ಕೇಂದ್ರ ಸಚಿವರಿಗೆ ಈ ಬಾರಿ ವಿಶ್ರಾಂತಿ
ಚಿಂತಾಮಣಿ: ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಕೆ.ಎಚ್. ಮುನಿಯಪ್ಪ ಕೋಲಾರ ಕ್ಷೇತ್ರದ ಅಭಿವೃದ್ಧಿ ಮಾಡದೆ ನೋಟುಗಾಗಿ ಓಟು ಎಂಬ ಸಿದ್ಧಾಂತದಲ್ಲಿ ಗೆಲ್ಲುತ್ತಿದ್ದು, ಪ್ರಸ್ತುತ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಶಾಸಕ ಎಂ. ರಾಜಣ್ಣ ಆರೋಪಿಸಿದರು.
ತಾಲೂಕಿನ ಕೈವಾರ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ಕಳೆದ 10 ವರ್ಷಗಳಲ್ಲಿ ಜನಸಾಮಾನ್ಯರ ಹಿತ ಬಯಸದೆ ದಿನಬಳಕೆ ಪದಾರ್ಥಗಳ ಬೆಲೆ ಏರಿಸಿರುವುದಾಗಿ ಅಸಮದಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಓಟಿಗಾಗಿ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆರೋಪಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಉಭಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವರಾದ ವೀರಪ್ಪಮೊಯ್ಲಿ ಮತ್ತು ಕೆ.ಎಚ್. ಮುನಿಯಪ್ಪ ಎತ್ತಿನಹೊಳೆ ಯೋಜನೆ ಶಂಕುಸ್ಥಾಪನೆಗೆ ಕೈ ಹಾಕಿರುವುದು ಗಿಮಿಕ್ ರಾಜಕೀಯವೆಂದು ಆರೋಪಿಸಿದರು.
ಸಾಮಾನ್ಯ ಜನರಿಗೆ ಮೂಲ ಸೌಲಭ್ಯ ಒದಗಿಸದೆ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತಗಳಿಲ್ಲ.
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಟೀಕಿಸುವ ನೈತಿಕತೆ ಇಲ್ಲವೆಂದು ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಆರೋಪಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ವಯಸ್ಸಾಗಿದೆ ಮತ್ತು ಈ ಬಾರಿ ಮತದಾರರು ಅವರಿಗೆ ವಿಶ್ರಾಂತಿ ನೀಡಿ ಜೆಡಿಎಸ್ ಅಭ್ಯರ್ಥಿ ಕೆ. ಕೇಶವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ನೀರಾವರಿ ತಜ್ಞ ಹಾಗೂ ಶಾಶ್ವತ ನೀರಾವರಿ ಯೋಜನೆಯ ಹರಿಕಾರ ಡಾ.ಜಿ.ಎಸ್. ಪರಮಶಿವಯ್ಯನವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಂತರ ಅಂಬಾಜಿದುರ್ಗ ಹೋಬಳಿ ಉಪ್ಪರಪೇಟೆ ಹಾಗೂ ನಗರ ಆಜಾದ್ ಚೌಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ್ ಚುನಾವಣಾ ಪ್ರಚಾರ ಮಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಎನ್. ರಾಜಗೋಪಾಲ್, ಕೈವಾರ ಸುಬ್ಬರೆಡ್ಡಿ, ಎಚ್.ನಾರಾಯಣಸ್ವಾಮಿ, ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಜಿಯಾವುಲ್ಲಾ ರೆಹಮಾನ್ ಇದ್ದರು.