ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟಿಕೆಟ್ ವರ ಬೇಡಿ ದೇವರ ಮೊರೆ ಹೋದ ನಾರಾಯಣಸ್ವಾಮಿ

Srinivasa Murthy VN
Updated On : 10 Mar 2014, 1:54 am

ಬಂಗಾರಪೇಟೆ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೋಲಾರ ಕ್ಷೇತ್ರದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ದಿಲ್ಲಿ ನಾಯಕರ ಮನೆ ಕದ ತಟ್ಟುವುದರೊಂದಿಗೇ ಕೋಲಾರದ ಸಾಯಿಬಾಬಾ ಮಂದಿರಕ್ಕೆ ಪ್ರತಿನಿತ್ಯ ಭೇಟಿ ನೀಡಲಾರಂಭಿಸಿದ್ದಾರೆ.
ಎಂದೂ ಅಷ್ಟಾಗಿ ದೇವಾಲಯಗಳನ್ನು ಸುತ್ತದ ಎಂ.ನಾರಾಯಣಸ್ವಾಮಿ ಕಳೆದೊಂದು ತಿಂಗಳಿಂದ ಸಾಯಿ ಬಾಬಾ ಗುಡಿಗೆ ಪ್ರತಿನಿತ್ಯ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೆಸರು ಅಧಿಕೃತವಾಗಿ ಪ್ರಕಟವಾಗಿದೆ. ಮುನಿಯಪ್ಪ ಸಾಯಿ ಬಾಬಾ ಅವರ ಪರಮ ಭಕ್ತರಾಗಿದ್ದು ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ನಾರಾಯಣಸ್ವಾಮಿಗೆ ಬಾಬಾ ಮೇಲಿನ ಭಕ್ತಿ ದಿಢೀರ್ ಏರಿಕೆಯಾಗಿದೆ.
ಬಿಜೆಪಿ ಟಿಕೆಟ್‌ಗಾಗಿ ಕ್ಷೇತ್ರದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಎಂಎಲ್ಸಿ ಡಿ.ಎಸ್.ವೀರಯ್ಯ ನಡುವೆ ಜಿದ್ದಾಜಿದ್ದಿನ ಹೋರಾಟ ತೆರೆ ಮರೆಯಲ್ಲಿ ನಡೆಯುತ್ತಿದ್ದು, ಮೂರು ತಿಂಗಳಿಂದ ತಾವೇ ಅಭ್ಯರ್ಥಿ ಎಂದು ನಾರಾಯಣಸ್ವಾಮಿ ಕ್ಷೇತ್ರಾದ್ಯಂತ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಈಗ ವೀರಯ್ಯ ತಮಗೇ ಟಿಕೆಟ್ ಬೇಕೆಂದು ಪಟ್ಟು ಹಿಡಿದಿರುವುದು ನಾರಾಯಣಸ್ವಾಮಿ ಬೆಂಬಲಿಗರಿಗೆ ಇರಿಸುಮುರಿಸಾಗಿದೆ. ಹೈಕಮಾಂಡಿಗೆ ಅಭ್ಯರ್ಥಿ ಆಯ್ಕೆ ತಲೆ ನೋವಾಗಿದ್ದು ಬಿಜೆಪಿ ಮೊದಲ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸದೆ ಮೂಂದೂಡಲಾಗಿದೆ. ಅಂಥದರಲ್ಲಿ ಈಗ ವೀರಯ್ಯ ಬೇರೆ ತಮಗೆ ಅಡ್ಡಗಾಲಾಗಿದ್ದು ಎಲ್ಲ ಕಂಟಕಗಳನ್ನು ನಿವಾರಿಸಿ ತಮಗೇ ಪಕ್ಷದ ಟಿಕೆಟ್ ದಕ್ಕಿಸಿಕೊಡುವಂತೆ ಬಾಬಾ ಮೊರೆ ಹೋಗಿದ್ದಾರೆ. ಸಾಯಿಬಾಬಾ ಕೃಪಾಕಟಾಕ್ಷದ ಝಲಕ್ ಎಂಬಂತೆ ನಾಳೆಯಿಂದ ನೂರಾರು ಭಾಜಪ ಕಾರ್ಯಕರ್ತರು ಬೆಂಗಳೂರಿನ ಪಕ್ಷದ ಕಚೇರಿ ಮುಂದೆ ಜಮಾಯಿಸಿ ನಾರಾಯಣಸ್ವಾಮಿಗೇ ಟಿಕೆಟ್ ನೀಡಬೇಕೆಂದು ಮುಖಂಡರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಇದರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement