ಬೇಡಿಕೆ ಈಡೇರಿಕೆಗಾಗಿ ಸಾರಿಗೆ ಸಿಬ್ಬಂದಿ ದಿಢೀರ್ ಮುಷ್ಕರ
ಚಿಂತಾಮಣಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಆರೋಪಿಸಿ ಸೋಮವಾರ ಸಾಮೂಹಿಕವಾಗಿ ಕರ್ತವ್ಯ ಬಹಿಷ್ಕರಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ವಿನಾಕಾರಣ ನಿರ್ವಾಹಕ ಹಾಗೂ ಚಾಲಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿಗಳ ಬಂಧನಕ್ಕೆ ಒತ್ತಾಯ: ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜಪ್ಪ, ಚಿಕ್ಕಬಳ್ಳಾಪುರ ಘಟಕದ ಅಧಿಕಾರಿ ವಿಶ್ವನಾಥ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಪ್ರಯಾಣಿಕರಿಗೆ ತೊಂದರೆ ಮಾಡದಂತೆ ಪ್ರತಿಭಟನೆ ಹಿಂಪಡೆದು ಸೇವೆಗೆ ಮುಂದಾಗಬೇಕೆಂದು ಮತ್ತು ಯಾರೇ ತಪ್ಪು ಮಾಡಿರಲಿ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲು ಪ್ರಮಾಣಿಕವಾಗಿ ನ್ಯಾಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಕಾರ್ಮಿಕ ಮುಖಂಡರಾದ ಮುನಿರೆಡ್ಡಿ, ವೆಂಕಟರವಣಪ್ಪ, ಮೋಹನ್, ರಾಜು, ರಮೇಶ್, ಆಂಜಪ್ಪ, ಇಸ್ಮಾಯಿಲ್ , ರವಿ, ನಾರಾಯಣಸ್ವಾಮಿ, ನರಸಪ್ಪ, ಅಶ್ವಥ್, ವೆಂಕಟರವಣಪ್ಪ ಪ್ರತಿಭಟನೆ ನೇತೃತ್ವವಹಿಸಿದ್ದರು.
ಪರದಾಡಿದ ಪ್ರಯಾಣಿಕರು...
ಚಿಂತಾಮಣಿ: ಕೆಎಸ್‌ಆರ್‌ಟಿಸಿ ನಿರ್ವಾಹಕ ಹಾಗೂ ಚಾಲಕರು ಏಕಾಏಕಿ ಮುಷ್ಕರ ಹಮ್ಮಿಕೊಂಡ ಪರಿಣಾಮ, ಸಾವಿರಾರು ಪ್ರಯಾಣಿಕರು ಪರದಾಡಬೇಕಾದ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.
ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಿಲ್ದಾಣದಲ್ಲಿ ಏಕಾಏಕಿ ಕೆಂಪು ಬಸ್ಸುಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹೋಗದಂತೆ ದಿಗ್ಬಂಧನ ಹಾಕಿದ ಪರಿಣಾಮ ವಿದ್ಯಾರ್ಥಿಗಳು, ಮಹಿಳೆಯರು, ನೌಕರರರು, ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಬೆಳಗ್ಗೆ 7 ರಿಂದ 10 ಗಂಟೆ ತನಕ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಹೋಗದಂತೆ ಒತ್ತಡ ಏರಿ ಚಾಲಕರು ಹಾಗೂ ನಿರ್ವಾಹಕರು ಏಕಾಏಕಿ ನಿಲ್ದಾಣದಲ್ಲಿ ಕಾರ್ಮಿಕರು ಧರಣಿ ಕುಳಿತ ಪರಿಣಾಮ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು. ಪರೀಕ್ಷೆ ವೇಳೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಕ್ಕೆ ಕಾರಣರಾದವರ ವಿರುದ್ಧ ನೂರಾರು ವಿದ್ಯಾರ್ಥಿಗಳು ಕಿಡಿಕಾಡಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅನಾಹುತಗಳನ್ನು ತಪ್ಪಿಸಲು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.