ಕನ್ನಡ ಹಬ್ಬ ನಿರಂತರವಾಗಿ ನಡೆಯಲಿ
ಶಿಡ್ಲಘಟ್ಟ: ಸಾಹಿತ್ಯ ಸಮ್ಮೇಳನ ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಶಾಸಕ ರಾಜಣ್ಣ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪ್ರತಿ ತಾಲೂಕಿನಲ್ಲಿಯೂ ಹೋಬಳಿ ಮಟ್ಟದಲ್ಲಿ ಸಮ್ಮೇಳನ ಮಾಡುವ ಅವಶ್ಯಕತೆ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್ ಮಾತನಾಡಿ, 2015ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಶತಮಾನೂತ್ಸವ ಪೂರ್ತಿಗೂಳಿಸುತ್ತಿದ್ದು ಮುಂದಿನ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಸರ್ಕಾರ ನಿರ್ಧರಿಸಿದ್ದು ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ. ಸತ್ಯನಾರಾಯಣ ರಾವ್ ಮಾತನಾಡಿ, ಕನ್ನಡವನ್ನು ಬಿಟ್ಟು ತಂದೆ ತಾಯಂದಿರು ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸಲು ಮುಂದಾಗುತ್ತಿದ್ದು, ಮಕ್ಕಳಿಗೆ ಚಿಕ್ಕಂದಿನಿಂದಲೇ ಕನ್ನಡ ಭಾಷೆಯನ್ನು ಕಲಿಸುವುದರ ಮೂಲಕ ತಾಯಿ ಭಾಷೆಯಾದ ಕನ್ನಡ ಮೇಲೆ ಅಬಿಮಾನ ಬೆಳೆಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ 'ಸಿಡಿಲ ದಾರೆ' ಪುಸ್ತಕವನ್ನು ಸಮೇಳನಾಧ್ಯಕ್ಷ ಡಾ. ಸತ್ಯನಾರಾಯಣರಾವ್ ಬಿಡುಗಡೆ ಮಾಡಿದರು.
ಪಟ್ಟಣದ ಎಲ್ಲ ಶಿಕ್ಷಕರು, ಅಧಿಕಾರಿಗಳನ್ನು ಬಿಟ್ಟರೆ ಸಾರ್ವಜನಿಕರು ಬೆರಳೆಣಿಕೆಯಷ್ಟು ಮಾತ್ರ ಇದ್ದು, ಕುರ್ಚಿಗಳು ಬಹುತೇಕ ಖಾಲಿಯಾಗಿದ್ದವು.
ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥ ರೆಡ್ಡಿ, ಕಸಪ ತಾಲೂಕು ಅಧ್ಯಕ್ಷ ವಿ. ಕೃಷ್ಣ, ರೂಪಸಿ ರಮೇಶ್ ಇದ್ದರು.
ಆಯ್ಕೆಗೆ ಖಂಡನೆ
ಶಿಡ್ಲಘಟ್ಟ: ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸಮ್ಮೇಳನಾಧ್ಯಕ್ಷರ ಆಯ್ಕೆ ಖಂಡಿಸಲಾಯಿತು. ತಾಲೂಕಿನ 4ನೇ ಕನ್ನಡ ಸಾಹಿತ್ಯ ಪರಿಷತ್ ಮಾ.4 ರಂದು ನಡೆಯಲ್ಲಿದ್ದು, ಸಮ್ಮೇಲನಾಧ್ಯಕ್ಷರನ್ನಾಗಿ ಡಾ. ಸತ್ಯನಾರಾಯಣರಾವ್ರನ್ನು ಆಯ್ಕೆ ಮಾಡಿರುವ ಕ್ರಮವನ್ನು ಖಂಡಿಸಿದ್ದಾರೆ. ತಾಲ್ಲೂಕಿನಲ್ಲಿ ಸಾಹಿತ್ಯ ಸಾಮಾಜಿಕ ಸೇವೆ, ಜನಪರ ಹೋರಾಟಗಳಲ್ಲಿ ಹೆಸರಾಗಿರುವ ನಾಡೋಜ ಪ್ರಶಸ್ತಿ ಪುರಸ್ಕೃತರು ಪಿಂಡಪಾನಹಳ್ಳಿ ಮುನಿ ವೆಂಕಟಪ್ಪ, ಖಂಡೇರಾವ್, ಆನಂದರಾವ್, ಡಿ.ಜಿ ಮಲ್ಲಿಕಾರ್ಜುನ(ರಾಷ್ಟ್ರ ಪ್ರಶಸ್ತಿ ವಿಜೇತರು), ರೂಪಸಿ ರಮೇಶ್ ಇಂತಹವರನ್ನು ಕಡೆಗಣಿಸಿ ಯಾವುದೇ ಕ್ಷೇತ್ರದಲ್ಲಿ ಸಾಮಾಜಿಕ ಸೇವೆ ಮಾಡದಿರುವವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಶಿಡ್ಲಘಟ್ಟ ಚುಟುಕು ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ. ಇನ್ನು ಮುಂದೆ ಇಂತಹ ತೀರ್ಮಾನ ತೆಗೆದುಕೊಳ್ಳುವಾಗ ಸಂಘ ಸಂಸ್ಥೆಗಳ ಸಲಹೆ ಸೂಚನೆ ಪಡೆಯಬೇಕೆಂದು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ದೇವರಾಜ್, ಅಧ್ಯಕ್ಷ ಈದರೆ ತಿರುಮಲ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಈಶ್ವರ್ಸಿಂಗ್, ಮಹಿಳಾ ಪ್ರತಿನಿಧಿಗಳಾದ ದಾಕ್ಷಾಯಿಣಿ, ಸರಸ್ವತಮ್ಮ ಹಾಗೂ ಸಂಘದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಮ್ಮೇಳನದಲ್ಲಿ ರಾಜಕೀಯ
ಶಿಡ್ಲಘಟ್ಟ: ತಾಲೂಕಿನ 4 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ಬಸ್ ನಿಲ್ದಾಣದಿಂದ ಪ್ರಾರಂಭ ಮಾಡಿದ್ದು, ಸಮ್ಮೇಳನಾಧ್ಯಕ್ಷರ ವಾಹನದಲ್ಲಿ ಶಾಸಕ ರಾಜಣ್ಣ ಹೊರಟ್ಟಿದ್ದು, ಕಸಪ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಯಿತು. ಸಮ್ಮೇಳನಾಧ್ಯಕ್ಷರ ವಾಹನದಲ್ಲಿ ಕಸಪ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರನ್ನು ಬಿಟ್ಟರೆ ರಾಜಕೀಯ ವ್ಯಕ್ತಿಗಳು ಭಾಗವಹಿಸುವಂತಿಲ್ಲ. ಹಾಗಿದ್ದರೂ ಶಾಸಕ ರಾಜಣ್ಣ ಸಮ್ಮೇಳನಾಧ್ಯಕ್ಷರ ವಾಹನದಲ್ಲಿ ಭಾಗವಹಿಸಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಕಾರಣಕ್ಕಾಗಿ ಶಾಸಕರು ವಾಹನ ಇಳಿದ ಮೇಲೆ ಮೆರವಣಿಗೆ ಹೊರಟಿತು. ಸಾಹಿತ್ಯ ಸಮ್ಮೇಳನದಲ್ಲಿ ಶಾಲಾ ಮಕ್ಕಳು, ಡೊಳ್ಳು ಕುಣಿತ, ಗಾರಡಿ ಗೊಂಬೆಗಳು, ಕಸಪ ಕಾರ್ಯಕರ್ತರು ಬಿಟ್ಟರೆ ಸಾರ್ವಜನಿಕರು ಭಾಗವಹಿಸಿಲ್ಲ.
ಧ್ವಜಾರೋಹಣ
ಶಿಡ್ಲಘಟ್ಟ: ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಯಶಸ್ವಿಯಾಗಿ ನಡೆಯಿತು. ಪ್ರಧಾನ ನ್ಯಾಯಾದೀಶರಾದ ಎಸ್. ಮಹೇಶ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಾಡ ಧ್ವಜವನ್ನು ತಹಸೀಲ್ದಾರ್ ನಾರಾಯಣಸ್ವಾಮಿ ಹಾಗೂ ಕ.ಸ.ಪ ಧ್ವಜವನ್ನು ತಾಲೂಕು ಕ.ಸ.ಪ ಅಧ್ಯಕ್ಷ ಬಿ. ಕೃಷ್ಣ ನೆರವೇರಿಸಿದರು.ಪ್ರಧಾನ ನ್ಯಾಯಾಧೀಶ ಎಸ್. ಮಹೇಶ್ ಮಾತನಾಡಿ, ಕನ್ನಡ ಭಾರತೀಯ ಭಾಷೆಗಳಲ್ಲಿಯೇ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, 8 ಮಂದಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ಎಂದರು.