ನಾಳೆ ಜಿಲ್ಲಾ ಪರಿಸರ ಸ್ನೇಹಿ ಶಾಲೆಗಳಿಗೆ ಪ್ರಶಸ್ತಿ ಪ್ರದಾನ
ಚಿಕ್ಕಬಳ್ಳಾಪುರ: ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಮಾ.6 ರಂದು ಬೆಳಿಗ್ಗೆ 10 ಗಂಟೆಗೆ 2013-14 ನೇ ಸಾಲಿನ ಜಿಲ್ಲಾ ಪರಿಸರ ಸ್ನೇಹಿ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕಾರ್ಯಕ್ರಮವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಬೆಂಗಳೂರು ಪೂರ್ವ ವಲಯದ ಹಿರಿಯ ಪರಿಸರ ಅಧಿಕಾರಿ ಎಂ.ಕೆ. ಪ್ರಭುದೇವ್ ವಹಿಸಲಿದ್ದಾರೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ನನಸಾದ-ಕನಸು ಪುಸ್ತಕವನ್ನು ಬಿಡುಗಡೆ ಮಾಡುವರು. ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್, ಡಿಡಿಪಿಯು ಎ.ಅಜಿತ್ ಪ್ರಸಾದ್, ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಎ.ಎಸ್. ಚಂದ್ರಶೇಖರ್, ಗ್ರೀನ್ ವಿಕೆಟ್ ಯೋಜನೆಗಳ ಸಮನ್ವಯ ಅಧಿಕಾರಿ ವಿಜಿ ಕಾರ್ತಿಕೇಯನ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎನ್. ಕವನ ಮುಂತಾದವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು 21 ಪರಿಸರ ಸ್ನೇಹಿ ಶಾಲೆಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸಿ.ಆರ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿ; ವಸ್ತುಗಳು ನಾಶ
ಚಿಂತಾಮಣಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೀಡಾ ಅಂಗಡಿಯಲ್ಲಿನ ಸರಕುಗಳು ಬೆಂಕಿಗೆ ಆಹುತಿಯಾಗಿ ಸಾವಿರಾರು ರುಪಾಯಿ ನಷ್ಟ ಉಂಟಾಗಿದೆ ಎಂದು ಮಾಲೀಕ ನಜೀರ್ ಪಾಷ ದೂರು ನೀಡಿದ್ದಾರೆ. ನಗರದ ವೆಂಕಟಗಿರಿಕೋಟೆ ವೃತ್ತದಲ್ಲಿರುವ ಬೀಡಾ ಸೆಂಟರ್ನಲ್ಲಿ ಸೋಮವಾರ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಸ್ತುಗಳು ನಾಶವಾಗಿದೆಯೆಂದು ತಿಳಿಸಿದ್ದಾರೆ.