ಕಲ್ಲು ಗಣಿಗಳಲ್ಲಿ ಜಲಪಾತ ಖಾದರ್ ಪರಿಶೀಲನೆ
ಕೋಲಾರ: ತಾಲೂಕಿನ ಅರಾಭಿಕೊತ್ತನೂರು ಸಮೀಪದ ಕಲ್ಲಿನ ಕ್ವಾರೆಗಳಲ್ಲಿ ಉತ್ಖನನವಾಗಿರುವ ಜಲರಾಶಿಯನ್ನು ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸಬಹುದೇ ಎಂಬುದರ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅರಾಭಿಕೊತ್ತನೂರು-ಗುಡ್ಡನಪುರದ ಸರ್ವೇ ನಂ 152 ರಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಲ್ಯಾಂಕೋ ಕಂಪನಿ ಜಲ್ಲಿ ತಯಾರಿಕೆಗಾಗಿ ಕೊರೆದಿದ್ದ ಈ ಕ್ವಾರೆಗಳು ಸುಮಾರು 60 ಅಡಿ ಆಳದಲ್ಲಿದ್ದು, ಅಲ್ಲಿ ವಿಶಾಲವಾದ ಬಯಲು ಸಹಾ ನಿರ್ಮಾಣವಾಗಿದೆ. ಈ ಬಯಲಿಗೆ ಹೊಂದಿಕೊಂಡಂತೆ ಸುಮಾರು 80 ಅಡಿಗಳಿಗೂ ಹೆಚ್ಚು ಆಳ ನೀರಿನ ಸಂಗ್ರಹವಾಗಿದ್ದು, ಈ ನೀರನ್ನು ಕುಡಿಯುವ ನೀರಿಗೆ ಬಳಸುವ ಆಲೋಚನೆಗೆ ಇದೀಗ ಒತ್ತು ನೀಡಲಾಗುತ್ತಿದೆ. ಕಲ್ಲು ಕ್ವಾರೆಯಲ್ಲಿ ನೈಸರ್ಗಿಕವಾಗಿ ನೀರು ಕಾಣಿಸಿಕೊಂಡು ಜಲಕ್ರೀಡೆಗೆ ಬಳಕೆ ಆಗುತ್ತಿದೆ. ಈಗಾಗಲೇ ಇಲ್ಲಿ ಕೆಲವರು ನೀರಿನಲ್ಲಿ ಮುಳಗಿ ಸತ್ತಿದ್ದಾರೆ. ಜಲರಾಶಿಯ ಬಗ್ಗೆ ಕಳೆದ ವರ್ಷ ಕನ್ನಡಪ್ರಭ ವಿಶೇಷ ವರದಿ ಮೂಲಕ ಬೆಳಕು ಚೆಲ್ಲಿತ್ತು.
ರೇಲ್ವೆ ಕೋಚ್ ಕಾರ್ಖಾನೆಗೆ ಇಂದು ಶಂಕು
ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿಯ ಯದರೂರು ಗ್ರಾಮದ ಬಳಿ ರೇಲ್ವೆ ಕೋಚ್ ಕಾರ್ಖಾನೆ ಶಂಕುಸ್ಥಾಪನೆ 5 ರಂದು ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ. ಶಾಸಕ ಕೆ.ಆರ್. ರಮೇಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಸೂರ್ಯಪ್ರಕಾಶ್ರೆಡ್ಡಿ, ಆದೀರ್ ರಂಜನ್ ಚೌದರಿ, ರಾಜ್ಯ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಸಚಿವ ಆಗಮಿಸಲಿದ್ದಾರೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದ್ದಾರೆ.
ರಸ್ತೆ ಕಾಮಗಾರಿಗೆ ಚಾಲನೆ
ಟೇಕಲ್: ಆನಿಮಿಟ್ಟಿಗಾನಹಳ್ಳಿ ಹಾಗೂ ದಿನ್ನಹಳ್ಳಿಯ ಹೊಸ ಮನೆಗಳ ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 8 ಕೋಟಿ ಅಂದಾಜು ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುತ್ತಿರುವುದಕ್ಕೆ ಶಾಸಕರನ್ನು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಅಭಿನಂದಿಸಿದರು. ಶಾಸಕರ ಗೈರಿನಲ್ಲಿ ರಸ್ತೆ ಕಾಮಗಾರಿಗೆ ಕೆ.ವೈ.ನಂಜೇಗೌಡರು ಚಾಲನೆ ನೀಡಿ ಮಾತನಾಡಿ, ಕಾಮಗಾರಿಗೆ ಪಕ್ಷ ಭೇದ ಮರೆತು ಸಹಕರಿಸಬೇಕೆಂದು, ಇದರಿಂದ ಒಟ್ಟು 14 ಕಿ.ಮೀ. ರಸ್ತೆ ಗಡಿಭಾಗದಲ್ಲಿ ಬಹಳಷ್ಟು ಉಪಯುಕ್ತವಾಗುತ್ತದೆ ಎಂದರು. ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳು ಶಾಸಕರು ಮಾಡಿಕೊಡಬೇಕೆಂದು ಕಾರ್ಯಕ್ರಮಕ್ಕೆ ಬಂದಿದ್ದರೆ ಶಾಸಕರ ಬಳಿ ಮನವಿ ಮಾಡಲಾಗುತ್ತಿತ್ತೆಂದು ತಿಳಿಸಿದರು.
ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಪ್ರತಿಭಟನೆ
ಬಂಗಾರಪೇಟೆ: ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಇಲ್ಲಿನ ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ ಅವರ ಭೂತ ದಹನ ಮಾಡಿದರು. ಸಚಿವರಾದ ಸಲ್ಮಾನ್ ಖುರ್ಷಿದ್ ಅವರು ಮುಂದಿನ ಪ್ರಧಾನಿ ಅಭ್ಯರ್ಥಿಯೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಘನತೆಗೆ ಅವರೇ ದಕ್ಕೆ ತಂದಿದ್ದಾರೆ. ಇಂತಹ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಪುರಸಭೆ ಬಸ್ ನಿಲ್ದಾಣದಲ್ಲಿ ಅರ್ಧ ಗಂಟೆ ಪ್ರತಿಭಟನೆ ಮಾಡಿ ನಂತರ ಸಚಿವರ ಭೂತ ದಹನ ಮಾಡಿದರು. ಪಕ್ಷದ ತಾಲೂಕು ಅಧ್ಯಕ್ಷ ಮಾರ್ಕಂಡೇಗೌಡ, ನಗರ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಪ್ರಭಾಕರ್, ವಿಜಯಲಕ್ಷ್ಮೀ, ಶಶಿಕುಮಾರ್, ಲಕ್ಷ್ಮಣ್ಗೌಡ, ಮುದ್ದೇಗೌಡ ಇದ್ದರು.
ಸಚಿವ ಖಾದರ್ ರಾಜಿನಾಮೆಗೆ ಒತ್ತಾಯ
ಕೋಲಾರ: ರಾಜ್ಯದ ಬಯಲುಸೀಮೆಗೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಸಣಷ್ಟಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಚಿವರ ಬೂತದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು ಪರಮಶಿವಯ್ಯ ಮತ್ತು ಎತ್ತಿನ ಹೊಳೆಯ ಯೋಜನೆ ಕುರಿತು ಸಂಪೂರ್ಣವಾಗಿ ಅರಿಯದೇ ದಕ್ಷಿಣ ಕನ್ನಡ ಜಿಲ್ಲೆಯವರು ವಿರೋಧಿಸುತ್ತಿದ್ದು, ಅವರಿಗೆ ಈ ಯೋಜನೆಯ ಕುರಿತು ತಿಳುವಳಿಕೆ ಮೂಡಿಸುವುದನ್ನು ಬಿಟ್ಟು ಸಚಿವ ಯು.ಟಿ.ಖಾದರ್ ರವರು ಯೋಜನೆಯನ್ನು ವಿರೋಧಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನೆಯಲ್ಲಿ ಗಾಂಧಿನಗರ ನಾರಾಯಣಸ್ವಾಮಿ, ವಿ. ಗೀತಾ, ಟಿ.ಎಂ. ವೆಂಕಟೇಶ್, ಹೆಚೆ.ಎಂ. ಯಲ್ಲಪ್ಪ, ಎನ್.ಎನ್. ಶ್ರೀರಾಮ್, ಕೃಷ್ಣ, ಗಂಗಮ್ಮ, ನಾರಾಯಣರೆಡ್ಡಿ, ಪಿ.ವಿ.ರಮಣ, ಅಮರೇಶ್ ಇದ್ದರು.
ತಹಸೀಲ್ದಾರ್ ದಾಳಿ; ಅಕ್ರಮ ಮರಳು ವಶ
ಗೌರಿಬಿದನೂರು: ಪಟ್ಟಣದ ಕರೇಕಲ್ಲಹಳ್ಳಿ ನದಿಯ ವ್ಯಾಪ್ತಿಯಲ್ಲಿ ಸುಮಾರು 8 ಲಾರಿಗಳಿಗೂ ಹೆಚ್ಚು ಅಕ್ರಮ ಮರಳು ಸಂಗ್ರಹ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಡಾ.ಎನ್. ಭಾಸ್ಕರ್ರವರು ದಿಡೀರ್ ದಾಳಿ ನಡೆಸಿ ಅಕ್ರಮ ಮರಳನ್ನು ವಶಕ್ಕೆ ಪಡೆದರುರು. ರೈತ ಮುಖಂಡರು ನೀಡಿದ ಖಚಿತ ಮಾಹಿತಿ ಮೇರೆಗೆ ಮಂಗಳವಾರ ತಮ್ಮ ಸಿಬ್ಬಂದಿಯೊಂದಿಗೆ ಕರೇಕಲ್ಲಹಳ್ಳಿ ನದಿಯ ವ್ಯಾಪ್ತಿಯ ಖಾಸಗೀ ಜಮೀನಿನಲ್ಲಿ ಮರಳು ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಮರಳನ್ನು ವಶಕ್ಕೆಪಡೆದು ಹೆಚ್ಚಿನ ತನಿಖೆಗಾಗಿ ಗಣಿ ಮತ್ತು ಭೂ ಇಲಾಖೆ ಅಧಿಕಾರಿಗೆ ಆದೇಶ ಮಾಡಿದರು. ದಾಳಿಯಲ್ಲಿ ರೈತ ಮುಖಂಡ ಲೋಕೇಶ್ಗೌಡ, ಹಿರೇಬಿದನೂರು ರಾಜು, ಶಿವಣ್ಣ ಮತ್ತು ಎಎಸ್ಐ ಅಶ್ವತ್ಥಪ್ಪ ಇದ್ದರು.
6 ರಿಂದ ಡಿವೈಎಫ್ಐ ರಾಜ್ಯ ಸಮ್ಮೇಳನ
ಚಿಂತಾಮಣಿ: ಭ್ರಷ್ಟಾಚಾರ, ನಿರುದ್ಯೋಗ, ಶಿಕ್ಷಣದ ವ್ಯಾಪಾರ, ಬೆಲೆ ಏರಿಕೆ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿ 10 ನೇ ರಾಜ್ಯ ಯುವಜನ ಸಮ್ಮೇಳನವನ್ನು ಗದಗನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಾಲೂಕು ಭಾರತ ಪ್ರಜಾಸಾತ್ಮಕ ಯುವಜನ ಫೆಡರೇಷನ್ ಅಧ್ಯಕ್ಷ ಕೃಷ್ಣಾರೆಡ್ಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.6 ರಿಂದ 8 ರವರೆಗೂ 10 ನೇ ರಾಜ್ಯ ಯುವಜನ ಸಮ್ಮೇಳನ ಗದಗ್ನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಫ್ಐ ಕಾರ್ಯದರ್ಶಿ ನರಸಿಂಹಪ್ಪ, ಶ್ರೀನಿವಾಸ್ ಯಾದವ್, ರಾಮು, ಚಂದ್ರ, ಶಿವ ಇದ್ದರು.