ಕಲ್ಯಾಣಿಗಳ ನಿರ್ಲಕ್ಷಿಸಿದರೆ ಜೋಕೆ: ಅಧಿಕಾರಿಗಳಿಗೆ ಡಿಸಿ ರವಿ ಎಚ್ಚರಿಕೆ
ಕೋಲಾರ: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಕೈಗೆತ್ತಿಕೊಂಡಿರುವ ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ಕೆ ಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ, ಕಲ್ಯಾಣಿಗಳ ಅಭಿವೃದ್ಧಿಗೆ ಗಮನ ನೀಡದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ, ಸರ್ಕಾರದ ಆದೇಶಗಳನ್ನು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ದ ದೂರು ದಾಖಲಿಸುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ಎಚ್ಚರಿಕೆ ನೀಡಿದ ಪ್ರಸಂಗ ಕೆಡಿಪಿ ಸಭೆಯಲ್ಲಿ ನಡೆಯಿತು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಕಲ್ಯಾಣಿಗಳ ಪುನಶ್ಚೇತನಗೊಳ್ಳದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಅಧಿಕಾರಿಗಳು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಜಿಲ್ಲೆಯಾದ್ಯಂತ ಶ್ರಮದಾನದ ಮೂಲಕ ಸುಮಾರು 150ಕ್ಕೂ ಹೆಚ್ಚು ಕಲ್ಯಾಣಿಗಳ ಪುನಶ್ಚೇತನ ಕಾರ್ಯ ನಡೆದಿದೆ. ಇದರಿಂದ ಅಂತರ್ಜಲ ಮಟ್ಟ ಸ್ವಲ್ಪ ಹೆಚ್ಚಳವಾಗಿದೆ. ಬಾಕಿ ಇರುವ ಕಲ್ಯಾಣಿಗಳ ಕಾಮಗಾರಿಗೆ ಕಾರ್ಯಕ್ರಮ ರೂಪಿಸಿದ್ದರೂ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಅಸಮಾಧಾನಕ್ಕೆ ತುಪ್ಪ ಸುರಿದ ಶಾಸಕ ಕೆ.ಆರ್. ರಮೇಶ್ಕುಮಾರ್, ಜಿಲ್ಲೆಯಲ್ಲಿ ಎಷ್ಟು ಕಲ್ಯಾಣಿಗಳಿವೆ ಎಂಬುದೇ ಅಧಿಕಾರಿಗಳಿಗೆ ತಿಳಿದಂತೆ ಕಾಣುತ್ತಿಲ್ಲ. ಕೋಲಾರ ತಾಲೂಕಿನ ನೆನುಮನಹಳ್ಳಿಯಲ್ಲಿ ಇರುವ ಕಲ್ಯಾಣಿಯನ್ನು ಅದಿಕಾರಿಗಳು ನೋಡಿಯೇ ಇಲ್ಲ, ಇದೇ ರೀತಿ ವಾನರಾಶಿಯಲ್ಲಿನ ಕಲ್ಯಾಣಿಯ ಬಗ್ಗೆಯೂ ಗಮನ ನೀಡಿಲ್ಲ. ಸ್ವತಃ ಜಿಲ್ಲಾಧಿಕಾರಿಗಳೇ ಸ್ಥಳ ಪರಿಶೀಲಿಸಿ ಕಲ್ಯಾಣಿಗಳ ಪುನಶ್ಚೇತನಕ್ಕೆ ಸೂಚನೆ ನೀಡಿದ್ದರೂ ಕೆಲಸವಾಗಿಲ್ಲವೆಂದು ದೂರಿದರು.
ಎಲ್ಲ ಕಲ್ಯಾಣಿಗಳ ಪುನಶ್ಚೇತನ ಮಾಡುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದೇವೆ. ಈಗ ನಿರ್ಲಕ್ಷ್ಯ ವಹಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಆಯಾ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಪಂ ಇಒಗಳು ಕಲ್ಯಾಣಿಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಾಗಿತ್ತು. ಉದಾಸೀನ ಇದೇ ರೀತಿ ಮುಂದುವರದರೆ ಅಧಿಕಾರಿಗಳ ವಿರುದ್ಧ ನಾನೇ ಕೇಸ್ ದಾಖಲು ಮಾಡುವೆ ಎಂದು ಜಿಲ್ಲಾಧಿಕಾರಿ ಹೇಳಿದಾಗ, ಅದೇ ರೀತಿ ಮಾಡುವುದೇ ಸೂಕ್ತವೆಂದು ಶಾಸಕ ರಮೇಶ್ಕುಮಾರ್ ದನಿಗೂಡಿಸಿದರು.
ಕೆರೆ ಒತ್ತುವರಿ ತೆರವಿಗೆ ಸೂಚನೆ: ಸರ್ಕಾರ ಶೀಘ್ರವೇ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಿದೆ. ಎತ್ತಿನ ಹೊಳೆ ಯೋಜನೆ ಅನುಷ್ಟಾನಕ್ಕೆ ಶಂಕುಸ್ಥಾಪನೆ ಆಗಿದೆ. ಮುಂದಿನ ಮಳೆಗಾಲದ ಹೊತ್ತಿಗೆ ಕೆರೆ,ಕಲ್ಯಾಣಿಗಳಲ್ಲಿ ನೀರು ಶೇಖರಣೆ ಆಗುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವೆಂದು ಶಾಸಕ ರಮೇಶ್ಬ ಕುಮಾರ್ ತಿಳಿಸಿದರು.
ಕೋಡಿಕಣ್ಣೂರು, ಮುದುವಾಡಿ ಕೆರೆ ಸುತ್ತಮುತ್ತ ನೀಲಗಿರಿ, ಬಳ್ಳಾರಿ ಜಾಲಿ ಬೆಳೆದಿದೆ. ಅವುಗಳನ್ನು ತೆರೆವುಗೊಳಿಸಿ, ಒತ್ತುವರಿಯಾಗಿದ್ದಲ್ಲಿ ಸರ್ವೇ ನಡೆಸಿ ತೆರವು ಮಾಡಿದರೆ ಜನತೆಗೆ ಸಂದೇಶ ರವಾನಿಸಿದಂತಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಸರ್ವೇಯರ್ಗಳ ಕೊರತೆ ಇದ್ದು, ಚುನಾವಣೆ ಮುಗಿಯುವರೆಗೆ ಸರ್ವೇಯರ್ಗಳು ಲಭ್ಯವಾಗುವುದು ಕಷ್ಟ. ಚುನಾವಣೆ ಮುಗಿದ ನಂತರ ಕೆರೆ ಒತ್ತುವರಿ ತೆರವು ಕಾರ್ಯ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಬೇಸಿಗೆಯ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಎಚ್ಚರ ವಹಿಸಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಎಲ್ಲ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ಶುದ್ಧವಾದ ನೀರು ಸರಬರಾಜು ಮಾಡಬೇಕೆಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೈಗೊಂಡ ಕ್ರಮದ ಬಗ್ಗೆ ಜಿ.ಪಂ.ಇಇ ದೇವರಾಜ್ ನೀಡಿದ ಮಾಹಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಅಕ್ಷೇಪ ವ್ಯಕ್ತಪಡಿಸಿ, ಮಾಹಿತಿ ಸೂಕ್ತವಾಗಿಲ್ಲವೆಂದು ತಿಳಿಸಿದರು.ಜಿ.ಪಂ, ಸಿಇಒ ವಿನೋತ್ ಅವರಿಗೂ ದೇವರಾಜ್ ನೀಡಿದ ಮಾಹಿತಿ ಅರ್ಥವಾಗಲಿಲ್ಲ, ಸಭೆಯ ನಡವಳಿಯನ್ನು ಸಚಿವರು ಮೌನವಾಗಿ ಆಲಿಸುವಂತಾಯಿತು. ಪರಿಸ್ಥಿತಿ ಅರಿತ ಶಾಸಕ ರಮೇಶ್ಕುಮಾರ್ ಎಲ್ಲ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಗೊಂದಲ ನಿವಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ತ್ವರಿತವಾಗಿ ನಿವಾರಿಸಲು ಇತ್ತೀಚೆಗೆ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ನೀಡಿರುವ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳನ್ನು ಅಮಾನತುಮಾಡುವಂತೆ ಶಾಸಕರು ಸಲಹೆ ನೀಡಿದರು.
ಕೆಜಿಎಫ್ನಲ್ಲಿ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಇದೆ. 2 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಎಂದು ಶಾಸಕಿ ವೈ. ರಾಮಕ್ಕ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಜಿ.ಪಂ. ಅಧ್ಯಕ್ಷ ಆರ್.ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ಜಿ.ಪಂ. ಸಿಇಒ ಆರ್.ವಿನೂತ್ ಪ್ರತಿಯಾ ಸಭೆಯಲ್ಲಿದ್ದರು.