ನೀತಿ ಸಂಹಿತೆ ಉಲ್ಲಂಘನೆ
ಟೇಕಲ್: ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಟೇಕಲ್ ಮತ್ತು ಕೆ.ಜಿ. ಹಳ್ಳಿಗಳಲ್ಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಬ್ಯಾನರ್ಗಳು ಎಲ್ಲೆಡೆ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರಭಾಗ್ಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಜಾಹೀರಾತುಗಳು ರಾರಾಜಿಸುತ್ತಿದ್ದರು ತೆರವು ಗೊಳಿಸದೆ ಗ್ರಾಪಂ ನಿರ್ಲಕ್ಷ್ಯ ವಹಿಸಿದೆ. ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಗ್ರಾಪಂಗಳಿಗೆ ಸೂಚನೆ ನೀಡಿ ಮತದಾರರ ಮೇಲೆ ಪ್ರತಿಕೂಲ ಉಂಟುಮಾಡುವ ಬ್ಯಾನರ್ಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ರಸ್ತೆ ವಿವಾದ: ಸೂಲೂರಿಗೆ ಜಿಪಂ ಸಿಇಒ ಭೇಟಿ
ಕೋಲಾರ: ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಸಮಸ್ಯೆಯನ್ನು ಸೌಹಾರ್ದಯುತವಾಗಿ ರಾಜಿ ಸಂಧಾನದೊಂದಿಗೆ ಮಾಡಿಕೊಳ್ಳುವುದು ಒಳಿತು ಎಂದು ಜಿಪಂ ಸಿಇಒ ವಿನೋತ್ ಪ್ರಿಯಾ ಸೂಲೂರು ಗ್ರಾಮದ ದಲಿತ ಕಾಲೋನಿ ನಿವಾಸಿಗಳಿಗೆ ಸಲಹೆ ನೀಡಿದರು. ಸಾರ್ವಜನಿಕರು ಓಡಾಡುವ ರಸ್ತೆಯನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿರುವುದನ್ನು ಖಂಡಿಸಿ ಗ್ರಾಮಸ್ಥರು ಗ್ರಾಪಂ ಮುಂದೆ ಧರಣಿ ನಡೆಸಿರುವ ಹಿನ್ನಲೆಯಲ್ಲಿ ಸಿಇಒ ಗ್ರಾಮಕ್ಕೆ ಭೇಟಿ ನೀಡಿದ್ದರು. ಸೂಲೂರು ಗ್ರಾಮದಲ್ಲಿ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭದಲ್ಲಿ ಕಳೆದ ವಾರ ಪೌರಸಮಸ್ಯೆ ಅಂಕಣದಲ್ಲಿ ಪ್ರಕಟಸಿದ ವರದಿ ಹಿನ್ನಲೆಯಲ್ಲಿ ಸಿಇಒ ಗ್ರಾಮಕ್ಕೆ ನೀಡಿದ ಭೇಟಿಗೆ ದಲಿತರು ಹರ್ಷ ವ್ಯಕ್ತಪಡಿಸಿ ಬೇಗನೆ ಸಮಸ್ಯೆ ನಿವಾರಣೆ ಮಾಡುವಂತೆ ಮನವಿ ಮಾಡಿದರು.
ಜೀವನದಲ್ಲಿ ಜಿಗುಪ್ಸೆ; ವೃದ್ಧ ಆತ್ಮಹತ್ಯೆ
ಚಿಂತಾಮಣಿ: ವೃದ್ಧರೊಬ್ಬರು ಜೀವನದಲ್ಲಿ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ವಂಗಿಮಾಳ್ಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕ ಸುಬ್ಬರಾಯಪ್ಪ (70) ಎಂಬವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ ಇವರನ್ನು ಚಿಕಿತ್ಸೆಗಾಗಿ ಕೋಲಾರ ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೇಣು ಬಿಗಿದುಕೊಂಡು ವಿವಾಹಿತ ಸಾವು
ಮಾಲೂರು: ಜೀವನದಲ್ಲಿ ಬೇಸತ್ತಿರುವ ವಿವಾಹಿತನೂಬ್ಬ ನೇಣಿಗೆ ಶರಣಾದ ಘಟನೆ ಪಟ್ಟಣದ ಹನುಮಂತನಗರದ ಬಳಿ ನಡೆದಿದೆ. ಮೃತನನ್ನು ಮಧು ಸೂಧನ್(22)ಎಂದು ಗುರುತಿಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಮದುಮೆಯಾಗಿದ್ದ ಮಧುಸೂಧನ್ ತನ್ನ ಹೆಂಡತಿ ಹಾಗೂ ಒಂದು ವರ್ಷದ ಮಗುವನ್ನು ತವರು ಮನಗೆ ಕಳುಹಿಸಿದ ನಂತರ ನೇಣಿಗೆ ಶರಣಾಗಿದ್ದಾನೆ. ಅತ್ಮಹತ್ಯೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
'ಜನಪದ ಕಲೆಗಳ ಉಳಿವಿಗೆ ಶ್ರಮಿಸಿ'
ಬಂಗಾರಪೇಟೆ: ಜನಪದ ಕಲೆಗಳು ನಶಿಸಿ ಹೋಗುತ್ತಿದ್ದು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮುಂದಾಗಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಅಶ್ವತ್ಥ್ ಕೋರಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗೌತಮ ಶೈಕ್ಷಣಿಕ ಮತ್ತು ಕವಿ ಕಾವ್ಯ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾಂಕ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕತೆ ಬೆಳೆಯುತ್ತಿದ್ದಂತೆ ಹಿಂದಿನ ಕಾಲದ ಸಂಸ್ಕೃತಿ ಮಾಯವಾಗುತ್ತಿದೆ. ಅಲ್ಲದೆ ಇಂದಿನ ಮಕ್ಕಳು ದೇಶಿ ಸಾಂಸ್ಕೃತಿಕ ಕೆಲೆಗಳಿಗೆ ಬೆಂಬಲ ನೀಡದೆ ಪಾಶ್ಚಿಮಾತ ಸಂಸ್ಕೃತಿಗೆ ಮೊರೆ ಹೋಗಿರುವುದು ದುರಂತವಾಗಿದೆ. ಮಕ್ಕಳಿಗೆ ನಮ್ಮ ನಾಡು,ನುಡಿ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು ಎಂದರು.ಶಿಕ್ಷಕ ಮುನಿರಾಯಾಣಪ್ಪ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಈ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು. ಗೌತಮ ಶೈಕ್ಷಣಿಕ ಮತ್ತು ಕವಿ ಕಾವ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ವಿ. ಲಕ್ಷ್ಮಯ್ಯ, ವಕೀಲ ಚಲಪತಿ, ಕವಿ ಕಾವ್ಯ ವೇದಿಕೆ ಅಧ್ಯಕ್ಷ ಜಿ.ಟಿ. ರಾಮಚಂದ್ರ, ಶರಣಪ್ಪ ಕಪ್ಪೂರ್, ಸಮಾಜ ಸೇವಕ ಸೈಯದ್ ಗುಲ್ಜಾರ್, ಮುರಳಿ ಇದ್ದರು.
ಮುಳಬಾಗಲಿಗಿಂದು ಮಾಜಿ ಸಿಎಂ ಕುಮಾರಸ್ವಾಮಿ
ಕೋಲಾರ: ಲೋಕಸಭಾ ಚುನಾವಣೆಗೆ ಕೋಲಾರ ಮೀಸಲು ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂಬಂಧ ಸೋಮವಾರ ಮುಳಬಾಗಿಲಿಗೆ ಬರುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಾಧ್ಯತೆಗಳಿವೆ. ಬೆಳಿಗ್ಗೆ 11 ಗಂಟೆಗೆ ಮುಳಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಳಬಾಗಿಲು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಜಿಲ್ಲಾ ಮುಖಂಡರು ಹಾಗೂ ಟಿಕೆಟ್ ಅಕಾಂಕ್ಷಿಗಳ ಜೊತೆ ಒಮ್ಮತದ ಅಭ್ಯರ್ಥಿಯ ಆಯ್ಕೆಗಾಗಿ ಚರ್ಚಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಜೆಡಿಎಸ್ನಿಂದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯರನ್ನು ಕಣಕ್ಕೆ ಇಳಿಸಲು ನಿರ್ಧರಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತಾದರೂ ಕೋಲಾರದಿಂದ ಸ್ಪರ್ಧಿಸಲು ಸಿದ್ದಯ್ಯ ಹಿಂದೇಟು ಹಾಕಿದ್ದರಿಂದ ಬೇರೆಯವರಿಗೆ ಅವಕಾಶ ಕಲ್ಪಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಬೆಂಗಳೂರು ವಿವಿಯ ಪ್ರೊ. ಮೈಲಾರಪ್ಪ ಅಕಾಂಕ್ಷಿಯಾಗಿದ್ದಾರೆ. ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಮಂಗಮ್ಮ ಮುನಿಸ್ವಾಮಿ ಅವಕಾಶ ನೀಡಿದರೆ ಸ್ಪರ್ಧಿಸಲು ಸೈ ಎಂದಿದ್ದಾರೆ. ಈ ನಡುವೆ ಉದ್ಯಮಿ ಕೇಶವ ಎಂಬುವರನ್ನು ಕಣಕ್ಕೆ ಇಳಿಸಲು ಜಿಲ್ಲಾ ಜೆಡಿಎಸ್ ಮುಖಂಡರು ಲಾಬಿ ಮಾಡುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಮಾಜಿ ಸಚಿವ ಶ್ರೀನಿವಾಸಗೌಡ, ಶಾಸಕರಾದ ಮಂಜುನಾಥಗೌಡ, ಕೃಷ್ಣಾರೆಡ್ಡಿ, ರಾಜಣ್ಣ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೋಲಾರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸನ ಮೂವರು ಶಾಸಕರು ಇರುವುದರಿಂದ ಗೆಲುವಿನ ಲೆಕ್ಕಾಚಾರ ಹಾಕಿರುವ ಜೆಡಿಎಸ್ ಮುಖಂಡರು ಪರಿಣಾಮಕಾರಿ ಹೋರಾಟ ನೀಡುವರೇ ಇಲ್ಲವೇ ನಾಮಕಾವಾಸ್ಥೆಗೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದೇ ಎಂಬುದು ಮುಳಬಾಗಿಲಿನಲ್ಲಿ ನಡೆಯುವ ಸಭೆಯನ್ನು ಅವಲಂಭಿತವಾಗಿದೆ.
ವಿಶೇಷ ಕೈಗಾರಿಕಾ ವಲಯ ಸ್ಥಾಪನೆ
ಮಾಲೂರು: ಕೇಂದ್ರ ಸಚಿವ ಆನಂದ್ ಶರ್ಮ ಅವರ ಮುತುವರ್ಜಿಯಿಂದ ರಾಜ್ಯದ ಕೋಲಾರ, ಗುಲ್ಬರ್ಗ ಹಾಗೂ ಬೀದರ್ನಲ್ಲಿ ವಿಶೇಷ ಕೈಗಾರಿಕಾ ವಲಯ ಸ್ಥಾಪಿಸಲು ಸಿದ್ಧತೆ ನಡೆದಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಪತ್ರಿಕಾಗೋಷ್ಠಿಠಿಯಲ್ಲಿ ಮಾತನಾಡಿ, ಜಿಲ್ಲೆಯ ಶ್ರೀನಿವಾಸಪುರ-ಮುಳಬಾಗಿಲು ನಡುವೆ 1,200 ಎಕರೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಯಾಗಲಿದೆ ಎಂದರು. ಜಿಲ್ಲಾಧ್ಯಕ್ಷ ಆನಿಲ್ ಕುಮಾರ್, ವಿ.ಆರ್. ಸುದರ್ಶನ್, ವೆಂಕಟ ಮುನಿಯಪ್ಪ, ಬಿಸ್ಸೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನರಾಯಪ್ಪ, ಮುನಿರಾಜು, ಚೆನ್ನಕೇಶವ ಇದ್ದರು.
ಕೈವಾರದಲ್ಲಿ ವಿಶೇಷ ಪೂಜೆಗಳು
ಚಿಂತಾಮಣಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕೈವಾರ ಅಮರನಾರಾಯಣಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಮಾ.10ರಂದು ವಿಶೇಷ ಪೂಜಾ ಕೈಕಂರ್ಯಗಳು ಆರಂಭವಾಗಲಿದೆ. ದೇವೆಂದ್ರನಿಂದ ಪ್ರತಿಷ್ಠಾಪಿಸಲಾಗಿರುವ ಅಮರನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಹೋಳಿ ಹುಣ್ಣಿಮೆಯಾದ ಮಾ.16 ರ ಭಾನುವಾರ ಮಧ್ಯಾಹ್ನ 1 ಕ್ಕೆ ನೆರೆವೇರಲಿದೆ. ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಶ್ರೀ ಕೃಷ್ಣಗಂಧೋತ್ಸವ ಸೇವೆಯನ್ನು ಸದ್ಗುರು ತಾತಯ್ಯನವರ ವತಿಯಿಂದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಸಲ್ಲಿಸಿದರು. ರಥೋತ್ಸವದ ಅಂಗವಾಗಿ ಮಾ.10ರಂದು ಅಂಕುರಾರ್ಪಣೆಯಿಂದ ಆರಂಭವಾಗುತ್ತದೆ. ಪ್ರತಿದಿನ ರಾತ್ರಿ ವಿಶೇಷ ಸಿಂಹವಾಹನೋತ್ಸವ, ಹನುಮಂತವಾಹನೋತ್ಸವ. ಶೇಷವಾಹನೋತ್ಸವ, ಗರುಡೋತ್ಸವ, ಚಿತ್ರಗೋಪಿರೋತ್ಸವ ಮುಂತಾದ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ. ರಥೋತ್ಸವದ ದಿನಗಳಂದು ವಿವಿಧ ಸಂಘ ಸಂಸ್ಥೆಗಳು, ಭಕ್ತಾಧಿಗಳು ಪಾನಕ ಪೂಜೆ ಸಂತರ್ಪಣೆ ಕಾರ್ಯಕ್ರಮಗಳು ನಡೆಯುತ್ತವೆ.