ದೇಶಿ ಸಂಸ್ಕೃತಿ ಉಳಿವಿಗೆ ರಂಗಭೂಮಿ ಮಹತ್ತರ ಪಾತ್ರ
ಗುಡಿಬಂಡೆ: ರಂಗಭೂಮಿ ಕಲೆಗಳು ದೇಶಿ ಸಂಸ್ಕೃತಿಯನ್ನು ಉಳಿಸುವಲ್ಲಿ ಅಪಾರ ಪಾತ್ರ ವಹಿಸಿದೆ ಎಂದು ಜಿಪಂ ಸದಸ್ಯ ಅಶ್ವತ್ಥಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ 5 ದಿನಗಳ ಕಾಲ ಐಶ್ವರ್ಯ ಕಲಾನಿಕೇತನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನವದೆಹಲಿಯ ಸಂಸ್ಕೃತಿ ಸಚಿವಾಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕಲೆಗಳಾದ ಜಾನಪದ, ನಾಟಕ, ನೃತ್ಯ, ಭಜನೆ ಮೊದಲಾದವಗಳನ್ನು ಉಳಿಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ. ಸತತ 5 ವರ್ಷಗಳಿಂದ ರಂಗಭೂಮಿ ಸೇವೆಯನ್ನು ಮಾಡುತ್ತಾ ರಾಜ್ಯ ಮಟ್ಟದಲ್ಲಿ ಬೀಚಗಾನಹಳ್ಳಿ ಗ್ರಾಮಕ್ಕೆ ಕೀರ್ತಿಯನ್ನು ತಂದಿರುವ ಐಶ್ವರ್ಯ ಕಲಾನೀಕೇತನ ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಪ್ರಸನ್ನಕುಮಾರ್ ಸೇವೆ ಶ್ಲಾಘನೀಯ ಎಂದು ಅವರು ತಿಳಿಸಿದರು. ಬೀಚಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟನರಸಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ವೆಂಕಟರಾಯಪ್ಪ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್ ಮಾತನಾಡಿದರು.
ಮುಕ್ತಾಯ ಸಮಾರಂಭದ ನಂತರ 5ನೇ ದಿನ ಬೆಂಗಳೂರಿನ ರಂಗ ಶಿಖರದ ಕಲಾ ತಂಡದವರು ಮಧುಸೂಧನ್ ನಿರ್ದೇಶನದ 'ನನಗ್ಯಾಕೋ ಡೌಟು' ಹಾಸ್ಯ ಪ್ರಧಾನ ನಾಟಕವನ್ನು ಪ್ರದರ್ಶಿಸಿದರು.
ಐಶ್ವರ್ಯ ಕಲಾನೀಕೇತನ ತಂಡದ ಕಾರ್ಯದರ್ಶಿ ಜಿ.ವಿ.ಪ್ರಸನ್ನಕುಮಾರ್, ಅಧ್ಯಕ್ಷ ವಿಶ್ವನಾಥ್, ಸಿದ್ದಲಿಂಗಪ್ಪ, ಪಾಜೇಪಲ್ಲಿ ನಾಗರಾಜ, ಮಧುಸೂಧನ್, ತೇಜಸ್, ಸಿದ್ದಪ್ಪ, ಜಿ.ಆರ್.ಪ್ರಕಾಶ್ ಸೇರಿ ಅನೇಕರಿದ್ದರು.