾಲೆಯ ಆವರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಸ್ಥಳೀಯ ನಿಸರ್ಗ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಜೂ.18 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದ್ದು, ನೇತ್ರ ದೋಷವುಳ್ಳವರು ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ನಿಸರ್ಗ ಅಭಿವೃದ್ಧಿ ಸಂಸ್ಥೆಯ ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣದಿಂದ ಉಜ್ವಲ ಭವಿಷ್ಯ: ಕೆ.ಕೃಷ್ಣಮೂರ್ತಿ
ಚಿಕ್ಕಬಳ್ಳಾಪುರ: ಶಿಕ್ಷಣವು ಉಜ್ವಲ ಭವಿಷ್ಯ ರೂಪಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಹೇಳಿದರು. ಅವರು ತಾಲ್ಲೂಕಿನ ಸೊಣ್ಣಾಪುರ(ಬಾಪನಹಳ್ಳಿ)ದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯ್ತಿ ಅನುದಾನದ 4.5 ಲಕ್ಷ ರು. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇನ್ನೂ ಈ ಅಂಗನವಾಡಿ ಕೇಂದ್ರಕ್ಕೆ ಬೇಕಾದ ಸೌಕರ್ಯಗಳನ್ನೂ ಒದಗಿಸಲಾಗುವುದು ಎಂದರು ಭರವಸೆ ನೀಡಿದರು. ತಾಲೂಕು ಪಂಚಾಯ್ತಿಯ ಮೂರು ಕೋಟಿ ರು. ಅನುದಾನದಲ್ಲಿ ಕೇವಲ ಮೂರು ವರ್ಷಗಳಲ್ಲಿ ಒಂದೂವರೆ ಕೋಟಿ ರು.ಗಳನ್ನು ಶಿಕ್ಷಣ ಕೇಂದ್ರಗಳಿಗೆ ಈಗಾಗಲೇ ತಾಲೂಕಿನಾದ್ಯಂತ ವಿನಿಯೋಗಿಸಲಾಗಿದೆ. ಇನ್ನು 10 ಕೇಂದ್ರಗಳ ನೂತನ ಕಟ್ಟಡಗಳನ್ನು ತಮ್ಮ ಅಧಿಕಾರಾವಧಿಯಲ್ಲಿಯೇ ನಿರ್ಮಿಸಲಾಗುವುದೆಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಮುನೇಗೌಡ ಮಾತನಾಡಿ, ತಮ್ಮ ಕ್ಷೇತ್ರಗಳಲ್ಲಿನ ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ತಾಪಂ ಮಾಜಿ ಉಪಾಧ್ಯಕ್ಷ ಕೆ.ಆರ್. ರೆಡ್ಡಿ, ಗ್ರಾಮದ ಮುಖಂಡ ಕೇಶವಣ್ಣ, ವೆಂಕಟಸ್ವಾಮಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಸೇರಿ ಅನೇಕರಿದ್‌ದರು.