ಎತ್ತಿನಹೊಳೆ ಯೋಜನೆ ಬಗ್ಗೆ ಅಪಸ್ವರ ಬೇಡ
ಬಂಗಾರಪೇಟೆ: ಬಯಲು ಸೀಮೆ ಜಿಲ್ಲೆಗಳಿಗೆ ಅನುಕೂಲವಾಗುವ ಎತ್ತಿನಹೊಳೆ ಯೋಜನೆ ಬಗ್ಗೆ ಮಾಹಿತಿ ತಿಳಿಯದೆ ಕೆಲವರು ಬೀದಿಗಳಲ್ಲಿ ಅಪಸ್ವರ ಎತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದರು. ಕ್ಷೇತ್ರದಲ್ಲಿ 36.90 ಕೋಟಿ ರು.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಬಯಲುಸೀಮೆ ಜಿಲ್ಲೆಗಳಿಗೆ 24 ಟಿಎಂಸಿ ನೀರು ಲಭ್ಯವಾಗಲಿದೆ. ಅಲ್ಲದೆ ಸುಮಾರು 120 ಕೆರೆಗಳಿಗೆ ನೀರು ಹರಿದು ಅಂತರ್ಜಲ ವೃದ್ಧಿಯಾಗಲಿದೆ ಎಂದರು. ತಾಪಂ ಅಧ್ಯಕ್ಷ ರೇಣುಕಾ, ಜಿಪಂ ಸದಸ್ಯ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಪಿಚ್ಚಹಳ್ಳಿ ಗೋವಿಂದರಾಜು, ಎಂ.ಎಂ. ಮುನಿರಾಜು, ಎಸ್.ಎಂ. ಗೋಪಾಲ್, ರಾಮಪ್ಪ, ತಾಪಂ ಸದಸ್ಯ ಅಮರೇಶ್, ರಂಗನಾಥನಾಯ್ಡು, ಶೋಭ ವೆಂಕಟರಾಮರೆಡ್ಡಿ ಇದ್ದರು.
ಖಾಸಗಿ ಬಸ್ ಡಿಕ್ಕಿ: ವ್ಯಕ್ತಿ ಸಾವು
ಚಿಂತಾಮಣಿ: ರಸ್ತೆ ದಾಟುತ್ತಿರುವಾಗ ವ್ಯಕ್ತಿಯೊಬ್ಬರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿರುವ ಘಟನೆ ನಗರದ ಚೇಳೂರು ವೃತ್ತದಲ್ಲಿ ನಡೆದಿದೆ. ನಗರದ ಚೇಳೂರು ವೃತ್ತದ ಬಳಿ ಜಿಟಿಆರ್ ಖಾಸಗಿ ಬಸ್ ತಾಲೂಕಿನ ಗುಡಮಾರ್ಲಹಳ್ಳಿ ಗ್ರಾಮದ ನರಸಿಂಹಪ್ಪ(35) ಎಂಬಾತನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.