ಮಲ್ಲಿಕಾರ್ಜುನಯ್ಯಗೆ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ
ಕೋಲಾರ: ಲೋಕಸಭೆಯ ಮಾಜಿ ಉಪ ಸ್ಪೀಕರ್ ಹಾಗೂ ಬಿಜೆಪಿ ಮುಖಂಡ ಎಸ್. ಮಲ್ಲಿಕಾರ್ಜುನಯ್ಯನವರ ನಿಧನಕ್ಕೆ ಕೋಲಾರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖಂಡರು ಮಲ್ಲಿಕಾರ್ಜುನಯ್ಯನವರ ಸೇವೆ, ವ್ಯಕ್ತಿತ್ವಗಳ ಕುರಿತು ಮಾತನಾಡಿ ಜನಸಂಘ,ಆರ್.ಎಸ್.ಎಸ್, ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಸ್ಮರಿಸಿದರು. ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿ ಜಾಮೀನುಲ್ಲಾಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಗೇರಿ ನಾರಾಯಣಸ್ವಾಮಿ, ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಸಾಹುಕಾರ್ ಶಂಕರಪ್ಪ, ನಗರ ಅಧ್ಯಕ್ಷ ಜಯಂತಿಲಾಲ್ ಜೈನ್, ಪ್ರಧಾನ ಕಾರ್ಯದರ್ಶಿ ಸುರೇಶ್, ಓಹೀಲೇಶ್, ನರೇಶ್, ಮಮತಮ್ಮ, ರಾಜೇಶ್ವರಿ, ಮಂಜುಳ, ಶಿಳ್ಳೆಂಗೆರೆ ಮಹೇಶ್, ಅಲ್ಲಿಕುಂಟೆ ಶ್ರೀನಿವಾಸ ಎನ್. ಚಲಪತಿ, ಅಬ್ಬಣಿ ವೆಂಕಟೇಶಪ್ಪ, ಶಿವಶಂಕರೇಗೌಡ ಇದ್ದರು.
ನಿಮ್ಮ ಮತ ನಿಮ್ಮ ಹಕ್ಕು
ಶ್ರೀನಿವಾಸಪುರ: ಮತದಾನ ಪ್ರತಿ ಭಾರತೀಯನ ಹಕ್ಕು. ಆದನ್ನು ಚಲಾಯಿಸುವ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳಿವೆ ಎಂದು ಖಾತರಿಪಡಿಸಿಕೊಳ್ಳುವ ಬಗ್ಗೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಪಟ್ಟಣದಲ್ಲಿ ಅರಿವು ಅಭಿಯಾನ ನಡೆಸಿದರು. ನಿಮ್ಮ ಮತ ನಿಮ್ಮ ಹಕ್ಕು ಎಂಬ ಘೋಷಣೆಗಳನ್ನು ಕೂಗುತ್ತಾ, ಈ ದೇಶಕ್ಕೆ ಉಜ್ವಲ ಭವಿಷ್ಯವನ್ನು ರೂಪಿಸುವಂಥ ನಾಯಕನನ್ನು ಹಳ್ಳಿಯಿಂದ ಆರಿಸಿ ದಿಲ್ಲಿಗೆ ಕಳುಹಿಸಿ. ರಾಜಕಾರಣಿಗಳು ಓಟಿಗಾಗಿ ನೀಡುವ ಉಡುಗೊರೆಗಳನ್ನು ತಿರಸ್ಕರಿಸಿ ನಿಮ್ಮ ಮತವನ್ನು ಯಾರಿಗೆ ಬೇಕಾದರೂ ಹಾಕಿ ಎಂಬ ಘೋಷಣೆ ಕೂಗಿದರು. ಅಭಿಯಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೆ. ರಾಘವೇಂದ್ರ, ಸಮಾಜ ಕಲ್ಯಾಣಾಧಿಕಾರಿ ಶಾಂತಮ್ಮ, ಪುರಸಭೆಯ ಆರೋಗ್ಯಾಧಿಕಾರಿ ನವೀನ್ ಚಂದನ್ ಸೇರಿದಂತೆ ಇತರರಿದ್ದರು.
ಮಂಜುಳಾ ಅವಿರೋಧ ಆಯ್ಕೆ
ಮುಳಬಾಗಲು: ತಾಲೂಕಿನ ಮೂಡಿಯನೂರು ಗ್ರಾಪಂ ಅಧ್ಯಕ್ಷರಾಗಿ ಕೆ.ವಿ.ಮಂಜುಳಾ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷೆಯಾಗಿದ್ದ ನಾರೆಮ್ಮನವರು ರಾಜಿನಾಮೆ ಸಲ್ಲಿಸಿದ್ದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಜ.30ರಂದು ಸಭೆ ಕರೆಯಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನಿಂದ ಕೆ.ವಿ.ಮಂಜುಳಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಸಭೆಗೆ 15 ಸದಸ್ಯರ ಪೈಕಿ 5 ಸದಸ್ಯರು ಮಾತ್ರ ಹಾಜರಾಗಿದ್ದರು. ಕೋರಂ ಕೊರತೆಯ ಕಾರಣ ಸಭೆಯನ್ನು ಮುಂದೂಡಲಾಗಿತ್ತು. ಫೆ.17ರಂದು ಚುನಾವಣೆಗೆ ದಿನಾಂಕ ನಿಗದಿಪಡಿಸಿದ ನಂತರ ಸಭೆಗೆ ಎಲ್ಲ ಸದಸ್ಯರು ಹಾಜರಾಗುವಂತೆ ಚುನವಾಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅಧ್ಯಕ್ಷರ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಇದಕ್ಕೆ ಸದಸ್ಯ ಗುಜ್ಜನಹಳ್ಳಿ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ಗೆ ಮನವಿ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ಕೋರಿದ್ದರು. ಎರಡು ವಾರಗಳ ಕಾಲ ಚುನಾವಣೆ ನಡೆಯದಂತೆ ಹೈಕೋರ್ಟ್ ಏಕ ಸದಸ್ಯರ ಪೀಠ ತಡೆಯಾಜ್ಞೆ ನೀಡಿತ್ತು. ಕೆ.ವಿ.ಮಂಜುಳಾ ಮೇಲ್ವನವಿ ಸಲ್ಲಿಸಿದ ಕಾರಣ ಹೈಕೋರ್ಟ್ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ತಡೆಯಾಜ್ಞೆ ತೆರವುಗೊಳಿಸಿ ಬಾಕಿ ಇರುವ ಚುನಾವಣಾ ಪ್ರಕ್ರಿಯೆ ಮುಂದುವರಿಸಿ ಅಧ್ಯಕ್ಷರನ್ನು ಘೋಷಿಸಲು ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಚುನಾವಣಾಧಿಕಾರಿಗೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಚುನಾವಣೆ ನಡೆಯಿತು. ಜೆಡಿಎಸ್ ಮುಖಂಡ ಬೇವಹಳ್ಳಿ ಶಂಕರಪ್ಪ, ರಾಮಕೃಷ್ಣಪ್ಪ, ಬಲ್ಲಶೆಟ್ಟಿಹಳ್ಳಿ ನಾರಾಯಣಗೌಡ, ಗುಜ್ಜನಹಳ್ಳಿ ರಮೇಶ್, ಜಿ.ವಿ.ತಮ್ಮೇಗೌಡ, ಮಲ್ಲೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟರಾಮಪ್ಪ ಮುಂತಾದವರು ಭಾಗವಹಿಸಿದ್ದರು.
ಮಾನವ ಹಕ್ಕು ಉಲ್ಲಂಘನೆಗೆ ತಡೆ
ಕೋಲಾರ: ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಸರ್ಕಾರಗಳು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲವೆಂದು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಸಂಗ್ರಾಮ್ ಸಿಂಗ್ ವಿಷಾದ ವ್ಯಕ್ತಪಡಿಸಿದರು. ನಗರದ ಹೊರವಲಯದ ಅಂತರಗಂಗೆ ಅಂಗವಿಕಲರ ವಿದ್ಯಾಸಂಸ್ಥೆಯಲ್ಲಿ ಗುರುವಾರ ಮನವಹಕ್ಕುಗಳ ಜನಜಾಗೃತಿ ಸಮಿತಿ ಆಯೋಜಿಸಿದ್ದ ಜಿಲ್ಲಾ ಶಾಖೆ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ರಾಜ್ಯ ಮಹಿಳಾ ಅಧ್ಯಕ್ಷೆ ಪದ್ಮಾವತಿ, ಶಾಮರಾಜ್, ಎಚ್.ಎಂ.ಬಚ್ಚೇಗೌಡ, ಜಯಮಾಲ, ಸತೀಶ್, ಶಿವಕುಮಾರ್, ಗಿರೀಶ್, ಅಂತರಗಂಗೆ ಸಂಸ್ಥೆಯ ಕಾರ್ಯದರ್ಶಿ ಶಂಕರ್, ನಾಗರಾಜ್ ಮುಂತಾದವರು ಇದ್ದರು. ಜಿಲ್ಲಾಧ್ಯಕ್ಷ ರವಿ ಸ್ವಾಗತಿಸಿ, ನಿರೂಪಿಸಿದರು.
ಜನರಿಗೆ ಸ್ಪಂದಿಸುವುದು ಎಎಪಿ ಮಾತ್ರ: ಆರ್ಕೇಶ್
ಚಿಕ್ಕಬಳ್ಳಾಪುರ: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಜನರಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿರುವುದು ಆಮ್ ಆದ್ಮಿ ಪಕ್ಷವಾಗಿದೆ ಎಂದು ಪಕ್ಷದ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಆರ್ಕೇಶ್ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಪರ ಆಡಳಿತ ನೀಡುತ್ತೇವೆ ಎಂಬ ಮಾತುಗಳನ್ನು ಹೇಳುತ್ತ ಕಾಂಗ್ರೆಸ್ ಮತ್ತು ಬಿಜೆಪಿ ಜನರಿಗೆ ಮೋಸ ಮಾಡುತ್ತಿವೆ ಎಂದರು. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟವನ್ನು ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದೆ. ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದರೂ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಅಂಟಿಕೊಂಡು ಕೂರಲಿಲ್ಲ. ಇದು ರಾಜಕೀಯದಲ್ಲಿ ಮಾದರಿಯಾಗಿದೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದಿಂದ ತಾವು ಸ್ಪರ್ಧಿಸುತ್ತಿದ್ದು ಪೊಲೀಸ್ ಇಲಾಖೆಯಲ್ಲಿ ಕಪ್ಪು ಚುಕ್ಕೆ ಅಂಟಿಸಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅಲ್ಲದೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಉತ್ಸುಕನಾಗಿದ್ದು ತಮಗೆ ಜನ ಬೆಂಬಲ ನೀಡಬೇಕೆಂದು ಕೋರಿದರು. ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಪರ ಪ್ರಚಾರ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾ.16 ರಂದು ಆಗಮಿಸುತ್ತಿದ್ದಾರೆ. ಅಂದು ದೊಡ್ಡಬಳ್ಳಾಪುರಕ್ಕೆ 11.30ಕ್ಕೆ, ಗೌರಿಬಿದನೂರಿಗೆ 12.30ಕ್ಕೆ, ಚಿಕ್ಕಬಳ್ಳಾಪುರಕ್ಕೆ 1.30ಕ್ಕೆ ಆಗಮಿಸಲಿದ್ದಾರೆ ಎಂದರು.