ಮಹಿಳೆಯರ ಕಣ್ಮರೆ ಪ್ರಕರಣಗಳಿಗೆ ಕಡಿವಾಣ ಹಾಕಿ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮಹಿಳೆಯರು ಕಣ್ಮರೆಯಾಗುವಂತಹ ಪ್ರಕರಣಗಳು ಹೆಚ್ಚಿಗೆ ಸಂಭವಿಸುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಬಿಜೆಪಿ ಮೋರ್ಚಾ ಮಹಿಳಾ ಘಟಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಡಳಿತ ಭವನಕ್ಕೆ ತೆರಳಿದ ಮಹಿಳಾ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸತೀಶ್ ಕಟ್ಟಿರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿರುವುದರ ನಡುವೆ ಬೇರೆ ಬೇರೆ ಕಾರಣಗಳಿಗೆ ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ. ಇದರಲ್ಲಿ 10 ವರ್ಷ ವಯೋವಾನದಿಂದ ಹಿಡಿದು 30 ವರ್ಷ ವಯೋವಾನದವರೇ ಹೆಚ್ಚು. ಕೆಲವರು ಮಹಿಳೆಯರನ್ನ ವಂಚಿಸಿ ವೇಶ್ಯಾವಾಟಿಕೆ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಕಣ್ಮರೆಯಾದಾಗಿನಿಂದ ಇಲ್ಲಿವರೆಗೂ ತಮ್ಮವರು ಏನಾಗಿದ್ದಾರೆ ಎನ್ನುವುದು ತಿಳಿಯದೇ ಇಂದಿಗೂ ಕಣ್ಣೀರು ಸುರಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಮಹಿಳೆಯರು ಕಣ್ಮರೆಯಾಗುವಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಾಪತ್ತೆಯಾದವರನ್ನು ಪತ್ತೆ ಹಚ್ಚುವುದು. ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತಹುದು ನಡೆಯಬೇಕೆಂದರು.