ಆರೋಗ್ಯ ಕಾಪಾಡಿಕೊಳ್ಳಲು ಮೊದಲ ಆದ್ಯತೆ ನೀಡಿ
ಚಿಕ್ಕಬಳ್ಳಾಪುರ: ಪ್ರತಿಯೊಬ್ಬರು ಜೀವನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲ ಆದ್ಯತೆ ನೀಡಬೇಕೆಂದು ಶಾಸಕ ಡಾ. ಕೆ. ಸುಧಾಕರ್ ಸಲಹೆ ನೀಡಿದರು.
ತಾಲೂಕಿನ ಎಸ್. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ ಆಯುಷ್ ಇಲಾಖೆ ಹಾಗೂ ಎಫ್ಆರ್ಎಲ್ಎಚ್ಟಿ ಸಂಸ್ಥೆ ಸಹಯೋಗದೊಂದಿಗೆ ಕೈಗೊಂಡಿರುವ ಆಯುಷ್ ಗ್ರಾಮ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವೇ ಮಹಾಭಾಗ್ಯ. ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಒಳ್ಳೆಯ ಜೀವನ ನಡೆಸಲು ಸಾಧ್ಯ. ಆರೋಗ್ಯವಿಲ್ಲದಿದ್ದಾಗ ಬೇರೆ ಬೇರೆ ಸಂಪತ್ತುಗಳಿದ್ದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದ ಅವರು, ತಾಲ್ಲೂಕಿನ ಗಡಿಭಾಗವಾಗಿರುವ ಎಸ್. ಗೊಲ್ಲಹಳ್ಳಿಯಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಆಯುಷ್ ಗ್ರಾಮ ಯೋಜನೆಯನ್ನು ಜಾರಿಗೆ ತಂದಿದ್ದು ರಾಜ್ಯದಲ್ಲಿ ಕೇವಲ 11 ಗ್ರಾ.ಪಂ.ಗಳಿಗೆ ಮೀಸಲಿದ್ದ ಈ ಯೋಜನೆಗೆ ತಾಲೂಕಿನಲ್ಲಿ ಈ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ ಎಂದರು.
ಈ ಯೋಜನೆಯಲ್ಲಿ ಮೂರು ವರ್ಷ ಅವಧಿಗೆ ಒಟ್ಟು 1 ಕೋಟಿ ರು. ಮೊತ್ತದಲ್ಲಿ ಆಯುರ್ವೇದ ಚಿಕಿತ್ಸೆ, ಔಷಧ ವಿತರಣೆ, ಜನ ಜಾಗೃತಿ, ಯೋಗ, ಪ್ರಾಣಾಯಾಮದ ಪರಿಚಯ ಇತ್ಯಾದಿ ಮಹತ್ವಪೂರ್ಣ ಕಾರ್ಯಕ್ರಮಗಳ ಜೊತೆಗೆ ಗಿಡಮೂಲಿಕೆ ಔಷಧಗಳನ್ನು ಬೆಳೆಯುವ ಕೆಲಸ ಮಾಡಲಾಗುವುದು ಎಂದ ಅವರು, ಅಮೇರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳು ಇಂದು ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದವನ್ನು ಅವಲಂಬಿಸುತ್ತಿವೆ. ಇದೇ ನಿಟ್ಟಿನಲ್ಲಿ ರಾಜ್ಯದಲ್ಲೂ ಇದನ್ನು ಅಳವಡಿಸುವ ಉದ್ದೇಶದಿಂದ ಸರ್ಕಾರ ಆಯುಷ್ ಗ್ರಾಮ ಯೋಜನೆಯನ್ನು ಕೈಗೊಂಡಿದೆ ಎಂದರು.
ಅಚಾತುರ್ಯದಿಂದ ಬರುವ ಅನೇಕ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಶುದ್ಧ ಕುಡಿಯುವ ನೀರು, ಪರಶುದ್ಧ ಗಾಳಿ ಇಂದು ಎಲ್ಲೂ ಸಿಗುತ್ತಿಲ್ಲ. ಅದರಿಂದ ಇನ್ನಷ್ಟು ಜಾಗೃತಿಯನ್ನು ಆರೋಗ್ಯ ವಿಷಯದಲ್ಲಿ ಮಾಡಬೇಕಾದುದು ಅನಿವಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಹರಿರಾಮಮೂರ್ತಿ ಜಿ, ವೈದ್ಯಕೀಯ ಇಲಾಖೆಯ ನಿರ್ದೇಶಕ ಗಂಗಾಧರನ್ ಜಿ.ಜಿ, ಸಲಹೆಗಾರರಾದ ಡಾ. ಹರಿದಾಸನ್ ಕೆ. ಸ್ಥಳೀಯ ಮುಖಂಡರಾದ ಗವಿರಾಯಪ್ಪ, ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.