ಸಾಲ ವಸೂಲಿ: ಅಧಿಕಾರಿಗಳಿಂದ ಕಿರುಕುಳ
ಕೋಲಾರ: ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗಾಗಿ ರೈತರ ಮನೆಗಳಿಗೆ ಹೋಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ರೈತ ಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ನೇತೃತ್ವದ ನಿಯೋಗ ಸೋಮವಾರ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಹೆಡ್ಮುನ್ಷಿ ಕೃಷ್ಣೇಗೌಡರಿಗೆ ಮನವಿ ಸಲ್ಲಿಸಿ ಜಿಲ್ಲೆ ಸುಮಾರು ಐದಾರು ವರ್ಷಗಳಿಂದ ನಿರಂತರವಾಗಿ ಬರಗಾಲಕ್ಕೆ ತುತ್ತಾಗಿದ್ದು, ರೈತರು ಹಾಕಿದ ಬೆಳೆಗಳು ಕೈಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬೇಡಿ, ಕಾಲಾವಕಾಶ ನೀಡಿ ಎಂದು ಸೂಚಿಸಿದ್ದರೂ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿಗೆ ರೈತರ ಮನೆಬಾಗಿಲಿಗೆ ಹೋಗಿ ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ರೈತರು ಅವಮಾನಕ್ಕೆ ಒಳಗಾಗುತ್ತಿದ್ದಾರೆ, ಒಂದು ವೇಳೆ ರೈತರು ಆತ್ಮಹತ್ಯೆ ದಾರಿ ಹಿಡಿದರೆ ಇದಕ್ಕೆ ನೇರ ಹೊಣೆ ಬ್ಯಾಂಕ್ ಅಧಿಕಾರಗಳದ್ದೇ ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯನ್ನು ರಾಜ್ಯ ಸರ್ಕಾರ 4 ವರ್ಷಗಳಿಂದ ಬರಗಾಲ ಪ್ರದೇಶವೆಂದು ಘೋಷಣೆ ಮಾಡುತ್ತಾ ಬಂದಿರುತ್ತದೆ. ಸರ್ಕಾರ ರೈತರ ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಬೇಕೆಂದು ಮತ್ತು ಒಂದು ವರ್ಷ ರೈತರ ಸಾಲ ವಸೂಲಿ ಮಾಡಬಾರದೆಂದು ಆದೇಶ ಮಾಡಿದ್ದರೂ, ಬ್ಯಾಂಕ್ ಅಧಿಕಾರಿಗಳು ರೈತರ ಮನೆಯ ಬಳಿಗೆ ಹೋಗಿ ಸಾಲ ವಸೂಲಿಗೆ ಒತ್ತಾಯ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾ ಆಡಳಿತ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸರ್ಕಾರದ ಆದೇಶ ಪಾಲಿಸುವಂತೆ ಸೂಚನೆ ನೀಡಬೇಕೆಂದು ನಿಯೋಗ ಆಗ್ರಹಿಸಿತು. ಮನವಿ ಸಲ್ಲಿಸುವಾಗ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಜಿಲ್ಲಾಧ್ಯಕ್ಷ ಕೊತ್ತಿಮೀರಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ರಾಮೇಗೌಡ, ಮುಖಂಡರಾದ ನಾರಾಯಣಸ್ವಾಮಿ, ಚಂದ್ರಪ್ಪ, ಹೇಮಂತ್, ಮುನಿರಾಜು, ನಾರಾಯಣಸ್ವಾಮಿ, ವೆಂಕಟೇಶ್, ಮುನಿಯಪ್ಪ, ರಾಜು, ಶಿವಕುಮಾರ್ ಇದ್ದರು.