ಕೊಲೆ ಯತ್ನ: ಆರೋಪಿ ಬಂಧನ
ಮುಳಬಾಗಲು: ರಾಜಕೀಯ ವೈಷಮ್ಯದ ಹಿನ್ನಲೆಯಲ್ಲಿ ಬೇವಹಳ್ಳಿ ಗ್ರಾಮದ ಜೆಡಿಎಸ್ ಮುಖಂಡನ ಮೇಲೆ ಹತ್ಯಾ ಯತ್ನ ನಡೆದಿದ್ದು, ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಮುಳಬಾಗಲು ಪೊಲೀಸರು ತಿಳಿಸಿದ್ದಾರೆ.
ಬಿ.ಎನ್.ಶಂಕರಪ್ಪನ ಮೇಲೆ ಗೋಪಾಲಪುರ ಗ್ರಾಮದ ಆನಂದ್ ಎಂಬಾತ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ.
ಫೆ.26ರಂದು ನಡೆದ ಬೇವಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಗೊಂಡಿದ್ದು ಜತೆಗೆ ಶನಿವಾರ ಮೂಡಿಯನೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಅಭ್ಯರ್ಥಿಯ ಪರ ಹೈಕೋರ್ಟ್ ಆದೇಶ ನೀಡುದ್ದು ಸಹಿಸದೆ ಆನಂದ್ ಹಾಗೂ ಇತರೆ ಮೂವರು ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ಆನಂದ್ನನ್ನು ಬಂಧಿಸಲು ಪೊಲೀಸರು ಗೋಪಾಲಪುರಕ್ಕೆ ತೆರಳಿದಾಗ ಮನೆ ತೋರಿಸಿದ ಪಕ್ಕದ ಬೇವಹಳ್ಳಿ ಗ್ರಾಮದ ವೇಣುಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವೇಣುಕುಮಾರ್ರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೇಣುಕುಮಾರ್ ಮೇಲೆ ಹಲ್ಲೆ ನಡೆಸಿದ ವೆಂಕಟಾಚಲಪತಿ, ರಾಮ, ಚಂದ್ರಪ್ಪ ಪರಾರಿಯಾಗಿದ್ದಾರೆ. ಶಂಕರಪ್ಪನವರ ಮೇಲೆ ಹಲ್ಲೆ ನಡೆಸಿದ ಆನಂದ್ನನ್ನು ಮುಳಬಾಗಲು ಪೊಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.
ಅತಿಯಾದ ಮದ್ಯ ಸೇವನೆ; ವ್ಯಕ್ತಿ ಸಾವು
ಮುಳಬಾಗಲು: ತಾಲೂಕಿನ ಕಾಂತರಾಜ ಸರ್ಕಲ್ ಸಮೀಪದ ಅಯ್ಯಪ್ಪ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಸುಬ್ರಮಣಿ(60) ಎಂಬುವರು ಅಧಿಕ ಮದ್ಯ ಸೇವನೆಯಿಂದ ಶನಿವಾರ ಸಂಜೆ ಸಾವಿಗೀಡಾಗಿದ್ದಾರೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.