ಚುನಾವಣೆ ಬಳಿಕ ಎತ್ತಿನಹೊಳೆಗೆ ಎಳ್ಳುನೀರು
ಕ.ಪ್ರ.ವಾರ್ತೆ ಕೋಲಾರ ಮಾ.10
ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇರೋದು ಅನುಮಾನ. ಹಾಗೆಯೇ ಕೇಂದ್ರದಲ್ಲೂ ಮತ್ತೆ ಯುಪಿಎ ಸರ್ಕಾರ ರಚನೆ ಆಗೋದಿಲ್ಲ ಇದು ಶತಃಸಿದ್ಧ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಇದೇ ವೇಳೆ ಎತ್ತಿನಹೊಳೆಗೆ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಇದೊಂದು ಚುನಾವಣಾ ಗಿಮಿಕ್ ಲೋಕಸಭಾ ಚುನಾವಣೆ ಬಳಿಕ ಎತ್ತಿನಹೊಳೆ ಎಲ್ಲಿರುತ್ತದೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಕರ್ನಾಟಕದ ಮುಡಣ ಬಾಗಿಲು ಎಂದೇ ಕರೆಯಲ್ಪಡುವ ಮುಳಬಾಗಿಲು ಪಟ್ಟಣದಲ್ಲಿ 2014ರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ಸೋಲಿನ ಭಯದಿಂದ ಮತದಾರರ ಓಲೈಕೆಗಾಗಿ ಕಾಂಗ್ರೆಸ್ ನಾಯಕರು ಅಧಿಕಾರ ದುರ್ಬಳಕೆ ಹಾಗೂ ಹೆಚ್ಚಾಗಿ ಹಣ
ಖರ್ಚು ಮಾಡುವ ಸಾಧ್ಯತೆ ಇರುವುದರಿಂದ ಮತದಾರರು ಮೋಸ ಹೋಗಬಾರದೆಂದು ಕಿವಿಮಾತು ಹೇಳಿದರು.
ಜನತೆ ಮೇಲೆ ಹೊರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಇನ್ನು ಒಂದು ವರ್ಷವಾಗಿಲ್ಲ. ಆಗಲೇ ರು.17500 ಕೋಟಿ ಸಾಲ ಮಾಡಿ ಜನತೆಯ ಮೇಲೆ ಹೊರೆ ಬೀಳುವಂತೆ ಮಾಡಿದ್ದಾರೆ. ಅಹಿಂದ ವರ್ಗಕ್ಕೆ ರು.66 ಕೋಟಿ ಆರ್ಥಿಕ ನೆರವು ನೀಡುವುದರಲ್ಲೂ ತಾರತಮ್ಯ ತೋರಿದ್ದಾರೆ. ರೇಲ್ವೆ ಯೋಜನೆ, ನೀರಾವರಿ ಯೋಜನೆಗಳಿಗೆ ತರಾತೂರಿಯಲ್ಲಿ ಶಂಕುಸ್ಥಾಪನೆ ಮಾಡಿ ಮತದಾರರ ಕಿವಿಗೆ ಹೂವು ಹಾಗೂ ತಲೆಗೆ ಟೋಪಿ ಇಡಲು ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕೆಂದು ಹೇಳಿದರು.
ಸಿದ್ದರಾಮಯ್ಯ ಅವರಿಂದ ಹಣ ದುರ್ಬಳಕೆ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಯೋಜನೆ, ಮಠಗಳಿಗೆ ನೀಡಿದ ಆರ್ಥಿಕ ನೆರವಿನ ಬಗ್ಗೆ ಟೀಕೆ ಮಾಡಿದ್ದ ಸಿದ್ದರಾಮಯ್ಯ ಸಿಎಂ ಆದ ಮೇಲೆ ಮಾಡಿದ್ದು ಏನು? ಜಾಹೀರಾತುಗಳಿಗಾಗಿ ಕೋಟಿಗಟ್ಟಲೆ ಹಣ ದುರ್ಬಳಕೆ ಮಾಡಿದ್ದಾರಲ್ಲದೆ, ಸಮಯವನ್ನು ಸಹ ವ್ಯರ್ಥ ಮಾಡಿದ್ದಾರೆಂದು ಆರೋಪಿಸಿದರು.
ಜಾತಿ ಸಮಾವೇಶ ಹಾಗೂ ಶಂಕುಸ್ಥಾಪನೆಗಾಗಿ ಖರ್ಚು ಮಾಡಿರುವ ಹಣವನ್ನು ಶಾಶ್ವತ ನೀರಾವರಿ ಹಾಗೂ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಬಳಕೆ ಮಾಡಬಹುದಿತ್ತು ಎಂದು ಲೇವಡಿ ಮಾಡಿದರು.
ಅನ್ನಭಾಗ್ಯ ಯೋಜನೆಗೆ ವಿರೋಧವಿಲ್ಲ. ಆದರೆ, ಇದಕ್ಕಾಗಿ ರು.4300 ಕೋಟಿ ಸಬ್ಸಿಡಿ ನೀಡುವ ಬದಲು ಶಾಶ್ವತ ನೀರಾವರಿಗಾಗಿ ಹೆಚ್ಚಿನ ಅಧ್ಯತೆ ನೀಡಬೇಕಾಗಿತ್ತು. ಕೆಲಸಕ್ಕೆ ಬಾರದ ಯೋಜನೆಗಳನ್ನು ಘೋಷಣೆ ಮಾಡಿರುವ ಸಿದ್ದರಾಮಯ್ಯನವರು ಜನರ ಬದುಕಿನ ಬಗ್ಗೆ ಕಾಳಜಿಯಿದ್ದರೆ ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರನ್ನು ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಿ ಜನರಿಗೆ ಕುಡಿಯಲು ನೀರು ಒದಗಿಸಲಿ ಎಂದು ಸವಾಲು ಹಾಕಿದರು.
ವಿನಾಯಕಗೆ ಕುಮಾರನ ಪೂಜೆ
ಕೋಲಾರ: ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಕುರುಡುಮಲೆ ಗಣಪ ರಾಜಕಾರಣಿಗಳಿಗೆ ಆರಾಧ್ಯದೈವ. ಕರ್ನಾಟಕದ ಮುಡಣ ಬಾಗಿಲು ಎಂದೇ ಪ್ರಸಿದ್ಧ ಗಳಿಸಿರುವ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿಯನ್ನು ಪೂಜಿಸಿದರೆ ಬಯಸಿದ ಆಸೆ ಈಡೇರುತ್ತದೆ ಎಂಬುವ ನಂಬಿಕೆಯಿಂದಾಗಿ ಬಹುತೇಕ ಎಲ್ಲಾ ರಾಜಕಾರಣಿಗಳು ತಮ್ಮ ಕಾರ್ಯಗಳನ್ನು ಆರಂಭಿಸುವ ಮುನ್ನ ಗಣಪನಿಗೆ ಪೂಜೆ ಸಲ್ಲಿಸುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ.
ಎಸ್.ಎಂ. ಕೃಷ್ಣರವರು ಪಾಂಚ್ಯಜನ್ಯ ಯಾತ್ರೆ ಆರಂಭಿಸಿದಾಗಲೂ ಕುರುಡುಮಲೆಗೆ ಬಂದು ಗಣಪತಿಯನ್ನು ಆರಾಧಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಅನೇಕ ಸಾರಿ ದೇವಾಲಯಕ್ಕೆ ಬಂದು ಹೋಗಿದ್ದಾರೆ. ಯಡಿಯೂರಪ್ಪ, ಸದಾನಂದಗೌಡ, ಶೋಭ ಕಂದ್ಲಾಜೆ ಸೇರಿದಂತೆ ಅನೇಕರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕರ್ನಾಟಕದವರು ಮಾತ್ರವಲ್ಲದೆ ಆಂಧ್ರ,ತಮಿಳುನಾಡು,ಕೇರಳ ರಾಜ್ಯದಿಂದಲೂ ರಾಜಕಾರಣಿಗಳು ಇಲ್ಲಿಗೆ ಬಂದು ಪೂಜೆ ನೆರವೇರಿಸಿದ್ದಾರೆ. ಜಾತ್ಯತೀತ ತತ್ವಗಳ ಪ್ರತಿಪಾದಕರು ಎಂದು ಹೇಳಿಕೊಳ್ಳುತ್ತಲೇ ದೈವತ್ವದ ಮೇಲೆ ಅಪಾರ ನಂಬಿಕೆ, ನಿಷ್ಠೆಯನ್ನು ಹೊಂದಿರುವ ಮಾಜಿ ಸಿಎಂ ಕುಮಾರಸ್ವಾಮಿ ಸಹ ಜೆಡಿಎಸ್ ಪರ ಪ್ರಚಾರಕ್ಕೆ ಮುನ್ನ ಗಣಪತಿಯನ್ನು ಪೂಜಿಸಿದವರಾಗಿದ್ದಾರೆ. ಸೋಮವಾರ ಕುರುಡಮಲೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರವೇ ಮುಳಬಾಗಿಲು ಪಟ್ಟಣದಲ್ಲಿ ಜೆಡಿಎಸ್ ಪ್ರಚಾರ ಸಭೆಗೆ ಚಾಲನೆ ನೀಡಿದರು.
ಎಸ್.ಎಂ. ಕೃಷ್ಣನವರ ಜೊತೆ ಕಾಂಗ್ರೆಸ್ನಲ್ಲಿದ್ದಾಗ ಪಾಂಚ್ಯಜನ್ಯ ಯಾತ್ರೆಯಲ್ಲಿ ಪಾಲ್ಗೊಂಡದ್ದ ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಕೃಷ್ಣಪ್ಪ ಸಹ ದೇವರ ದರ್ಶನ ಪಡೆದರು.
ನೀರು ನಮ್ಮಿಂದ ಮಾತ್ರ ಸಾಧ್ಯ...
ತಮಿಳುನಾಡು ಸರ್ಕಾರ ಕುಡಿಯುವ ನೀರಿಗಾಗಿ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ. ಇದೇ ರೀತಿ ರಾಜ್ಯ ಸರ್ಕಾರ ಮೇಕೆದಾಟು ಬಳಿ ಯೋಜನೆ ಜಾರಿಗೆ ತಂದರೆ ಯಾವುದೇ ಕಾನೂನು ಉಲ್ಲಂಘನೆ ಆಗುವುದಿಲ್ಲ. ಆದರೆ ಇದಕ್ಕೆ ಗುಂಡಿಗೆ ಅಗತ್ಯವೆಂದು ಮಾರ್ಮಿಕವಾಗಿ ನುಡಿದರಲ್ಲದೆ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಿಲ್ಲ. ದೇವೇಗೌಡ ಮತ್ತವರ ಮಗನಾದ ನನ್ನಿಂದ ಮಾತ್ರ ಸಾಧ್ಯವೆಂದು ಹೇಳಿಕೊಂಡರು.
ರಾಜಕೀಯ ಗಿಮಿಕ್: ಎತ್ತಿನಹೊಳೆ ಯೋಜನೆಗೆ ಡಿಪಿಆರ್ ಆಗುವುದಕ್ಕಿಂತ ಮುಂಚೆ ಶಂಕುಸ್ಥಾಪನೆ ಮಾಡಿದ್ದು ಸರಿಯಲ್ಲ, ಇದೊಂದು ರಾಜಕೀಯ ಗಿಮಿಕ್, 24 ಟಿಸಿಎಂ ನೀರು ಸಿಗುತ್ತದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ, ಎತ್ತಿನ ಹೊಳೆಯಿಂದ ಕೇವಲ 6ರಿಂದ 7 ಟಿಎಂಸಿ ನೀರು ಸಿಗಬಹುದು,ಈ ನೀರು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಸಾಕಾಗೋಲ್ಲ. ಆದರೂ ಸಿದ್ದರಾಮಯ್ಯನವರು ಕೇಳಿದವರಿಗೆಲ್ಲ ಎತ್ತಿನ ಹೊಳೆಯಿಂದ ನೀರು ಕೊಡುವುದಾಗಿ ಪೊಳ್ಳು ಭರವಸೆ ನೀಡುತ್ತಿದ್ದಾರೆಂದು ದೂರಿದರು. ಎತ್ತಿನಹೊಳೆಗೆ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಲೋಕಸಭಾ ಚುನಾವಣೆ ಬಳಿಕ ಎತ್ತಿನಹೊಳೆ ಎಲ್ಲಿರುತ್ತದೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಮುನಿಯಪ್ಪ ದಾರಿ ತಪ್ಪಿಸುತ್ತಾರೆ...
ಕೋಲಾರ: ಪ್ರತಿ ಬಾರಿಯು ಮತದಾರರನ್ನು ದಾರಿ ತಪ್ಪಿಸುವುದು ಹಾಗೂ ಅಪಪ್ರಚಾರ ಮಾಡುವುದನ್ನು ವಾಡಿಕೆ ಮಾಡಿಕೊಂಡಿರುವ ಕೆ.ಹೆಚ್. ಮುನಿಯಪ್ಪನವರು ಈ ಬಾರಿಯೂ ಇದೇ ರೀತಿ ಅಪಪ್ರಚಾರ ಮಾಡುವ ಸಾಧ್ಯತೆಗಳಿರುವುದರಿಂದ ಕಾರ್ಯಕರ್ತರು ಹಾಗೂ ಮತದಾರರು ಬಲಿಯಾಗಬಾರದೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಮುಳಬಾಗಿಲು ಪಟ್ಟಣದಲ್ಲಿ ಸೋಮವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವೇಗೌಡರು, ಕುಮಾರಸ್ವಾಮಿ ಆಶೀರ್ವಾದ ತನ್ನ ಮೇಲಿದೆ, ಜೆಡಿಎಸ್ ತನ್ನ ಬೆಂಬಲಿಸುತ್ತಿದೆ ಎಂದು ಕೆ.ಹೆಚ್. ಮುನಿಯಪ್ಪ ಅಪಪ್ರಚಾರ ಮಾಡಬಹುದು. ಆದರೆ, ಜೆಡಿಎಸ್ನಿಂದ ಈ ಬಾರಿ ಪ್ರಬಲ ಯುವ ಅಭ್ಯರ್ಥಿ ಕೇಶವ ಅವರನ್ನು ಕೋಲಾರ ಕ್ಷೇತ್ರದಿಂದ ಕಣಕ್ಕೆ ಇಳಿಸುತ್ತಿದ್ದು ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡವೆಂದರು.
ಕಳೆದ ಬಾರಿ ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ಬಿಜೆಪಿಯ ಡಿ.ಎಸ್. ವೀರಯ್ಯನವರಿಗೆ ಬೆಂಬಲ ನೀಡುವ ಬದಲು ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಲ್ಲಿ ಮುನಿಯಪ್ಪ ಸೋಲುತ್ತಿದ್ದರು. ಈ ಬಾರಿ ಎಲ್ಲ ಗೊಂದಲಕ್ಕೆ ತೆರೆ ಎಳೆದು ಕೇಶವ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ, ಇವರ ಬಗ್ಗೆಯೂ ಕೆಲವರು ಅಪಪ್ರಚಾರ ಮಾಡಿದ್ದರು. ಕೆಲವು ದಾಖಲೆಗಳನ್ನು ತಮಗೆ ನೀಡಿ ಕೇಶವ ಅನೇಕರಿಗೆ ಟೋಪಿ ಹಾಕಿದ್ದಾರೆಂದು ದೂರಿದ್ದರು. ಆದರೆ, ಇದರಲ್ಲಿ ಹುರುಳಿಲ್ಲವೆಂಬುದು ಗೊತ್ತಾದ ಮೇಲೆ ಕೇಶವ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಕೇಶವ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ನಡುಕ ಉಂಟಾಗಿದೆ. ಆತಂಕದಿಂದಾಗಿ ಸುಳ್ಳು ಹೇಳುತ್ತಿದ್ದಾರೆಂದ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿಯಾಗಲು ಅವಕಾಶ ನೀಡುವಂತೆ ನನ್ನ ಬಳಿ ಆಕಾಂಕ್ಷಿಯೊಬ್ಬರು ಬಂದಿದ್ದರು, ನಾನಾಗಲಿ, ದೇವೇಗೌಡರಾಗಲಿ ಆ ಮನುಷ್ಯನಿಗೆ ಯಾವುದೇ ಆಶ್ವಾಸನೆ ನೀಡಿಲ್ಲವಾದರೂ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆಂದು ಪ್ರೊ. ಮೈಲಾರಪ್ಪ ಹೆಸರು ಹೇಳದೆ ಟೀಕಿಸಿದರು. ಕೇಶವ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಬೇರೆಯವರನ್ನು ಅಭ್ಯರ್ಥಿಯನ್ನಾಗಿ ಮಾಡಲ್ಲ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯನವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಉದ್ದೇಶಿಸಿದ್ದು ನಿಜ. ಜೆಡಿಎಸ್ ಸೇರಿದ ಸಿದ್ದಯ್ಯ ಒಂದು ತಿಂಗಳು ನಮ್ಮ ಜೊತೆ ಓಡಾಡಿದ್ದರು. ಆದರೆ, ಕಾಂಗ್ರೆಸ್ ಮುಖಂಡರು ಇವರ ಮೇಲೆ ಒತ್ತಡ ತಂದು ಸ್ಪರ್ಧಿಸದಂತೆ ಮಾಡಿದ್ದಾರೆಂದು ಆರೋಪಿಸಿದರು. ಸಿದ್ದಯ್ಯ ಅವರು ಸೇವೆಯಲ್ಲಿದ್ದಾಗ ಮಾಡಿರಬಹುದಾದ ಸಣ್ಣ ತಪ್ಪುಗಳನ್ನು ಮುಂದಿಟ್ಟುಕೊಂಡು ಭಯ ಹುಟ್ಟಿಸಿ ಓಡಿಸಿದ್ದರಿಂದ ಪಕ್ಷವು ಕೇಶವ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಇವರನ್ನು ಸಹ ಓಡಿಸಲು ಪ್ರಯತ್ನಗಳು ನಡೆದಿದೆಯಾದರೂ ಕೋಲಾರದಲ್ಲಿ ಸ್ಪರ್ಧಿಸಲು ಧೈರ್ಯ ತೋರಿರುವುದರಿಂದ ನಾವೆಲ್ಲ ಅವರ ಬೆನ್ನಿಗೆ ನಿಂತಿದ್ದೇವೆಂದು ತಿಳಿಸಿದರು.
ಕೆ.ಹೆಚ್. ಮುನಿಯಪ್ಪ ಬಳಿ ದೊಡ್ಡಿಗೆ ಕೊರತೆ ಇಲ್ಲ, ಸಾಕಷ್ಟು ಹಣ ಮಾಡಿದ್ದಾರೆ, ಚುನಾವಣೆಯಲ್ಲಿ ಆಡಳತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಮತದಾರರು ಎಚ್ಚರವಾಗಿರಬೇಕೆಂದು ಹೇಳಿದರು.
ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಮತ ನೀಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ದಮಕಿ ಹಾಕುತ್ತಿದ್ದಾರೆ. ಮೋದಿ ಸಹ ಇದೇ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜೆಡಿಎಸ್ ಅನ್ನು ದುರುಪಯೋಗ ಮಾಡಿಕೊಂಡು ರಾಜಕೀಯ ಲಾಭಕ್ಕಾಗಿ ಯತ್ನಿಸುತ್ತಿವೆ ಎಂದು ದೂರಿದರು.