ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ವೆಂಕಟರಮಣರೆಡ್ಡಿ ಮನವಿ
ಚಿಂತಾಮಣಿ: ಆಗ್ನೇಯ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ತೂಪಲ್ಲಿ ಆರ್.ಚೌಡರೆಡ್ಡಿ ಪರವಾಗಿ ಸೋಮವಾರ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವೆಂಕಟರಮಣರೆಡ್ಡಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ತಾಲೂಕಿನ ಯಗವಕೋಟೆ, ಏನಿಗದಲೆ, ಬುರುಡಗುಂಟೆ, ಕೋರ್ಲಪರ್ತಿ, ಕೆಂಚಾರ್ಲಹಳ್ಳಿ ವ್ಯಾಪ್ತಿಗಳಲ್ಲಿ ಕರಪತ್ರ ನೀಡುವ ಮೂಲಕ ಪ್ರಚಾರ ಮಾಡಿದರು. ನಂತರ ಮಾತನಾಡಿದ ಅವರು, ಚೌಡರೆಡ್ಡಿ ಅವರಿಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡಿ ಗೆಲ್ಲಿಸಬೇಕು. ಕಳೆದ ಎರಡು ಬಾರಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿರುವ ಅವರನ್ನು ಈ ಬಾರಿ ಗೆಲ್ಲಿಸಿ. ಪದವೀಧರರ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆಂಬ ಭರವಸೆ ನೀಡಿದರು.
ಈ ವೇಳೆ, ಬಿ.ಎಚ್.ಮಂಜುನಾಥ್, ಓಂಕಾರಪ್ಪ, ರಾಮಚಂದ್ರಸಿಂಗ್, ವೆಂಕಟೇಶ್ವರರಾವ್, ಸುಭ್ರಮಣಿ, ಕಿರಮ್‌ಕುಮಾರ್, ಗುರುಮಲ್ಲೇಶ್, ಶ್ರೀನಿವಾಸ್, ಚಂದ್ರಶೇಖರ್, ಬಾಹುಬಲಿ, ಎಂ.ರಾಜಣ್ಣ, ಮಹೇಶ್‌ಸೇರಿ ಅನೇಕ ಶಿಕ್ಷಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ನೀರಿಗಾಗಿ ಬೇತಮಂಗಲ ಜನರ ಹಾಹಾಕಾರ
ಬಂಗಾರಪೇಟೆ: ದೇಶದಲ್ಲಿ ಪ್ರಥಮ ಬಾರಿಗೆ ನಳದಲ್ಲಿ ನೀರು ಹರಿದಿದ್ದು ಬೇತಮಂಗಲದಲ್ಲಿ ಎನ್ನುವ ಹೆಗ್ಗಳಿಕೆ ಪಡೆದಿದ್ದರೂ, ಇಂದು ಇಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿದೆ. ಬೇತಮಂಗಲ ಜಲಾಶಯಕ್ಕೆ ನಂದಿ ಬೆಟ್ಟದ ತಪ್ಪಲಿನಿಂದ ಮೊದಲ್ಗೊಂಡು ಸುಮಾರು 750 ಕೆರೆಗಳ ನೀರು ಬರುತ್ತಿತ್ತು ಎಂಬುದು ಈಗ ನೆನಪಾಗಿ ಉಳಿದಿದೆ. ಆಗ ಸಿಹಿ ನೀರು ಇಲ್ಲಿ ಸಿಗುತ್ತಿತ್ತು. ಬ್ರಿಟಿಷರು ಬೇತಮಂಗಲದಿಂದ ಕೆಜಿಎಫ್ ಮೈನಿಂಗ್ ಕಾಲೋನಿಗೆ ನೀರು ಹರಿಸುವ ಬೃಹತ್ ಯೋಜನೆಯನ್ನು ಸಿದ್ಧಪಡಿಸಿದ್ದರು. ಬ್ರಿಟನ್‌ನಿಂದ ಇದಕ್ಕಾಗಿ ಅತ್ಯಾಧುನಿಕ ಯಂತ್ರಗಳು ಆಮದಾಗಿದ್ದವು. 1900ರಲ್ಲಿ ಬೇತಮಂಗಲದಿಂದ ಕೆಜಿಎಫ್‌ಗೆ ಪೈಪ್‌ಲೈನ್ ಹಾಕುವ ಕಾರ್ಯ ಶುರುವಾಯಿತು. 1904ರಲ್ಲಿ ಪಂಪ್‌ಹೌಸ್ ಉದ್ಘಾಟನೆಯಾಯಿತು. ಆದರೆ ಇಂದು ಬೇತಮಂಗಲ ಜನತೆಗೆ ನೀರುಣಿಸುವ ಜಲಾಶಯ ಬತ್ತಿ ಹೋಗಿದೆ. ತಾಲೂಕಿನ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳು ಶೀಘ್ರವೇ ಇತ್ತ ಗಮನಹರಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವರೇ ಎನ್ನುವುದು ಜನರ ನಿರೀಕ್ಷೆಯಾಗಿದೆ.