20 ನಿಮಿಷ 20 ಸುದ್ದಿ
ಗುಡಿಬಂಡೆ: ಅಪಘಾತ, ರಕ್ತಹೀನತೆಯಿಂದ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂತಹವರನ್ನು ಕಾಪಾಡಲು ಪ್ರತಿಯೊಬ್ಬರು ರಕ್ತದಾನ ಮಾಡಿ ಮಾನವೀಯತೆ ಮೆರೆಯಬೇಕೆಂದು ರೆಡ್ ಕ್ರಾಸ್ ಜಿಲ್ಲಾ ರಕ್ತ ನಿಧಿ ಘಟಕದ ವೈದ್ಯಾಧಿಕಾರಿ ಹೇಮಂತ್ ರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಮರನಾರಾಯಣ, ರೆಡ್ ಕ್ರಾಸ್ ತಾಲೂಕು ಕಾರ್ಯದರ್ಶಿ ಉನ್ನತಿ ವಿಶ್ವನಾಥ್ ಮಾತನಾಡಿದರು. ಶಿಬಿರದಲ್ಲಿ 45 ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ನೂತನ ಗ್ರಾಪಂ ಸದಸ್ಯರಿಗೆ ಅಭಿನಂದನೆ
ಮಾಲೂರು: ತಾಲೂಕಿನ ಚಿಕ್ಕತಿರುಪತಿ ಗ್ರಾಪಂಗೆ ನೂತನವಾಗಿ ಆಯ್ಕೆಯಾದ ಜಿ.ವಿ. ಮಂಜುನಾಥ್ರನ್ನು ಪಂಚಾಯ್ತಿ ವತಿಯಿಂದ ಅತ್ಮೀಯವಾಗಿ ಅಭಿನಂದಿಸಲಾಯಿತು.
ಚಿಕ್ಕತಿರುಪತಿ ಗ್ರಾಪಂ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಜುನಾಥ್ರನ್ನು ಅಭಿನಂದಿಸಿ ಮಾತನಾಡಿದ ಪಂಚಾಯ್ತಿಉಪಾಧ್ಯಕ್ಷ ವಿ. ನಾಗೇಶ್, ಸಮಾಜಿಕ ಕಳಕಳಿವುಳ್ಳ ಯುವಕ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾಗಿರುವುದು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸಹಕರಿಯಾಗಲಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್, ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಮತದಾರರ ನಂಬಿಕೆಗೆ ದ್ರೋಹವಾಗದಂತೆ ಕಾರ್ಯ ನಿರ್ವಹಿಸಿ ಗ್ರಾಮದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ಮೂಲ ಸಮಸ್ಯೆಗಳನ್ನು ಬಗೆ ಹರಿಸಲು ಹೆಚ್ಚಿನ ಅದ್ಯತೆ ನೀಡಲಾಗುವುದು ಎಂದರು. ಗ್ರಾಪಂ ಅಧ್ಯಕ್ಷೆ ಶೈಲಜಾ ಬಾಲಕೃಷ್ಣ, ಸದಸ್ಯ ರಾಮದಾಸ್, ಚಿಕ್ಕತಿರುಪತಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೇಬಲ್ ಬಾಬು, ಧರಣಿ ಬಾಬು, ಬಾರ್ಡ್ರ್ ನಾಗರಾಜ್ ಇದ್ದರು.
ಮಕ್ಕಳಲ್ಲಿ ಮೌಲ್ಯಾಧಾರಿತ ವ್ಯಕ್ತಿತ್ವ ರೂಪಿಸಿ; ಎಜಿಎಸ್
ಗುಡಿಬಂಡೆ: ಮಕ್ಕಳಲ್ಲಿ ಉನ್ನತಿ ವಿಚಾರ ಮತ್ತು ಮೌಲ್ಯಗಳನ್ನು ತಿಳಿಸಿ, ಅವರನ್ನು ಉತ್ತಮ ನಾಗರಿಕರಾಗಿ ರೂಪಿಸುವ ಜವಾಬ್ದಾರಿ ಪೋಷಕರ ಮತ್ತು ಶಿಕ್ಷಕರ ಮೇಲಿದೆ ಎಂದು ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಎ.ಜಿ. ಸುಧಾಕರ್ ಸಲಹೆ ನೀಡಿದರು. ಪಟ್ಟಣದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಮದರ್ ತೆರೇಸಾ ಪಬ್ಲಿಕ್ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಹಾಗೂ ಬದ್ಧತೆ ಕಡಿಮೆಯಾಗುತ್ತಿದೆ. ಇದು ಮಕ್ಕಳ ಬೌದ್ಧಿಕ ಬೆಳವಣಿಗೆ ಮೇಲೆ ಅಪಾಯ ಉಂಟು ಮಾಡುವ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆಯೆಂದರು. ಜಿಲ್ಲಾ ಕಸಾಪ ಅಧ್ಯಕ್ಷ ಹನುಮಂತರಾವ್ ಇದ್ದರು.
ಹಸಿರು ಸಾಲಿನ ಪ್ರಶಸಿ...
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡಯಟ್ ಹಾಗೂ ತುಮಕೂರು ವಿಜ್ಞಾನ ಕೇಂದ್ರ ವತಿಯಿಂದ ಹಸಿರು ಸಾಲಿನ ಶಾಲಾ ಪ್ರಶಸ್ತಿಯನ್ನು ಅಣ್ಣೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ಗಳಿಗೆ ಸಲಹೆ
ಕೋಲಾರ: ರಾಜ್ಯ ಮಟ್ಟದ ಪರೀಕ್ಷಾ ಶಿಬಿರದಲ್ಲಿ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆ ಮತ್ತು ತಾಲೂಕಿಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಕಾರ್ಯದರ್ಶಿ ಎಂ.ವಿ. ಜನಾರ್ದನ್ ತಿಳಿಸಿದರು. ಇತ್ತೀಚೆಗೆ ಮುಳಬಾಗಲಿನ ಅಮರಜ್ಯೋತಿ ಶಾಲೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಿಂತನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಭಿರಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬಾಳ್ವೆ ಮಾಡಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು. ಶಾಲೆಯ ಮುಖ್ಯಶಿಕ್ಷಕ ಚಂಗಾರೆಡ್ಡಿ, ಜಿಲ್ಲಾ ಸ್ಕೌಟ್ ಆಯುಕ್ತ ಚಾಂದ್ ಪಾಷ, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಭಾಸ್ಕರರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಆನಂದ್, ಸುಜಾತಮ್ಮ, ಅಲುವೇಲಮ್ಮ, ತ್ರಿವಿಕ್ರಮ್ ಇದ್ದರು.
ಪ್ರಯಾಣಿಕರಿಂದ ದಂಡ ವಸೂಲಿ
ಕೋಲಾರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗದಲ್ಲಿ ಕಳೆದ ತಿಂಗಳು 2,832 ಬಸ್ಸುಗಳನ್ನು ತನಿಖೆಗೆ ಒಳಪಡಿಸಿ, 622 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, 69,290 ರು.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಅಧಿಕೃತ ಟಿಕೆಟ್ ಪಡೆಯದೆ ಪ್ರಯಾಣಿಸುವುದು ಮೋಟಾರು ವಾಹನ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇದಕ್ಕಾಗಿ ಸ್ಥಳದಲ್ಲಿಯೆ 500 ರು.ಗಳವರೆಗೆ ದಂಡ ತೆರಬೇಕಾಗಿರುತ್ತದೆ. ಇಲ್ಲವೆ ದಂಡ ತೆರದಿರುವ ಟಿಕೆಟ್ ರಹಿತ ಪ್ರಯಾಣಿಕರನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್ಚರಿಸಿದ್ದಾರೆ.
ಕರಕುಶಲ ತರಬೇತಿಗೆ ಸಂದರ್ಶನ
ಕೋಲಾರ: ಬೆಂಗಳೂರಿನ ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ಮತ್ತು ಕುಂಭ ಕಲೆ (ಟೆರ್ರಾಕೋಟಾ) ಯಲ್ಲಿ 6 ತಿಂಗಳಾವಧಿಯ ಉಚಿತ ತರಬೇತಿ ತರಗತಿಗಳನ್ನು ವ್ಯವಸ್ಥೆಗೊಳಿಸಿದೆ. ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ವಯೋವುತಿ 18ರಿಂದ 35ವರ್ಷದೊಳಗಿರಬೇಕು. ಅಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಪ್ರವಾಸ ಏರ್ಪಡಿಸಲಾಗುವುದಲ್ಲದೆ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ನೇರ ಸಂದರ್ಶನಕ್ಕೆ ಮಾ.24ರಿಂದ 27ರೊಳಗೆ ಬೆಂಗಳೂರು ಸಮೀಪದ ಬಿಡದಿ ಹೋಬಳಿಗೆ ಸೇರಿದ ಜೋಗರದೊಡ್ಡಿಯಲ್ಲಿರುವ ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಾಜರಾಗಲು ಸಂಸ್ಥೆಯ ನಿರ್ದೇಶಕ ಎಂ. ವೆಂಕಟೇಶ ಶೇಷಾದ್ರಿ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ.9900158885ಅವರನ್ನು ಸಂಪರ್ಕಿಸಬಹುದಾಗಿದೆ.
ಪ್ರಶಸ್ತಿಪತ್ರ ಹಾಗೂ ಕಿಟ್ಗಳ ವಿತರಣೆ
ಕೋಲಾರ: ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದರ ಮೂಲಕ ಈ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿ ಒಳ್ಳೆಯ ಹೆಸರು ಗಳಿಸಬೇಕೆಂದು ಜಿಪಂ ಸಿಇಒ ಆರ್. ವಿನೋತ್ ಪ್ರಿಯ ಹೇಳಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಮುಳಬಾಗಿಲಿನಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ 60 ಹೆಣ್ಣು ಮಕ್ಕಳಿಗೆ 2 ತಿಂಗಳ ತರಬೇತಿಯನ್ನು ನೀಡಲಾಯಿತಲ್ಲದೆ, ಶಿಬಿರಾರ್ಥಿಗಳಿಗೆ ಕಿಟ್ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಮಹಿಳೆಯರ ದಿನಾಚರಣೆ ಅಂಗವಾಗಿ ಸದಾ ಮಹಿಳೆಯರ ಅಭಿವೃದ್ಧಿಗಾಗಿ ದುಡಿಯುವ ತ್ರಿವೇಣಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಇಒ ಅರುಣ್ಕುಮಾರ್, ಪುರಸಭೆ ಮುಖ್ಯಾಧಿಕಾರಿ ಪಿ. ಅಶೋಕ್ ಕುಮಾರ್ ಇದ್ದರು.
ಪಟ್ಟಣದ ಅಭಿವೃದ್ಧಿಗೆ ಮೊದಲ ಆದ್ಯತೆ
ಬಂಗಾರಪೇಟೆ: ಮಹಿಳೆಯರ ಕೈಗೆ ಯಾವುದೇ ಜವಾಬ್ದಾರಿಯುತ ಅಧಿಕಾರ ಕೊಟ್ಟರೂ ಸಮರ್ಪಕವಾಗಿ ನಿಬಾಯಿಸಬಳ್ಳಲು ಎಂಬುದನ್ನು ನಾನು ಸಾಭೀತು ಮಾಡಿ ತೋರಿಸುವೆ ಎಂದು ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷೆ ಗಂಗಮ್ಮ ಹೇಳಿದರು. ಪುರಸಭೆ ಅಸ್ಥಿತ್ವಕ್ಕೆ ಬಂದಾಗಿನಿಂದ ಇದುವರೆಗೂ ಒಮ್ಮೆ ಮಾತ್ರ ಮಹಿಳೆ ಪುರಸಭೆಯಲ್ಲಿ ಅಧ್ಯಕ್ಷರಾಗಿದ್ದು, ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ರಾಜಕೀಯದಲ್ಲಿ ಕಮ್ಮಿಯಿಲ್ಲ ಎಂಬುದನ್ನು ತೋರಿಸುವೆ ಎಂದು ಅಧ್ಯಕ್ಷರಾಗಿ ಅಧಿಕಾವಹಿಸಿಕೊಂಡ ಬಳಿಕ ಹೇಳಿದರು. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು ಅದನ್ನು ನಿವಾರಿಸುವತ್ತ ಮೊದಲ ಆದ್ಯತೆ ನೀಡಲಾಗುವುದು. ಈಗಾಗಲೇ ಖಾಸಗಿ ಟ್ಯಾಂಕರ್ ಮಾಲೀಕರಿಂದ ನೀರನ್ನು ಖರೀದಿಸಲಾಗಿದೆ ಮೂರು ನಾಲ್ಕು ತಿಂಗಳಿಗೊಮ್ಮೆ ಪುರಸಭೆ ಕುಡಿಯುವ ನೀರು ಪೂರೈಕೆ ಮಾಡುತ್ತಾ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದರು.
'ವಿ
ಮಾಲೂರಿನಲ್ಲಿ ರಾಜ್ಯ ಪರಿಶಿಷ್ಟ ಜಾತಿ-ಪಂಗಡಗಳ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಜಾನಪದ ಅಕಾಡಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ
ಮಾಲೂರು: ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಯವರಿಂದ ಮಾತ್ರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಸಾಧ್ಯವಿರುವುದರಿಂದ ಜೆಡಿಎಸ್ ಅಭ್ಯರ್ಥಿಯನ್ನು ಅಶೀರ್ವದಿಸಬೇಕು ಎಂದು ಲೋಕಸಭೆ ಜೆಡಿಎಸ್ ಅಭ್ಯರ್ಥಿ ಕೇಶವ ಹೇಳಿದರು. ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಇದೇ ಪ್ರಥಮ ಬಾರಿಗೆ ತಮ್ಮ ಸ್ವಗ್ರಾಮವಾದ ತಾಲೂಕಿನ ಮಂಗಾಪುರಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಡನೆ ಮಾತನಾಡಿ, ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ತರುವುದೇ ನನ್ನ ಮೊದಲ ಅದ್ಯತೆಯಾಗಿದ್ದು, ಹೆಚ್ಚಿನ ಮತ ಕೊಟ್ಟು ಆರ್ಶೀವದಿಸಬೇಕೆಂದು ಕೋರಿದರು. ಜಿಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ತಾಪಂ ಮಾಜಿ ಅಧ್ಯಕ್ಷ ನಂಜೇಗೌಡ, ಪುರಸಭೆ ಸದಸ್ಯ ಪಚ್ಚಪ್ಪ, ಮಾಲಾದ್ರಿ, ಜಿಪಂ ಮಾಜಿ ಸದಸ್ಯ ಪಿ.ನಾರಾಯಣಸ್ವಾಮಿ, ಪುರಸಭೆ ಮಾಜಿ ಸದಸ್ಯರಾದ ಟಿ. ರಾಮಚಂದ್ರ, ಪ್ರದೀಪ್ ರೆಡ್ಡಿ, ನಾರಾಯಣಸ್ವಾಮಿ ಇದ್ದರು.
ಮುಂದಿನ ವರ್ಷದಿಂದಎಂಜಿನಿಯರಿಂಗ್ ಕಾಲೇಜು
ಬಂಗಾರಪೇಟೆ: ಮುಂದಿನ ವರ್ಷದಿಂದ ಎಂಜಿನಿಯರಿಂಗ್ ಕಾಲೇಜು ಹಾಗೂ ಐಟಿಐ ತರಗತಿಗಳನ್ನು ಪ್ರಾರಂಭಿಸಲಾಗುವುದೆಂದು ಕಾರ್ಯಪ್ಪ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಚಂದ್ರಶೇಖರ್ ಹೇಳಿದರು. ತಾಲೂಕಿನ ಹಂಚಾಳ ಬಳಿ ಇರುವ ಪೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಶಾಲೆಯ ಆವರಣದಲ್ಲಿ ದಿಗಂತ್, ಅಮರ್ ಶಿಕ್ಷಕರ ತರಬೇತಿ ಮತ್ತು ಸಿದ್ದಾರ್ಥ ಪಾಲಿಟೆಕ್ನಿಕ್ ಮೂರನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಬಂಗಾರಪೇಟೆ ಹಾಗೂ ಬೂದಿಕೋಟೆ ಮತ್ತು ಎಸ್.ಎನ್ಆರ್ ಆಸ್ಪತ್ರೆ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಫಯಾಜ್ಖಾನ್ ಉಧ್ಘಾಟಿಸಿದರು.
ಅಭಿನಂದನೆ...
ಕೋಲಾರ ತಾಲೂಕಿನ ಉರಿಗಿಲಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಸಹಕಾರಿ ಯೂನಿಯನ್ ನಿರ್ದೇಶಕರೂ ಆದ ಉರಿಗಿಲಿ ಎಸ್.ಆರ್. ರುದ್ರಸ್ವಾಮಿ ಅವರನ್ನು ಇತರ ನಿರ್ದೇಶಕರು ಅಭಿನಂದಿಸಿದರು.
ಉರಿಗಿಲಿ ಎಂಪಿಸಿಎಸ್ ಅಧ್ಯಕ್ಷರ ಆಯ್ಕೆ
ಕೋಲಾರ: ತಾಲೂಕಿನ ಉರಿಗಿಲಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಸಹಕಾರಿ ಯೂನಿಯನ್ ನಿರ್ದೇಶಕರೂ ಆದ ಉರಿಗಿಲಿ ಎಸ್.ಆರ್. ರುದ್ರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಇತ್ತೀಚೆಗೆ ಚುನಾವಣೆ ನಿಗಧಿಯಾಗಿದ್ದು, ರುದ್ರಸ್ವಾಮಿ ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಕಾರಣ ರುದ್ರಸ್ವಾಮಿ ಅವಿರೋಧ ಆಯ್ಕೆಯಾದರೆಂದು ಘೋಷಿಸಲಾಯಿತು.
ಈ ಮೊದಲು ಅವರೇ ಅಧ್ಯಕ್ಷರಾಗಿದ್ದು, ಈಗ ಪುನರಾಯ್ಕೆಯಾದಂತಾಗಿದೆ. ರುದ್ರಸ್ವಾಮಿ ಅವರ ಹೆಸರನ್ನು ನಿರ್ದೇಶಕ ಎನ್.ನಾರಾಯಣಸ್ವಾಮಿ ಸೂಚಿಸಿ, ವಾನರಾಶಿ ವೆಂಕಟಸ್ವಾಮಿ ಅನುಮೋದಿಸಿದರು. ಸಂಘದ ನಿರ್ದೇಶಕರಾದ ಸಿ. ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಡಿ.ಸಿ. ವೆಂಕಟಸ್ವಾಮಪ್ಪ, ರಾಧಮ್ಮ, ಪಾರ್ವತಮ್ಮ, ಆರ್. ಹನುಮಪ್ಪ, ವಿ. ಹನುಮಪ್ಪ ಇದ್ದರು. ಚುನಾವಣಾಧಿಕಾರಿಯಾಗಿ ಸುಗಟೂರು ಗ್ರಾಪಂ ಅಭಿವೃದ್ಧಿಅಧಿಕಾರಿ ಚಂದ್ರಪ್ಪ ಮತ್ತು ಕಾರ್ಯದರ್ಶಿ ಸುರೇಶ್ ಕಾರ್ಯನಿರ್ವಹಿಸಿದರು.
ಕರವೇ ಹೆಸರು ದುರ್ಬಳಕೆ; ಆರೋಪ
ಬಾಗೇಪಲ್ಲಿ: ಕನ್ನಡ ನಾಡು ನುಡಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕರವೇ ಸಂಘಟನೆಯ ಹೆಸರನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಲಾಗುವುದು ಎಂದು ಕರವೇ ತಾ.ಅಧ್ಯಕ್ಷ ಹರೀಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಇತ್ತೀಚೆಗೆ ಕೆಲವರು ಕರವೇ ಹೆಸರನ್ನು ಹೇಳಿಕೊಂಡು ಸರ್ಕಾರಿ ಕಚೇರಿಗಳು ಸೇರಿದಂತೆ ಟೋಲ್ ಪ್ಲಾಜಾ ಮುಂತಾದ ಕಡೆ ವಿಸಿಟಿಂಗ್ ಕಾರ್ಡ್ ತೋರಿಸಿದರೆ, ಇನ್ನು ಕೆಲವರು ವಾಹನಗಳ ಮೇಲೆ ಕರವೇ ಎಂದು ನಾಮಫಲಕ ಹಾಕಿಕೊಂಡು ಸಂಘಟನೆಗೆ ಕಳಂಕ ತರುತ್ತಿದ್ದಾರೆ. ಇಂತಹವರ ವಿರುದ್ಧ ದೂರು ನೀಡಲಾಗುವುದು ಎಂದರು. ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶಾಂತಮ್ಮ, ವಿದ್ಯಾರ್ಥಿ ಪದವಿ ಘಟಕದ ಅಧ್ಯಕ್ಷರಾಗಿ ಟಿ.ಸಿ. ಬಾಲಚಂದ್ರ, ಉಪಾಧ್ಯಕ್ಷರಾಗಿ ಟಿ.ಸಿ.ಶ್ರೀಕಾಂತ್, ಪ್ರಧಾನಕಾರ್ಯದರ್ಶಿಯಾಗಿ ಎ. ಅಮರನಾಥ ಹಾಗೂ ಪಿಯುಸಿ ವಿಭಾಗದ ಘಟಕದ ಅಧ್ಯಕ್ಷರಾಗಿ ಸಿ. ಚೇತನ್, ಎಂ.ಎಸ್. ಅರ್ಪತ್ ಖಾನ್, ಪ್ರಧಾನಕಾರ್ಯದರ್ಶಿಯಾಗಿ ಗಂಗಾಧರರನ್ನು ಆಯ್ಕೆ ಮಾಡಲಾಗಿದ.
ಭಾಷೆ ನಿರ್ಲಕ್ಷ್ಯ ಸಲ್ಲ: ಓಂಕಾರಪ್ರಿಯ
ಚಿಕ್ಕಬಳ್ಳಾಪುರ: ನಾವೇ ಕನ್ನಡ ಭಾಷೆಯನ್ನು ನಿರ್ಲಕ್ಷ್ಯದಿಂದ ಕಾಣುವುದು ಸರಿಯಲ್ಲ, ನಮ್ಮ ಭಾಷೆಯ ಗರಿಮೆಯನ್ನು ತಿಳಿದು ಅದರ ಹಿರಿಮೆಯನ್ನು ಹೆಚ್ಚಿಸಬೇಕೆಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಅಧ್ಯಕ್ಷ ಓಂಕಾರಪ್ರಿಯ ತಿಳಿಸಿದರು. ನಗರದ ಜಚನಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಅದ ಇತಿಹಾಸವಿದೆ. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅದರ ಗೌರವವನ್ನು ಹೆಚ್ಚಿಸಬೇಕೆಂದರು. ನಾವು ಇತ್ತೀಚಿನ ದಿನಗಳಲ್ಲಿ ಆಂಗ್ಲಭಾಷೆಯ ಪದಗಳನ್ನು ಹೆಚ್ಚಿಗೆ ಬಳಸುತ್ತಿದ್ದೇವೆ. ನಮ್ಮ ಭಾಷೆ ಇದರಿಂದ ತನ್ನ ಸ್ವಂತಿಕೆ, ಮಹತ್ವ ಕಳೆದುಕೊಳ್ಳುತ್ತಿದೆ. ಕಾಲಂತರದಲ್ಲಿ ಭಾಷೆ ನುಸುಳು ಹೋಗುವ ಸಾಧ್ಯತೆಯೂ ಇದೆ, ಇದಕ್ಕಾಗಿ ನಾವು ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಪರ್ಯಾಯವಾಗಿ ಇತರೆ ಭಾಷೆಗಳನ್ನು ಕಡಿಮೆ ಬಳಸಬೇಕೇ ಹೊರತು ಕನ್ನಡತನ ಬಿಟ್ಟು ಕೊಡಬಾರದೆಂದರು.
ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಒತ್ತಾಯ
ಕೋಲಾರ: ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಸಕಾಲಕ್ಕೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಕಳೆದ ಒಂದು ವರ್ಷದಿಂದ ಸುಮಾರು 800 ರಿಂದ 900 ಮಂದಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಈ ಪೈಕಿ ಅರ್ಧದಷ್ಟು ಮಂದಿ ಫಲಾನುಭವಿಗಳಿಗೆ ಸೌಲಭ್ಯ ದೊರಕಿದೆ. ಉಳಿದ ಅರ್ಜಿಗಳ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಸೌಲಭ್ಯಗಳು ವಿಪರೀತ ತಡವಾಗುತ್ತಿರುವುದರಿಂದ ಕಟ್ಟಡ ಕಾರ್ಮಿಕರು ನೊಂದಣಿ ಮತ್ತು ನವೀಕರಣ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇದು ತುಂಬ ಅಪಾಯಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ತಾವುಗಳು ಶೀಘ್ರವಾಗಿ ಫಲಾನುಭವಿಗಳಿಗೆ ಸೌಲಭ್ಯ ದೊರಕುವಂತೆ ಮತ್ತು ವಂತಿಗೆ ನೀಡಿದ್ದಕ್ಕೆ ರಸೀದಿಯನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
ಚುನಾವಣೆ ನಂತರ ನೇಮಕಾತಿ ಪತ್ರ
ಕೋಲಾರ: ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆ ಬಳಿಕ ನೇಮಕಾತಿ ಆದೇಶ ಪತ್ರ ನೀಡುವುದಾಗಿ ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ಆಯ್ಕೆಯಾಗಿರುವ 66 ಮಂದಿಯ ಅಂಕಪಟ್ಟಿಯ ಪರಿಶೀಲನೆ ನಡೆಯಿತು. ಕಂದಾಯ ವಿಭಾಗದ ಹೆಡ್ ಮುನ್ಷಿ ಕೃಷ್ಣೇಗೌಡ ಹಾಗೂ ಡಿಸಿ ಕಚೇರಿಯ ಸಿಬ್ಬಂದಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೇಮಕಾತಿ ಆದೇಶ ಪತ್ರ ನೀಡಲು ನೀತಿ ಸಂಹಿತೆ ಅಡ್ಡಿಯಾಗುವುದರಿಂದ ಚುನಾವಣೆ ಮುಗಿದ ಬಳಿಕ ನೇಮಕಾತಿ ಪತ್ರ ನೀಡುವುದಾಗಿ ಅಭ್ಯರ್ಥಿಗಳಿಗೆ ತಿಳಿಸಲಾಯಿತು.
ಸ್ವಾರ್ಥಕ್ಕಾಗಿ ಸಂಘಟನೆಗಳು; ವಿಷಾದ
ಮಾಲೂರು: ಜಾನಪದ ಹಾಗೂ ಕ್ರಾಂತಿ ಗೀತೆಗಳನ್ನು ಹಾಡುತ್ತ ಹೋರಾಟ ನಡೆಸುತ್ತಿದ್ದ ದಲಿತ ಸಮುದಾಯದ ಮುಖಂಡರು ಸ್ವಾರ್ಥಕ್ಕಾಗಿ ಜೀವನ ನಡೆಸುತ್ತಿರುವುದು ವಿಷಾದನೀಯ ಎಂದು ದಲಿತ ಮುಖಂಡ ಚಿಂತಾಮಣಿಯ ಎನ್. ವೆಂಕಟೇಶ್ ಹೇಳಿದರು. ಪಟ್ಟಣದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಅವರಣದಲ್ಲಿ ರಾಜ್ಯ ಪ.ಜಾತಿ ಪ.ಪಂಗಡಗಳ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ರಾಜ್ಯ ಜಾನಪದ ಅಕಾಡಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, 1974-75 ರಲ್ಲಿ ಶೋಷಿತ-ದಲಿತರ ಮೇಲೆ ನಡೆಯುತ್ತಿದ್ದ ಶೋಷಣೆ-ದಬ್ಬಾಳಿಕೆಗಳಿಂದ ರೋಸಿ ಹೋಗಿ ಈ ಭಾಗದಲ್ಲಿ ಪ್ರಾರಂಭವಾದ ದಲಿತ ಚಳುವಳಿಗಳು ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿಲು ಪ್ರೇರಣೆಯಾಗಿತ್ತು. ಅಂತಹ ಸಂಧರ್ಭದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಿ ದಲಿತರಲ್ಲಿ ಹೋರಾಟದ ಕಿಚ್ಚನ್ನು ಹಬ್ಬಿಸಿದ್ದ ಪಿಚ್ಚಳ್ಳಿ ಶ್ರೀನಿವಾಸ್ ಎಲ್ಲ ರೀತಿಯ ನಾಯಕತ್ವದ ಗುಣ ಹೊಂದಿದ್ದ ಹುಟ್ಟು ಹೋರಾಟಗಾರರಾಗಿದ್ದರು. ಇಂದಿನ ಸಂಘಟನೆಗಳು ಸ್ವಾರ್ಥಕ್ಕಾಗಿ ಹುಟ್ಟು ಹಾಕುತ್ತಿರುವುದು ವಿಷಾದನೀಯ ಎಂದರು.