ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ ಇರಲಿ
ಮಾಲೂರು: ಬರಹಗಾರರ ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ ಇರಬೇಕಾಗಿರುವುದು ಅವಶ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಎ.ಅಶ್ವಥ್ ರೆಡ್ಡಿ ಹೇಳಿದರು.
ಅವರು ಇಲ್ಲಿನ ಪತ್ರಕರ್ತ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ ನಾ ಕಂಡ ಕವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಬರಹಗಾರರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ತಮ್ಮಲ್ಲಿರುವ ಜ್ಞಾನವನ್ನು ಬರವಣಿಗೆ ಮೂಲಕ ಹೊರತಂದು ಇತರರಿಗೂ ಹರಿಸಬೇಕು.
ಈ ನಿಟ್ಟಿನಲ್ಲಿ ತಮ್ಮ ಸಮಾಜ ಮುಖಿ ಬರವಣಿಗೆಯಿಂದ ನಾ ಕಂಡ ಕವಿಯಾಗಿರುವ ನಾ.ಗುರುಮೂರ್ತಿ ಉತ್ತಮ ಉದಾಹರಣೆಯಾಗಿದ್ದಾರೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಸ್ಥಳೀಯ ಕವಿ ಪ್ರತಿಭೆಗಳನ್ನು ಗುರ್ತಿಸುವ ನಾ ಕಂಡ ಕವಿ ಕಾರ್ಯಕ್ರಮ ಮಾದರಿಯಾಗಿದ್ದು,ಇತರೆ ತಾಲೂಕು ಘಟಕಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯ ಪ್ರತಿಭೆಗಳಿಗೆ ಉತೇಜನ ನೀಡಬೇಕಾಗಿದೆ ಎಂದರು.
ಕವಿ ಸತೀಶ್ ಕಾಟೇರಿ, ಗಾಯಕ ಗುಲ್ಜಾರ್ ಮಾತನಾಡಿದರು. ಇದೇ ಸಂರ್ದದಲ್ಲಿ ಮಾಸ್ತಿ ಕೃಷ್ಣಪ್ಪ ರಚಿಸಿದ್ದ ನಾ ಕಂಡ ಕವಿ ಕಾರ್ಯಕ್ರಮದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಯಿತು. ನ. ಗುರುಮೂರ್ತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕವಿ ಜ.ಮು. ಚಂದ್ರ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಡಿ.ಟಿ. ಪ್ರಸನ್ನ, ಸುರೇಶ್ ಜಕಾತಿ, ಪಿ. ನಾರಾಯಣಪ್ಪ, ಆನೇಪುರ ದೇವರಾಜು,ನಾರಿಗಾನಹಳ್ಳಿ ಶ್ರೀನಿವಾಸ್, ಕೊಳಾಲಪ್ಪ,ಶ್ರೀನಿಧಿ ಶ್ರೀನಿವಾಸ್, ಸಿರಾಜ್ ಅಹ್ಮದ್, ಡಾ.ನಾ. ಮುನಿರಾಜು, ಶ್ರೀನಿವಾಸ್, ಸರ್ವೆಶ್ ಬಂಟಹಳ್ಳಿ, ಪ್ರಶಾಂತ್ ವಹ್ನಿ, ತಿಮ್ಮರಾಯಪ್ಪ, ಮುರಳಿ, ಪ್ರಕಾಶ್, ಕೇಶವಮೂರ್ತಿ, ಮಣಿ ಕಂಠ ಇದ್ದರು.
ಜಿಲ್ಲಾ ಬಿಜೆಪಿ ಕಚೇರಿ ಉದ್ಘಾಟನೆ
ಚಿಕ್ಕಬಳ್ಳಾಪುರ: ನಗರದ ಪ್ರಶಾಂತಿ ಬಾಲಮಂದಿರ ಸಮೀಪ ಪ್ರಾರಂಭವಾಗುತ್ತಿರುವ ನೂತನ ಜಿಲ್ಲಾ ಬಿಜೆಪಿ ಕಚೇರಿಯನ್ನು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಉದ್ಘಾಟಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮದೇ ಆದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಚುನಾವಣೆಯಲ್ಲಿ ಗೆದ್ದ ನಂತರ ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತೇನೆ. ನದಿಗಳ ಜೋಡಣೆ ಮೂಲಕ ಈ ಭಾಗಕ್ಕೆ ನೀರಾವರಿ ಸೌಲಭ್ಯ, ಉದ್ಯೋಗಾವಕಾಶ ನೀಡಲು ಕೈಗಾರಿಕೆ ಸ್ಥಾಪನೆಯಾಗುವಂತೆ ಮಾಡಲು ಪ್ರಯತ್ನಿಸುತ್ತೇನೆ
ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಯಣರೆಡ್ಡಿ, ನಗರ ಘಟಕ ಅಧ್ಯಕ್ಷ ಸುಬ್ಬರಾಜು, ತಾಲೂಕು ಅಧ್ಯಕ್ಷ ಅವುಲಗುರ್ಕಿ ಶ್ರೀನಿವಾಸ್, ಮುಖಂಡರಾದ ಡಾ.ಮಂಜುನಾಥ್, ಎ.ವಿ.ಬೈರೇಗೌಡ ಮುಂತಾದವರು ಉಪಸ್ಥಿತರಿದ್ದರು.