ಚಾಲಕ, ನಿರ್ವಾಹಕನ ಮೇಲೆ ಹಲ್ಲೆ: ದೂರು ದಾಖಲು
ಚಿಂತಾಮಣಿ: ಕಾರ್ಯನಿರತ ಕೆಎಸ್ಆರ್ಟಿಸಿ ನಿರ್ವಾಹಕ ಮತ್ತು ಚಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಚೊಕ್ಕನಹಳ್ಳಿ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ. ಚಿಂತಾಮಣಿ - ಬುರುಡಗುಂಟೆ ಮಾರ್ಗದ ನಿರ್ವಾಹಕ ರಘುರಾಮ್ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾಗ ಚೊಕ್ಕನಹಳ್ಳಿ ಕ್ರಾಸ್ ಬಳಿ ಬಸ್ ಹತ್ತಿದ ದೇವಪ್ಪ ಎಂಬವರು 500 ರುಪಾಯಿ ನೀಡಿ ಚಿಲ್ಲರೆ ಕೇಳಿದ್ದು, ಈ ವಿಷಯವಾಗಿ ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಮಧ್ಯ ಪ್ರವೇಶಿಸಿದ ಚಾಲಕ ಆಂಜಪ್ಪರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ನಿರ್ವಾಹಕ ಮತ್ತು ಚಾಲಕ ಚಿಂತಾಮಣಿ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರಿಗೆ ದೂರು: ಸಮವಸ್ತ್ರದಲ್ಲಿದ್ದ ಕಾರ್ಯನಿರತ ನಿರ್ವಾಹಕ ರಘುರಾಮ್ರೆಡ್ಡಿ ಮತ್ತು ಚಾಲಕ ಆಂಜಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಟಿಕೆಟ್ ಹಂಚುವ ಯಂತ್ರ ನಾಶಪಡಿಸಿ, ಕೈಚೀಲದಲ್ಲಿದ್ದ 3,500 ರುಪಾಯಿಗಳ ಕಳ್ಳತನ ಮಾಡಿರುವುದಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದು ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕ ವೆಂಕಟೇಶ್ ಮತ್ತು ಸಹಾಯಕ ಸಂಚಾರಿ ನಿರೀಕ್ಷಕ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರಿಗಾದ ಅನ್ಯಾಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮತದಾರರ ಪಟ್ಟಿ ಅರಿವು ಕಾರ್ಯಕ್ರಮ
ಟೇಕಲ್: ಕೆ.ಜಿ. ಹಳ್ಳಿಯಲ್ಲಿ ಭಾನುವಾರ ಮತಗಟ್ಟೆ ಅಧಿಕಾರಿಗಳು ಗ್ರಾಮದ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಸೇರ್ಪಡೆಗೆ ಅರಿವು ಮೂಡಿಸುವ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದ ಪಕ್ಷದಲ್ಲಿ ನಮೂನೆ 9 ರಲ್ಲಿ ಅರ್ಜಿ ತುಂಬಿ ಮತಗಟ್ಟೆ ಅಧಿಕಾರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ ಸ್ಥಳೀಯ ಮತಗಟ್ಟೆ ಅಧಿಕಾರಿ ಶಶಿಧರ್, ಟೇಕಲ್ ನಾಡಕಚೇರಿಯ ಕಂದಾಯ ಅಧಿಕಾರಿ ನಾರಾಯಣಾಚಾರ್, ಮತಗಟ್ಟೆ ಅರಿವು ಆಂದೋಲನದ ಹಿನ್ನಲೆಯಲ್ಲಿ ಮನೆ ಮನೆ ತೆರಳಿ ಮತದಾರರ ಪಟ್ಟಿ ಬಗ್ಗೆ ಅರಿವು ಮೂಡಿಸಿದರು.