ಅಗೋಚರ ಮತದಾರರು ನನ್ನ ಪರವಿದ್ದಾರೆ: ರಾಮಯ್ಯ
ಕ.ಪ್ರ.ವಾರ್ತೆ ಕೋಲಾರ ಮಾ. 13
ಮೂಟೆಗಳಲ್ಲಿ ನೋಟುಗಳನ್ನು ಹೊತ್ತು ತಂದು ರಾಜಕಾರಣವನ್ನು ಕಲುಷಿತಗೊಳಿಸಿರುವ ವ್ಯಕ್ತಿಗಳನ್ನು ಹಾಗೂ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ನೆಲ ಸಂಸ್ಕೃತಿಯನ್ನೇ ಈ ದೇಶದ ನ್ಯಾಯಾವನ್ನಾಗಿಸುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷಕ್ಕೆ ಸೇರಿರುವುದಾಗಿ ಕೋಲಾರ ಮೀಸಲು ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿರುವ ಸಾಹಿತಿ, ಕವಿ, ರಂಗ ಕರ್ಮಿಯೂ ಆದ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಂಬಿರುವ ಸಿದ್ಧಾಂತ ಹಾಗೂ ಎಎಪಿಯ ಸಿದ್ಧಾಂತ ಎರಡು ಒಂದೇ ಆಗಿರುವುದರಿಂದ ಕಳೆದ 20 ದಿನಗಳ ಹಿಂದೆ ಎಎಪಿ ಸೇರಿದ್ದೇನೆ. ಹಣಬಲ, ತೋಳ್ಬಲದ ಮೊಲಕ ರಾಜಕಾರಣ ಮಾಡುವ ಶಕ್ತಿ ನನ್ನಲ್ಲಿ ಇಲ್ಲದಿದ್ದರೂ ಕೋಲಾರ ಕ್ಷೇತ್ರದಲ್ಲಿನ ಅಘೋಚರ ಮತದಾರರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿಯವರು ಇಷ್ಟು ದಿನ ಮಾಡಿರುವ ಭ್ರಷ್ಟಾಚಾರ, ಅನಾಚಾರಗಳಿಂದಾಗಿ ದೇಶದ ಸ್ಥಿತಿ ಚಿಂತಾಜನಿಕವಾಗಲು ಕಾರಣವಾಗಿದೆ, ಭೂಗಳ್ಳರು, ವಿದೇಶಿ ಕಂಪನಿಗಳು ಬಡವರ ಭೂಮಿಯನ್ನು ಕಬಳಿಕೆ ಮಾಡಿ ನೆಲದ ಸಂಸ್ಕೃತಿಗೆ ಅಪಚಾರವೆಸಗಿದ್ದಾರೆ. ರಾಜ್ಯದಲ್ಲಿ ಭೂಮಿ ಕಬಳಿಕೆ ಆಗುವುದಕ್ಕೆ ಮೊದಲು ಅವಕಾಶ ನೀಡಿದ್ದೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ನರೇಂದ್ರ ಮೋದಿ ಮಿತ್ತಲ್, ಅಂಬಾನಿಯ ಪರವಾಗಿ ರಾಜಕಾರಣ ಮಾಡುತ್ತಿದ್ದಾರೆ, ಕಾಂಗ್ರೆಸ್ ತನ್ನ ಉದ್ದೇಶಗಳನ್ನು ಗಾಳಿಗೆ ತೂರಿದೆ, ದೇಶದಲ್ಲಿ ಸಧ್ಯಕ್ಕೆ ಜನಪರವಾದ ಕಾಳಜಿವೊಂದಿರುವ ಪಕ್ಷವೆಂದರೇ ಅದು ಆಮ್ ಆದ್ಮಿ ಪಕ್ಷ ಎಂದು ಸಮರ್ಥನೆ ಮಾಡಿಕೊಂಡರು.
ಎಎಪಿ ದೆಹಲಿಯಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಕೇಜ್ರಿವಾಲ್ ಮುಷ್ಕರ ನಡೆಸಿ ಅರಾಜಕತೆ ಉಂಟು ಮಾಡಿದ್ದು, ಇತ್ತೀಚೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕೋಟಿಗಾನಹಳ್ಳಿ ರಾಮಯ್ಯ ತಮ್ಮದೇ ದಾಟಿಯಲ್ಲಿ ಸಮರ್ಥನೆ ಮಾಡಿಕೊಂಡರಲ್ಲದೆ, ಕೇಂದ್ರದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿಗೆ ಸಾಕಷ್ಟು ಉತ್ತಮ ಯೋಜನೆಗಳು ಜಾರಿಗೆ ಬರಲಿವೆ ಎಂದರು.
ಮತದಾರರು ಆಶೀರ್ವಾದ ಮಾಡಿದಲ್ಲಿ ಕೋಲಾರದಿಂದ ವಿದೇಶಿ ಕಂಪನಿಗಳನ್ನು ಓಡಿಸುತ್ತೇನೆ, ದೇಶದಲ್ಲಿ ನೆಲಸಿರುವ ವಿದೇಶಿ ಕಂಪನಿಗಳು ನೆಲದ ಸಂಸ್ಕೃತಿಯನ್ನು ಪಾಲಿಸುವಂತೆ ಮಾಡುತ್ತೇನೆ, ಪ್ರಜಾಪ್ರಭುತ್ವಕ್ಕೆ ಹಿಡಿದಿರುವ ಗ್ರಹಣ ಬಿಡಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ಎಎಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡುವುದಾಗಿ ತಿಳಿಸಿದರು.
ಕೋಲಾರ ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಕೆ.ಹೆಚ್. ಮುನಿಯಪ್ಪನವರು ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲಾಗಲಿಲ್ಲ, ರೈತರ ಭೂಮಿಯು ವಿದೇಶಿ ಕಂಪನಿಗಳ ಪಾಲಾಗುವಂತೆ ಮಾಡಿದ್ದಾರೆ, ಜನತೆ ಈ ಬಾರಿ ಮುನಿಯಪ್ಪನವರಿಗೆ ಪಾಠ ಕಲಿಸಲು ಸಿದ್ಧರಾಗಿದ್ದಾರೆಂದು ಹೇಳಿದರು.
ನಾನೇನು ಏಕಾಂಗಿ ಅಲ್ಲ, ರಾಜಕೀಯ ಪ್ರದೇಶದಿಂದಾಗಿ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಯಾವುದೇ ಅಪಾಯವಿಲ್ಲ, ಎಲ್ಲಾ ವರ್ಗಗಳ ಬೆಂಬಲದಿಂದ ಚುನಾವಣೆಯಲ್ಲಿ ಗೆಲ್ಲುವುದಾಗಿ ನುಡಿದರು.