ಕೋಲಾರ- ಚಿಕ್ಕಬಳ್ಳಾಪುರ ಕೋಟೆಗೆ ನಾಯಕರ್ಯಾರು?
ಪಾ.ಶ್ರೀ.ಅನಂತರಾಮ್
ಕನ್ನಡಪ್ರಭ ವಾರ್ತೆ, ಕೋಲಾರ, ಮಾ.8
ಮೊದಲ ಲೋಕಸಭಾ ಚುನಾವಣೆ 1952ರಲ್ಲಿ ನಡೆದಾಗ ಕೋಲಾರ ಮತ್ತು ಹೊಸಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಕ್ರಮವಾಗಿ ಪರಿಶಿಷ್ಟ ಜಾತಿಗೆ ಸೇರಿದ ದೊಡ್ಡತಿಮ್ಮಯ್ಯ ಹಾಗೂ ಒಕ್ಕಲಿಗ ಜನಾಂಗದ ಎಂ.ವಿ.ಕೃಷ್ಣಪ್ಪ ಚುನಾಯಿತರಾಗಿದ್ದರು.
1957ರಲ್ಲಿ ದೊಡ್ಡತಿಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರೆ, ಹೊಸಕೋಟೆ ಕ್ಷೇತ್ರದಿಂದ ರಾಜ್ಯದ ಮೊದಲ ಮುಖ್ಯಮಂತ್ರಿ ಎಂದು ಹೆಗ್ಗಳಿಕೆ ಸಂಪಾದಿಸಿರುವ ಕೆ.ಚಂಗಲರಾಯರೆಡ್ಡಿ ಚುನಾಯಿತರಾಗಿದ್ದರು. 1962ರಲ್ಲಿ ಕೋಲಾರವನ್ನು ಮೀಸಲು ಕ್ಷೇತ್ರವೆಂದು ಘೋಷಣೆ ಮಾಡಿದ್ದರಿಂದ ಕಾಂಗ್ರೆಸ್ನಿಂದ ಈ ಹಿಂದೆ ಎರಡು ಬಾರಿ ಗೆದ್ದಿದ್ದ ದೊಡ್ಡತಿಮ್ಮಯ್ಯ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿತ್ತು. ಮತ್ತೊಂದು (ಹೊಸಕೋಟೆ) ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಸೇರಿದ ಕೆ.ಚಂಗಲರಾಯರೆಡ್ಡಿ ಚುನಾಯಿತರಾಗಿದ್ದರು. ಆದರೆ, ಕೆಲವು ರಾಜಕೀಯ ಅನಿವಾರ್ಯತೆಗಳಿಂದ ರಾಜಿನಾಮೆ ನೀಡಿದ್ದರಿಂದ 1965ರ ಜೂನ್ 15ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಎಚ್.ಪಿ.ಲಿಂಗಾರೆಡ್ಡಿ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಲಾಯಿತು.
1967ರಿಂದ 1984ರವರೆಗೆ ಕೋಲಾರ ಮೀಸಲು ಕ್ಷೇತ್ರದಿಂದ ಜಿ.ವೈ.ಕೃಷ್ಣನ್ ನಾಲ್ಕು ಬಾರಿ ಗೆದ್ದು ಗಮನ ಸೆಳೆದಿದ್ದರು. 1967ರಲ್ಲಿ ದ್ವಿಸದಸ್ಯತ್ವಕ್ಕೆ ಒಳಪಟ್ಟ ಮತ್ತೊಂದು ಕ್ಷೇತ್ರವನ್ನು ಹೊಸಕೋಟೆ ಲೋಕಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಅಲ್ಲಿ ಕಾಂಗ್ರೆಸ್ನ ಎಂ.ವಿ.ಕೃಷ್ಣಪ್ಪ ಗೆದ್ದಿದ್ದರಲ್ಲದೆ, 1971ರಲ್ಲೂ ಇವರೇ ಆಯ್ಕೆಯಾಗಿದ್ದರು.
1977ರಲ್ಲಿ ಹೊಸಕೋಟೆ ಕ್ಷೇತ್ರವನ್ನು ಚಿಕ್ಕಬಳ್ಳಾಪುರ ಕ್ಷೇತ್ರವನ್ನಾಗಿ ಪುನರ್ ನಾಮಕರಣ ಮಾಡಲಾಯಿತು. ಆಗಲೂ ಎಂ.ವಿ.ಕೃಷ್ಣಪ್ಪನವರನ್ನೇ ಮತದಾರರು ಕೈಹಿಡಿದರು. 1980ರಲ್ಲಿ ಎಸ್.ಎನ್.ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ನೀಡಿ ಸಂಸತ್ತಿಗೆ ಆಯ್ಕೆ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ.
1984 ಜಿ.ವೈ.ಕೃಷ್ಣನ್ ವಿರುದ್ಧ ಜನತಾಪಕ್ಷದವರು ಡಾ.ಜಿ.ವೆಂಕಟೇಶ್ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿದರು. ಆದರೆ, ಚಿಕ್ಕಬಳ್ಳಾಪುರದಲ್ಲಿ ಮಾತ್ರ ಕಾಂಗ್ರೆಸ್ ಸೋಲಿಸಲು ಸಾಧ್ಯವಾಗಲಿಲ್ಲ. ಹಿರಿಯ ಕಾಂಗ್ರೆಸ್ಸಿಗ, ಕೆಪಿಸಿಸಿ ಅಧ್ಯಕ್ಷ ವಿ.ಕೃಷ್ಣರಾವ್ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಲಾಯಿತು.
ಸಂಸತ್ ಪ್ರವೇಶಿಸಿದ ಮುನಿಯಪ್ಪ: 1989ರಲ್ಲಿ ಕೋಲಾರ ಮೀಸಲು ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ವೈ.ರಾಮಕೃಷ್ಣ ಇಲ್ಲಿ ಗೆದ್ದರೆ, ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕೃಷ್ಣರಾವ್ ವಿಜಯ ಮಾಲೆ ಧರಿಸಿದರು. 1991ರಲ್ಲಿ ಕಾಂಗ್ರೆಸ್ ಪಕ್ಷದವರು ಕೋಲಾರ ಕ್ಷೇತ್ರಕ್ಕೆ ವಕೀಲ ಹಾಗೂ ಸಾಮಾನ್ಯ ಕಾರ್ಯಕರ್ತರಾಗಿದ್ದ ಕೆ.ಎಚ್.ಮುನಿಯಪ್ಪ ಅವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದರು.
ರಾಜೀವ್ಗಾಂಧಿ ಹತ್ಯೆಯಿಂದ ದೇಶದಲ್ಲಿ ಹಬ್ಬಿದ ಅನುಕಂಪದ ಅಲೆಯಿಂದಾಗಿ ಮುನಿಯಪ್ಪ ಪ್ರಥಮ ಬಾರಿಗೆ ಸಂಸತ್ತಿಗೆ ಚುನಾಯಿತರಾದರು. ಅಂದಿನಿಂದ 1996, 98, 99, 2004 ಹಾಗೂ 2009 ಸೇರಿ ಒಟ್ಟು ಆರು ಬಾರಿ ಸತತವಾಗಿ ಗೆದ್ದು ಸೋಲಿಲ್ಲದ ಸರದಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇತ್ತ ಚಿಕ್ಕಬಳ್ಳಾಪುರ ಕ್ಷೇತ್ರದಿಂದ 1991ರಲ್ಲಿ ಕೃಷ್ಣರಾವ್ ಗೆದ್ದರಾದರೂ 1996ರಲ್ಲಿ ಆರ್.ಎಲ್.ಜಾಲಪ್ಪ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಕೋಟೆಯನ್ನು ಮುರಿದಿದ್ದರು. ಆದರೂ 1998- 99 ಹಾಗೂ 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನೆಲಕಚ್ಚಿದ್ದ ಕಾಂಗ್ರೆಸ್ಗೆ ಜೀವ ತುಂಬಿದ್ದರು.
2009ರಲ್ಲಿ ಚಿಕ್ಕಬಳ್ಳಾಪುರದಿಂದ ಎಂ.ವೀರಪ್ಪ ಮೊಯ್ಲಿ ಗೆದ್ದು ಯುಪಿಎ ಸರ್ಕಾರದಲ್ಲಿ ಪ್ರಬಲ ಖಾತೆಗಳನ್ನು ಅನುಭವಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಇವರೇ ಅಭ್ಯರ್ಥಿಯಾಗಿದ್ದಾರೆ. ಕೋಲಾರ ಕ್ಷೇತ್ರದಿಂದ 7ನೇ ಬಾರಿಗೆ ಮುನಿಯಪ್ಪ ಸ್ಪರ್ಧಿಸುತ್ತಿದ್ದಾರೆ. 1952ರಿಂದ 2009ರವರೆಗೆ ನಡೆದ ಚುನಾವಣೆಯಲ್ಲಿ ದೊಡ್ಡತಿಮ್ಮಯ್ಯ, ಜಿ.ವೈ.ಕೃಷ್ಣನ್, ಕೆ.ಎಚ್.ಮುನಿಯಪ್ಪ, ವಿ.ಕೃಷ್ಣರಾವ್, ಆರ್.ಎಲ್.ಜಾಲಪ್ಪ ಹೆಚ್ಚು ಬಾರಿ ಗೆದ್ದಿದ್ದರೂ ಕೆ.ಎಚ್.ಮುನಿಯಪ್ಪ ಸಾಧನೆ ಗಮನಾರ್ಹ.