ಟಿಕೆಟ್ಗಾಗಿ ಬಿಜೆಪಿ, ಆರ್ಪಿಐ ಪೈಪೋಟಿ
ಕೋಲಾರ: ನರೇಂದ್ರ ಮೋದಿ ಹವಾದಿಂದ ಈ ಬಾರಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂದು ಕಾರ್ಯಕರ್ತರು ಪ್ರಯತ್ನಿಸುತ್ತಿರುವಾಗಲೇ ಎನ್ಡಿಎಗೆ ಬೆಂಬಲ ನೀಡಿರುವ ಆರ್ಪಿಐ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಒತ್ತಾಯಿಸುತ್ತಿರುವುದರಿಂದ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.
ಬಿಜೆಪಿ ಟಿಕೆಟ್ಗಾಗಿ ಮಾಜಿ ಶಾಸಕ ಬೇತಮಂಗಲ ಎಂ.ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ನಡುವೆ ತೀವ್ರ ಪೈಪೋಟಿ ನಡೆದಿರುವ ಬೆನ್ನಲ್ಲೇ ಆರ್ಪಿಐನಿಂದ ಸ್ಪರ್ಧಿಸಲು ಪಕ್ಷದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಲೋಕ ಜನಶಕ್ತಿಯ ರಾಜ್ಯಾಧ್ಯಕ್ಷೆ ಪ್ರಭಾವತಿ ಪ್ರಯತ್ನಿಸುತ್ತಿರುವುದರಿಂದ ಎನ್ಡಿಎ ನಾಯಕರಿಗೆ ಯಾರಿಗೆ ಟಿಕೆಟ್ ನೀಡಬೇಕೆಂಬುದು ಜಿಜ್ಞಾಸೆಯಾಗಿದೆ. ರಾಜ್ಯ ಬಿಜೆಪಿ ನಾಯಕರ ಭರವಸೆ ಮೇರೆಗೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಈಗಾಗಲೇ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ, ವೀರಯ್ಯ ಯಾವುದೇ ಕಾರಣಕ್ಕೂ ನಾರಾಯಣಸ್ವಾಮಿಯವರಿಗೆ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದ್ದಾರೆ. ದೆಹಲಿಯಲ್ಲಿ ಈ ವಿಚಾರವಾಗಿ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು ಒಂದು ವೇಳೆ ವೀರಯ್ಯ ಮತ್ತು ನಾರಾಯಣಸ್ವಾಮಿ ನಡುವೆ ಟಿಕೆಟ್ಗಾಗಿ ತೀವ್ರ ಪೈಪೋಟಿ ಉಂಟಾಗಿ ಅದರಿಂದ ಪಕ್ಷಕ್ಕೆ ಹಾನಿಯಾಗುವುದಾದರೆ ಈ ಇಬ್ಬರನ್ನು ಕೈಬಿಟ್ಟು ಆರ್ಪಿಐಗೆ ಕೋಲಾರ ಕ್ಷೇತ್ರ ಬಿಟ್ಟುಕೊಟ್ಟು ಪಕ್ಷಕ್ಕೆ ಆಗುವ ಹಾನಿ ತಪ್ಪಿಸಬೇಕೆಂಬ ಬಗ್ಗೆ ಚಿಂತನೆ ನಡೆಯುತ್ತಿದ್ದು, ಸೋಮವಾರ ಸಂಜೆಯೊಳಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದೆಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ನಮ್ಮ ಪಕ್ಷದಿಂದಲೇ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಸರತ್ತು ಮುಂದುವರೆಸಿದೆ. ಒಂದು ವೇಳೆ ಗೊಂದಲ ಬಗೆಹರಿಯದಿದ್ದರೆ ಆರ್ಪಿಐ ಅನ್ನು ಬೆಂಬಲಿಸುವುದು ಅನಿವಾರ್ಯವಾಗಬಹುದು. ಆದರೆ, ಈ ಪಕ್ಷದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಸ್ಪರ್ಧೆಗೆ ಜಿಲ್ಲಾ ಬಿಜೆಪಿ ಸಮ್ಮತಿಸುವುದಿಲ್ಲ, ಬೇರೆಯಾರನ್ನಾದರೂ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಾಗ ಮಾತ್ರ ಸಹಕಾರ ನೀಡಲು ಸಾಧ್ಯವಾಗುತ್ತದೆ. ಬಿಜೆಪಿ ವರಿಷ್ಠರು ನಮ್ಮ ಪಕ್ಷದ ಅಕಾಂಕ್ಷಿಗಳಾದ ವೀರಯ್ಯ ಇಲ್ಲವೇ ನಾರಾಯಣಸ್ವಾಮಿ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ವಿಶ್ವಾಸವಿದ್ದು ಸೋಮವಾರ ಸಂಜೆಯೊಳಗೆ ಸಮಸ್ಯೆ ನಿವಾರಣೆ ಆಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ವೀರಯ್ಯನವರಿಗೆ ಟಿಕೆಟ್ ಕೊಡುವುದಕ್ಕೆ ಜಿಲ್ಲಾ ಬಿಜೆಪಿಯಲ್ಲಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಸಂಘಟನೆಗೆ ಯಾವುದೇ ರೀತಿಯಲ್ಲೂ ಸಹಕಾರ ನೀಡದೆ, ಚುನಾವಣೆ ಸಮಯದಲ್ಲಿ ಮಾತ್ರ ಆಸಕ್ತಿ ತೋರುವ ವೀರಯ್ಯ ನಮಗೆ ಬೇಡ, ಕ್ಷೇತ್ರದಲ್ಲಿ ವಾಜಪೇಯಿ ಅಲೆ ಇದ್ದಾಗಲೇ ಇವರಿಗೆ ಗೆಲ್ಲುವುದಕ್ಕೆ ಆಗಲಿಲ್ಲ. ಈಗ ನರೇಂದ್ರ ಮೋದಿ ಅಲೆಯನ್ನು ನಂಬಿದ್ದಾರೆ.