ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ ಮಹತ್ವದ್ದು

Srinivasa Murthy VN
Updated On : 14 Mar 2014, 12:38 pm

ಕೋಲಾರ: ಲೋಕಸಭಾ ಚುನಾವಣೆಯು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಜಿಲ್ಲೆಯ ಎಲ್ಲಾ 98 ಸೆಕ್ಟರ್ ಅಧಿಕಾರಿಗಳು ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳ ಸೆಕ್ಟರ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸೆಕ್ಟರ್ ಅಧಿಕಾರಿಗಳು ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ ನಿಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ವಿಶೇಷವಾಗಿ ಅಂಗವಿಕಲರಿಗೆ ವಿದ್ಯುತ್ ಬೆಳಕು ನೀರಿನ ಸೌಲಭ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಚುನಾವಣೆ ಪ್ರಾರಂಭವಾದಾಗಿನಿಂದ ಮತದಾನವಾಗಿ ಇ.ವಿ.ಎಂ. ಭದ್ರತಾ ಕೊಠಡಿ ಸೇರುವವರೆಗೆ ಸೆಕ್ಟರ್ ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು ತಿಳಿಸಿದರು. ಸೆಕ್ಟರ್ ಅಧಿಕಾರಿಗಳಿಗೆ ನೀತಿ ಸಂಹಿತೆ ನಿರ್ವಹಣೆ ಸಂದರ್ಭದಲ್ಲಿ ನೆರವಾಗಲು ಸಂಚಾರಿ ದಳ ಇರುತ್ತದೆ. ಅವರ ಸಹಾಯವನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.
ಸೆಕ್ಟರ್ ಅಧಿಕಾರಿಗಳು ತರಬೇತಿಯಲ್ಲಿ ಸರಿಯಾಗಿ ಅರ್ಥವಾಗದೆ ಇದ್ದ ಪಕ್ಷದಲ್ಲಿ ಆರ್.ಪಿ.ಎ ಕಾಯ್ದೆ 1951ರಲ್ಲಿ ವಿವರಗಳು ಲಭ್ಯವಿದೆ. ಇದನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಹೇಳಿದರು.
ಮತದಾನ ದಿನ ಎಲ್ಲಾ ಸೆಕ್ಟರ್ ಅಧಿಕಾರಿಗಳು ಅಂದು ಬೆಳಿಗ್ಗೆ 6 ಗಂಟೆಗೆ ಮಾಕ್‌ಪೋಲ್ ಮಾಡಬೇಕು.  ನಂತರ 7ಗಂಟೆಗೆ ಮತದಾನ ಪ್ರಾರಂಭಿಸಬೇಕು. ನಂತರ ಎಲ್ಲಾ ಮತದಾನ ವಿವರಗಳನ್ನು ಎರಡು ಗಂಟೆಯೊಳಗೆ ಚುನಾವಣಾಧಿಕಾರಿಗಳಿಗೆ ತಿಳಿಸಬೇಕೆಂದರು. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ನಿರ್ಭೀತಿಯಿಂದ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತ ಚಲಾಯಿಸಲು ಅರಿವು ಜಾಗೃತಿ ಮೂಡಿಸಬೇಕು. ಈ ವರ್ಷ ನಮ್ಮ ಜಿಲ್ಲೆ ಶೇಕಡವಾರು ಮತದಾನದಲ್ಲಿ ಪ್ರಥಮ ಸ್ಥಾನ ಪಡೆಯಲು ಎಲ್ಲಾ ಸೆಕ್ಟರ್ ಅಧಿಕಾರಿಗಳು ಶ್ರಮಿಸಬೇಕೆಂದರು.
ಸೆಕ್ಟರ್ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ಕೆಲಸ ನಿರ್ವಹಿಸುವಲ್ಲಿ ಅಡಚಣೆಯಾದರೆ ಜಿಲ್ಲಾ ಚುನಾವಣಾಧಿಕಾರಿ ದೂರವಾಣಿ ಸಂಖ್ಯೆ 9449731359ನ್ನು ಸಂಪರ್ಕಿಸಬಹುದು ಎಂದು ಡಿ.ಕೆ.ರವಿ ತಿಳಿಸಿದರು.
ಮಾಧ್ಯಮ ದೃಢೀಕರಣ ಸಮಿತಿ ರಚನೆ: ಜಿಲ್ಲಾ ಮಟ್ಟದ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ ರಚನೆ ಮಾಡಿದ್ದು ಜಿಲ್ಲಾಧಿಕಾರಿ ಡಿ.ಕೆ. ರವಿ ಇದರ ಅಧ್ಯಕ್ಷರಾಗಿದ್ದಾರೆ. ಸಮಿತಿಯ ಇತರೆ ಸದಸ್ಯರನ್ನಾಗಿ ಪತ್ರಕರ್ತ ಬಿ.ವಿ. ಗೋಪಿನಾಥ್, ಎನ್.ಐ.ಸಿ ಅಧಿಕಾರಿ ಹರಿಹರನ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಡಿ. ನಾಗರಾಜ, ಡಿ.ಯು.ಡಿ.ಸಿ. ಕಾರ್ಯಪಾಲಕ ಅಭಿಯಂತರ ಗೋಪಿನಾಥ್ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ. ರಂಗಾರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಈ ಸಮಿತಿ ರಾಜಕೀಯ ಅಭ್ಯರ್ಥಿಗಳ ಜಾಹೀರಾತುಗಳಿಗೆ ಅನುಮತಿ ನೀಡುವುದು, ಕಾಸಿಗಾಗಿ ಸುದ್ದಿ ದೂರುಗಳ ವಿಚಾರಣೆ,  ಕಾಸಿಗಾಗಿ ಸುದ್ದಿ ವರದಿಗಳ ಬಗ್ಗೆ ಪರಿಶೀಲನೆ, ವಿದ್ಯುನ್ಮಾನ ಪ್ರಸಾರದಲ್ಲಿ ರಾಜಕೀಯ ಪಕ್ಷಗಳು ನೀಡುವ ಜಾಹೀರಾತುಗಳ ಪರಿಶೀಲನೆ, ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪರಿಶೀಲನೆ, ಕರಪತ್ರಗಳು, ಪೋಸ್ಟರ್‌ಗಳು, ಪಾಂಪ್‌ಲೆಟ್ ಹಾಗೂ ಇತರೆ ದಾಖಲೆಗಳು ಪ್ರಚಾರದಲ್ಲಿ ಮುದ್ರಕರ ಹೆಸರು, ವಿಳಾಸ ಮತ್ತು ಮುದ್ರಣಕಾರರ ಹೆಸರು ಮತ್ತು ವಿಳಾಸ ಕಡ್ಡಾಯ ಪರಿಶೀಲನೆ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ವೆಚ್ಚದ ವೀಕ್ಷಕರಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ನಿರ್ವಹಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement