ಗ್ರಾಪಂ ಅಧ್ಯಕ್ಷ ಚುನಾವಣೆ ತಡೆಯಾಜ್ಞೆ ತೆರವು
ಮುಳಬಾಗಲು: ತಾಲೂಕಿನ ಮೂಡಿಯನೂರು ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣೆ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ನ್ಯಾ.ಎ.ಎನ್. ವೇಣುಗೋಪಾಲಗೌಡ ತೆರವುಗೊಳಿಸಿ ಆದೇಶ ನೀಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಕೆ.ವಿ. ಮಂಜುಳಾ ನಾಮಪತ್ರ ಸಲ್ಲಿಸಿದ್ದರು. ಜನವರಿ 30 ರಂದು ನಡೆದ ಚುನಾವಣೆ ಸಭೆಗೆ 15 ಸದಸ್ಯರ ಪೈಕಿ 5 ಸದಸ್ಯರು ಹಾಜರಾದ ಕಾರಣವಾಗಿ ಕೋರಂ ಕೊರತೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗಂಗಾಧರಯ್ಯ ಚುನಾವಣೆ ಸಭೆ ಮುಂದೂಡಿದ್ದರು. ಫೆ.17ರಂದು ಚುನಾವಣೆ ದಿನಾಂಕ ನಿಗದಿಪಡಿಸಿದ ಚುನಾವಣಾಧಿಕಾರಿ ಸಭೆಗೆ ಎಲ್ಲಾ ಸದಸ್ಯರು ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು.ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರ ಘೋಷಣೆ ಮಾಡುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಗುಜ್ಜನಹಳ್ಳಿ ಮಂಜುನಾಥ್ ಸೇರಿದಂತೆ 11 ಮಂದಿಯ ತಂಡ ಹೈಕೋರ್ಟ್‌ಗೆ ಮನವಿ ಸಲ್ಲಿಸಿ, ಚುನಾವಣಾ ಸಭೆಗೆ ತೆಡೆಯಾಜ್ಞೆ ನೀಡಲು ಕೋರಿದ್ದರು. ಎರಡು ವಾರಗಳ ಕಾಲ ಚುನಾವಣೆ ನಡೆಯದಂತೆ ಹೈಕೋರ್ಟ್ ಚುನಾವಣಾ ಸಭೆಗೆ ಹೈಕೋರ್ಟ್ ಏಕಪೀಠ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೆ.ವಿ. ಮಂಜುಳಾ ಮೇಲ್ಮನವಿ ಸಲ್ಲಿಸಿದ್ದರು. ಚುನಾವಣಾಧಿಕಾರಿ ರಾಜಕೀಯ ಪ್ರೇರಣೆಯಿಂದ ಚುನಾವಣಾ ಸಭೆ ಮುಂದೂಡಿದ್ದಾರೆಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದೆಂದು ಅವರು ಹೇಳಿದರು. ಜೆಡಿಎಸ್ ಮುಖಂಡರಾದ ಬಲ್ಲಶೆಟ್ಟಿಹಳ್ಳಿ ನಾರಾಯಣಗೌಡ, ಬೇವಹಳ್ಳಿ ರಾಮಕೃಷ್ಣಪ್ಪ, ಗುಜ್ಜನಹಳ್ಳಿ ಪ್ರಭಾಕರ್, ಕೃಷ್ಣಗಿರಿ ವೆಂಕಟರಾಮಪ್ಪ, ನಿಚ್ಚನಗುಂಟೆ ಶ್ರೀನಿವಾಸಗೌಡ, ಸದಸ್ಯರಾದ ಕೆ.ವಿ. ಮಂಜುಳಾ, ರಮೇಶ್, ಸುಮಿತ್ರಮ್ಮ, ಚೌಡಪ್ಪ, ರತ್ನಮ್ಮ, ಜಗದೀಶ್, ಚಿಕ್ಕನಹಳ್ಳಿ ನಾರಾಯಣಸ್ವಾಮಿ, ಕೃಷ್ಣಗಿರಿ ರಮೇಶ್, ಮುನಿಯಪ್ಪ, ಬಾಲಕೃಷ್ಣ, ಗುರಪ್ಪ ಇದ್ದರು.