ಆರ್ಟಿಐ ಕಾರ್ಯಕರ್ತನ ಮೇಲೆ ಆ್ಯಸಿಡ್ ದಾಳಿ
ಮಾಲೂರು: ಆರ್ಟಿಎ ಕಾರ್ಯಕರ್ತರೊಬ್ಬರ ಮೇಲೆ ಅಪರಿಚಿತ ಯುವಕರ ತಂಡ ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಘಟನೆ ತಾಲೂಕಿನ ಶಿವಾರಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಿವಾರಪಟ್ಟಣ ವಾಸಿ ನಿವೃತ್ತ ಪೊಲೀಸ್ ದಪೇದಾರ್ ಎಸ್.ಎಂ. ಕೃಷ್ಣಪ್ಪ(74) ಆ್ಯಸಿಡ್ ದಾಳಿಗೆ ಒಳಗಾದವರು. ಗ್ರಾಮದ ವಿನಾಯಕ ದೇವಾಲಯದ ಬಳಿ ಅರ್ಚಕ ಜ್ಞಾನಲಿಂಗಚಾರಿ ಜತೆ ಮಾತನಾಡುತ್ತಿರುವಾಗ ಮೂವರು ಯುವಕರು ಪಲ್ಸರ್ ಬೈಕ್ನಲ್ಲಿ ಬಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಆ್ಯಸಿಡ್ ಬಿದ್ದು ಎಡಗಣ್ಣು ತೀವ್ರ ಹಾನಿಯಾಗಿರುವ ಕೃಷ್ಣಪ್ಪರನ್ನು ಸ್ಥಳೀಯ ಆಸ್ವತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ.
ನಿವೃತ್ತಿ ನಂತರ ಗ್ರಾಮದಲ್ಲಿದ್ದ ಕೃಷ್ಣಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರುಳು ಗಣಿಗಾರಿಕೆ, ಪಂಚಾಯ್ತಿ ಅವ್ಯವಹಾರಗಳ ಬಗ್ಗೆ ಆರ್ಟಿಐ ಮೂಲಕ ವಿವರಣೆ ಕೇಳುತ್ತಿದ್ದರು. ಇವರ ಪ್ರಯತ್ನದಿಂದ ಇತ್ತೀಚೆಗೆ ಪಂಚಾಯ್ತಿಯ ರಾಮೇನಹಳ್ಳಿ, ಶಿವಾರ ಪಟ್ಟಣದ ಕೆರೆಗಳಲ್ಲಿ ನಡೆಯುತ್ತಿದ್ದ ಫಿಲ್ಟರ್ ಮರಳು ಮಾಫಿಯಾ ಮೇಲೆ ದಾಳಿ ನಡೆದಿತ್ತು. ಇದಲ್ಲದೇ ಪಂಚಾಯ್ತಿಯಲ್ಲಿ ಖಾತ್ರಿ ಯೋಜನೆಯ ಅವ್ಯವಹಾರಗಳ ಬಗ್ಗೆ ವಿವರಣೆ ಕೇಳುತ್ತಿದ್ದರು ಈ ಸಂಬಂಧ ತನ್ನ ತಂದೆಯ ಮೇಲೆ ದಾಳಿ ಆಗಿರಬಹುದು ಎಂದು ಆ್ಯಸಿಡ್ ದಾಳಿಗೆ ಒಳಗಾಗಿರುವ ಕೃಷ್ಣಪ್ಪರವರ ಪುತ್ರ ಮುನೇಗೌಡ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.