ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ಕ್ಷಣಗಣನೆ

Srinivasa Murthy VN
Updated On : 10 Mar 2014, 1:55 am

ಪಾ.ಶ್ರೀ. ಅನಂತರಾಮ್
ಕೋಲಾರ: ಕೋಲಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸೋಮವಾರ(ಮಾ.10)ಚುನಾವಣೆ ನಡೆಯಲಿದೆ.
ಅಧಿಕಾರ ಹಿಡಿಯಲು ತಯಾರಿ ನಡೆಸಿರುವ ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಬಾರಕ್, ಎರಡನೇ ಬಾರಿಗೆ ಸದಸ್ಯರಾಗಿರುವ ಮಾಜಿ ಶಾಸಕ ಪಿ. ವೆಂಕಟಗಿರಿಯಪ್ಪನವರ ಪುತ್ರ ಪಿ.ವಿ. ರವೀಂದ್ರ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್‌ರವರ ಅಣ್ಣನ ಮಗ ಸಿ.ಎ. ಸುಕುಮಾರ್ ನಡುವೆ ತೀವ್ರ ಪೈಪೋಟಿ ಉಂಟಾಗಿದೆ.
35 ಸದಸ್ಯರ ಬಲವಿರುವ ಕೋಲಾರ ನಗರಸಭೆಗೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ 16 ಮಂದಿ ಹಾಗೂ ಜೆಡಿಎಸ್ ಬೆಂಬಲಿತ ಸಿಪಿಎಂನ ಒರ್ವರು ಗೆದ್ದಿದ್ದಾರೆ.
ಮಗನ ಪರ ದ್ವಾರಕಾನಾಥ್ ಲಾಬಿ: ಜೆಡಿಎಸ್ ಸಹಕಾರದಿಂದ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ವಕೀಲ ಸಿ.ಎಸ್. ದ್ವಾರಕಾನಾಥ್ ಅವರು ತಮ್ಮ ಅಣ್ಣನ ಮಗ ಸುಕುಮಾರ್ ಪರ ಬ್ಯಾಟ್ಟಿಂಗ್ ನಡೆಸಿದ್ದಾರೆ.
 ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಬಲಿಜ ಸಮುದಾಯಕ್ಕೆ ಸೇರಿದ ಕೆಲ ಮುಖಂಡರೊಂದಿಗೆ ತೆರಳಿ ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಸಮುದಾಯದ ಬೆಂಬಲ ಸಿಗುವುದರಿಂದ ಸುಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
ಮಾಜಿ ಸಚಿವ ಕೆ. ಶ್ರೀನಿವಾಸಗೌಡರಿಗೆ ಮೂವರ ಮೇಲೂ ಇಷ್ಟವಿದ್ದು ಯಾರನ್ನು ಅಧ್ಯಕ್ಷ ಗಾದಿಯ ಮೇಲೆ ಕೂರಿಸುತ್ತಾರೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ತೀರ್ಥಯಾತ್ರೆಯ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರಲ್ಲಿ ಒಡಕು ಉಂಟಾಗದಂತೆ ನಡೆಸಿರುವ ಕಸರತ್ತು ಫಲಕಾರಿಯಾಗಿಲ್ಲವೆಂದು ತಿಳಿದು ಬಂದಿದೆ. ಮುಬಾರಕ್‌ಗೆ ಕಾಂಗ್ರೆಸ್ ಪಕ್ಷದಲ್ಲಿನ ಕೆಲ ಸದಸ್ಯರು ಬೆಂಬಲ ನೀಡಲು ಇಚ್ಚಿಸಿದ್ದಾರೆಯಾದರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಕಾಂಗ್ರೆಸ್ ನಡೆ ನಿಗೂಢ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮತ ಹಾಕಲು ಅವಕಾಶವಿದೆ, ಶಾಸಕ ವರ್ತೂರ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು ಮತ ಹಾಕಬಹುದಾಗಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಬಹುಮತ ಇಲ್ಲದಿರುವುದರಿಂದ ಮತದಾನದಲ್ಲಿ ಭಾಗವಹಿಸುವರೇ ಇಲ್ಲವೇ ಚುನಾವಣೆಗೆ ಬಂದರೂ ತಟಸ್ಥರಾಗಿರುವರೇ ಎಂಬುದು ನಿಗೂಢವಾಗಿದೆ.
ಸೋಮವಾರ ಜಿಲ್ಲೆಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎದುರು ಜೆಡಿಎಸ್ ಎಲ್ಲಾ 16 ಮಂದಿ ಸದಸ್ಯರನ್ನು ಪೆರೇಡ್ ಮಾಡಿಸಿ ಒಮ್ಮತದ ಅಭ್ಯರ್ಥಿಗಳನ್ನು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೂಚಿಸಲು ಪ್ರಯತ್ನಗಳು ನಡೆಯುತ್ತಿದೆ.
ಜೆಡಿಎಸ್‌ನಲ್ಲಿ ಏನಾದರೂ ವ್ಯತ್ಯಾಸಗಳು ಆದಲ್ಲಿ ಕಾಂಗ್ರೆಸ್‌ನಿಂದ ರೌತ್ ಶಂಕರಪ್ಪ, ರಮೇಶ್ ಇಲ್ಲವೇ ಜೆಡಿಎಸ್ ಬಂಡಾಯ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಸೋಮವಾರ ಬೆಳಿಗ್ಗೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರ ನಿವಾಸದಲ್ಲಿ ಮುಖಂಡರು ಸೇರಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಇಂದು ಕೋಲಾರಕ್ಕೆ ವಾಪಸ್
ಅಧಿಕಾರ ಹಿಡಿಯಲು 19 ಸದಸ್ಯರ ಬೆಂಬಲ ಬೇಕಾಗಿದೆ. ಜೆಡಿಎಸ್ ಮುಖಂಡರು ಈಗಾಗಲೇ ತಮ್ಮ ಸದಸ್ಯರನ್ನು ಬಿಗಿಯಾಗಿಟ್ಟುಕೊಳ್ಳಲು ಕೇರಳಕ್ಕೆ ತೀರ್ಥಯಾತ್ರೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಐದಾರು ದಿನಗಳಿಂದ ಕೇರಳದಲ್ಲಿ ಪ್ರವಾಸ ಮಾಡಿ ಭಾನುವಾರ ಮಡಿಕೇರಿಗೆ ಬಂದಿರುವ ಸದಸ್ಯರು ಸೋಮವಾರ ಬೆಳಿಗ್ಗೆ 10ಗಂಟೆಯೊಳಗೆ ಕೋಲಾರಕ್ಕೆ ಬಂದು ತಲುಪುವ ನಿರೀಕ್ಷೆಯಿದೆ. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿರುವ ಮುಬಾರಕ್ ಅವರಿಗೆ ಶಾಸಕ ವರ್ತೂರ್ಪ್ರ್‌ಕಾಶ್ಬ್‌ಣಕ್ಕೆ ಸೇರಿದ ಒರ್ವ ಸದಸ್ಯ ಸೇರಿದಂತೆ ಒಟ್ಟು ಮೂವರು ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗಲೂ ಪಕ್ಷಾಂತರ ಮಾಡದೆ ನಿಷ್ಟೆಯಿಂದ ಇರುವ ಮುಬಾರಕ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಅಭಿಪ್ರಾಯ ಕೆಲವರದ್ದಾಗಿದ್ದರೆ, ಒಕ್ಕಲಿಗ ಸಮುದಾಯಕ್ಕೆ ನಗರಸಭೆಯಲ್ಲಿ ಹೆಚ್ಚಿನ ಅವಕಾಶ ಸಿಕ್ಕಿಲ್ಲದ ಕಾರಣ ಈ ಬಾರಿ ರವೀಂದ್ರ ಅವರಿಗೆ ಅವಕಾಶ ನೀಡಬೇಕೆಂಬ ಒತ್ತಾಯವನ್ನು ಮುಖಂಡರ ಮೇಲೆ ಹೇರಲಾಗುತ್ತಿದೆ.

ವರ್ತೂರ್ ಪ್ರಕಾಶ್ ನಿರಾಸಕ್ತಿ:
ಜೆಡಿಎಸ್‌ನಲ್ಲಿ ಒಡಕು ಉಂಟಾದಲ್ಲಿ ಅದರ ಲಾಭ ಪಡೆದು ಅಧ್ಯಕ್ಷರಾಗಲು ಹಂಬಲಿಸುತ್ತಿರುವ ಕಾಂಗ್ರೆಸ್ ಸದಸ್ಯರಾದ ರೌತ್ ಶಂಕರಪ್ಪಗೆ ಶಾಸಕ ವರ್ತೂರ್ ಪ್ರಕಾಶ್ ಬೆಂಬಲ ನೀಡುವುದು ಅನುಮಾನ. ಈ ಹಿಂದೆ ವರ್ತೂರ್ ಬಣದಿಂದ ಗೆದ್ದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಜತೆಗೆ ತಮ್ಮ ಬೆಂಬಲದಿಂದ ಗೆದ್ದಿರುವ 5 ಮಂದಿ ಸದಸ್ಯರಿಗೆ ಚುನಾವಣೆಯಲ್ಲಿ ತಮ್ಮ ಅನುಮತಿ ಇಲ್ಲದೇ ಯಾರಿಗೂ ಬೆಂಬಲ ನೀಡದಂತೆ ಸೂಚಿಸಿದ್ದಾರೆಯಾದರೂ ಈ ಸೂಚನೆ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತದೆ ಎಂಬುದು ಕಾದು ನೋಡಬೇಕಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭವಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಎಚ್. ಮುನಿಯಪ್ಪ ಅತ್ಯಂತ ಜಾಣತನದಿಂದ ಹಜ್ಜೆ ಇಡಲಾರಂಭಿಸಿದ್ದಾರೆ. ಕಾಂಗ್ರೆಸ್ಸಿನ ಸದಸ್ಯರ ಬಲ ಪ್ರಸ್ತುತ 11 ಮಂದಿ, ಅಧಿಕಾರ ಹಿಡಿಯಲು ಇನ್ನು 8 ಸದಸ್ಯರ ಅವಶ್ಯಕತೆ ಇದೆ. ಒಂದು ವೇಳೆ ಶಾಸಕ ವರ್ತೂರ್ ಪ್ರಕಾಶ್ ಬಣದ 5 ಹಾಗೂ ಬಿಜೆಪಿ ಬೆಂಬಲಿತ ಒಬ್ಬ ಸದಸ್ಯರು ಕಾಂಗ್ರೆಸ್ ಕಡೆ ವಾಲಿದರೂ ಇನ್ನು ಎರಡು ಸದಸ್ಯರ ಕೊರತೆ ಉಂಟಾಗುವುದರಿಂದ ಕಾಂಗ್ರೆಸ್ ಮುಖಂಡರು ಜೆಡಿಎಸ್ ವಿದ್ಯಮಾನಗಳ ಕಡೆ ನಿಗಾ ವಹಿಸಿದ್ದಾರಲ್ಲದೆ, ಸೋಮವಾರ ಬೆಳಿಗ್ಗೆ 11 ಗಂಟೆಯವರೆಗೂ ಕಾದು ನೋಡಲು ನಿಶ್ಚಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement