ಮತಗಟ್ಟೆಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ
ಕೆಜಿಎಫ್: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಎಲ್ಲ ಬಿಎಲ್‌ಒಗಳು, ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳು ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಗೆ ಸೇರುವ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾಧಿಕಾರಿ ಜಗದೀಶ್ ತಿಳಿಸಿದರು.
ನಗರಸಭೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತಗಟ್ಟೆಗಳ ಬಗ್ಗೆ ಮತ್ತು ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಅಂಥವರಿಗೆ ನೋಟಿಸ್ ಜಾರಿ ಮಾಡುವುದಾಗಿ ಎಚ್ಚರಿಸಿದರು.
ರಾಬರ್ಟ್‌ಸನ್‌ಪೇಟೆ, ಬೇತಮಂಗಲ, ಸುಂದರಪಾಳ್ಯ ಮತ್ತು ಕ್ಯಾಸಂಬಳ್ಳ ಹೋಬಳಿಗಳ ಪ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಚಿತ್ರೀಕರಣ ತಂಡ, ಎಂಸಿಎಂಸಿ ತಂಡ, ಎಸ್‌ಎಸ್ ತಂಡ ಹಾಗೂ ಮುಖ್ಯವಾಗಿ ಸೆಕ್ಟರ್ ಹೆಚ್ಚು ಜವಾಬ್ದಾರಿಯನ್ನು ಹೊಂದಿದ್ದು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ತಮಗೆ ಕಂಡು ಬರುವ ಲೋಪದೋಷಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
ಅದೇ ರೀತಿ ಕೆಜಿಎಫ್‌ನ ಸುಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪೊಲೀಸ್ ಇಲಾಖೆ ಮತ್ತು ಚುನಾವಣಾ ತಂಡಗಳು ವಿವಿಧ ರಾಜಕೀಯ ಪಕ್ಷಗಳು ನೀತಿಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಸಮುದಾಯದವರಿಗೂ ರಾತ್ರಿ 10 ಗಂಟೆ ಮೇಲೆ ರಸಮಂಜರಿ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದ್ದು, ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.
ಇನ್ನೆರಡು ದಿನಗಳಲ್ಲಿ ಮತ್ತೊಂದು ಸಭೆಯನ್ನು ನಡೆಸುವುದಾಗಿ ತಿಳಿಸಿದ ಅವರು, ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ, ಬಿಎಲ್‌ಒಗಳು ಮತ್ತು ಪ್ಲೈಯಿಂಗ್ ಸ್ಕ್ವಾಡ್‌ಗಳೊಂದಿಗೆ ಗಡಿ ಭಾಗದ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣೆಗೆ ಬೇಕಾದ ಸಿದ್ಧತೆಗೆ ಅಗತ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು. ನಗರಸಭೆ ಪೌರಾಯುಕ್ತ ವಿ.ಬಾಲಚಂದ್ರ, ಕೆಯುಡಿಎ ಪೌರಾಯುಕ್ತ ಭೀಮನೀಡಿ, ವಿಶೇಷ ತಹಸೀಲ್ದಾರ್ ವೆಂಕಟರಾಮಯ್ಯ, ಕಂದಾಯ ಇಲಾಖಾಧಿಕಾರಿ ರಘುರಾಮ್‌ಸಿಂಗ್, ಜಲಮಂಡಳಿ ಕಾರ್ಯಪಾಲಕ ಅಭಿಯಂತರ ರಘುನಾಥಶೆಟ್ಟಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.