ಯಶ ಕಾಣದ ಕಿರು ಹಣಕಾಸು
ತುಮಕೂರು: ಬಡವರ ಅರ್ಥಿಕ ಸಬಲೀಕರಣವೇ ಕಿರು ಹಣಕಾಸು ಕ್ಷೇತ್ರದ ಮೂಲಧ್ಯೇಯವಾಗಿದ್ದರೂ ಕೆಲವು ನ್ಯೂನತೆಗಳಿಂದ ಇದುವರೆಗೆ ಯಶಸ್ಸು ಕಾಣಲು ಸಾಧ್ಯವಾಗಿಲ್ಲ ಎಂದು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಕುಲಸಚಿವ ಡಾ.ಸಿದ್ದೇಗೌಡ ತಿಳಿಸಿದ್ದಾರೆ.
ನಗರದ ಎಸ್ಐಟಿ ಕ್ಯಾಂಪಸ್ನ ಬಿರ್ಲಾ ಆಡಿಟೋರಿಯಂನಲ್ಲಿ ಗುರುಶ್ರೀ ಕಾಲೇಜ್ ಅಫ್ ಕಾರ್ಮಸ್ ಅಂಡ್ ಸೋಷಿಯಲ್ ಸ್ಟಡೀಸ್ ವತಿಯಿಂದ ಆಯೋಜಿಸಿದ್ದ 'ಸುಸ್ಥಿರ ಸಮಾಜದ ಅಭಿವೃದ್ಧಿಯಲ್ಲಿ ಕಿರು ಹಣಕಾಸಿನ ಪಾತ್ರ' ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಹುದೂರ ಕ್ರಮಿಸಬೇಕು: ತನ್ನ ಗುರಿ ಸಾಧನೆಗೆ ಬಹುದೂರ ಕ್ರಮಿಸಬೇಕಾಗಿದ್ದು, ಇದಕ್ಕೆ ಪೂರಕವಾದ ವಾತಾವರಣವನ್ನು ಸಮಾಜಸೇವಾ ಸೃಷ್ಟಿಸುವ ಅಗತ್ಯವಿದೆ ಎಂದರು.
ಸಮಾಜಸೇವೆ ಇಲ್ಲದ ಕ್ಷೇತ್ರವೇ ಇಲ್ಲವೆನ್ನಬಹುದು. ಕೃಷಿ, ಕೈಗಾರಿಕೆ, ಹಣಕಾಸು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ ಸೇವೆಯ ಅಗತ್ಯವಿದೆ. ಆದ್ದರಿಂದಲೇ ಸೋಷಿಯಲ್ ವರ್ಕನ್ನು ನಾನು ಮೋನಾಲಿಸಾ ನಗುವಿಗೆ ಹೋಲಿಸುತ್ತೇವೆ. ಹೇಗೆ ಕಿರು ಹಣಕಾಸು ಭಾರತದ ಅರ್ಥಿಕತೆಯಲ್ಲಿ ಇತ್ತೀಚಿನ ದಿನಗಳ ಪ್ರಮುಖ ಪಾತ್ರ ವಹಿಸಿದೆಯೋ ಆದೇ ರೀತಿ ವ್ಯವಸ್ಥೆ ಸರಿದಾರಿಯಲ್ಲಿ ಹೋಗಲು ನುರಿತ ಸಮಾಜಸೇವಾ ಕಾರ್ಯಕರ್ತರ ಮಾರ್ಗದರ್ಶನವೂ ಅಗತ್ಯವಿದೆ. ಕಿರು ಹಣಕಾಸು ಮತ್ತು ಸಮಾಜಸೇವೆ ಎರಡರ ಗುರಿಯೂ ಬಡವರ ಸಮಾಜೋ ಅರ್ಥಿಕ ಸಬಲೀಕರಣವೇ ಆಗಿರುವುದರಿಂದ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಾವತಿ ಇಲ್ಲದೆ ಸಾಕಷ್ಟು ಬಿಕ್ಕಟ್ಟು: ಲೇವಾದೇವಿದಾರರು, ಗಿರಿವಿ ಅಂಗಡಿಯವರ ಕಪಿಮುಷ್ಠಿಯಿಂದ ಬಡವರು, ರೈತರು,ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರು ಬಿಡುಗಡೆ ಹೊಂದಲು ಕಾರಣವಾಗಿದ್ದ ಕಿರುಹಣಕಾಸು ಇಂದು ಅಧಿಕ ಬಡ್ಡಿ, ಸರಿಯಾದ ಸಾಲ ಮರು ಪಾವತಿಯಿಲ್ಲದೆ ಸಾಕಷ್ಟು ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಿರು ಹಣಕಾಸು ವಲಯದಿಂದ ಸಾಲ ಪಡೆದ ರೈತರು ಆತ್ಮಹತ್ಯೆಗೆ ಶರಣಾದ ಪ್ರಕರಣ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದೆ. ಅಲ್ಲಿಯೂ ಕೂಡ ಭ್ರಷ್ಟಾಚಾರ ಪ್ರವೇಶ ಪಡೆದಿದ್ದು, ಹಂತ ಹಂತವಾಗಿ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಸಮಾಜಕಾರ್ಯ ವಿದ್ಯಾರ್ಥಿಗಳು ಪ್ರಸ್ತುತ ಕಿರು ಹಣಕಾಸು ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿದೆ ಎಂದರು.
ಲಾಭದ ದೃಷ್ಟಿ ತೀರ ಕಡಿಮೆ: ಭಾರತದ ಮಟ್ಟಿಗೆ ಕಿರು ಹಣಕಾಸು ಮಹಿಳೆಯರು, ಗ್ರಾಮೀಣ ಬಡವರನ್ನು ಕೇಂದ್ರೀಕರಿಸಿದೆ. ಲಾಭದ ದೃಷ್ಟಿ ತೀರ ಕಡಿಮೆಯಿದೆ. ನಬಾರ್ಡ್,ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸ್ವಸಹಾಯ ಗುಂಪುಗಳ ಮೂಲಕ ಅರ್ಥಿಕ ನೆರವು ನೀಡಿ ಬೆಳವಣಿಗೆಗೆ ಸಹಕಾರಿಯಾಗಿವೆ.
ಜಾಗತೀಕರಣದಿಂದ ಜನರ ಜೀವನ ಶೈಲಿ ಬದಲಾದಂತೆ ಜನರ ಅಗತ್ಯಗಳನ್ನು ಪೂರೈಸಲು ಕಿರು ಹಣಕಾಸು ಪೂರಕವಾಗಿ ಕೆಲಸ ಮಾಡುತ್ತಿದ್ದರೂ ಸಾಲ ಮರುಪಾವತಿಯಲ್ಲಿ ಸಾಕಷ್ಟು ಏರುಪೇರು ಕಂಡು ಬರುತ್ತಿದೆ. ಬ್ಯಾಂಕುಗಳು ಸಹ ಸಾಲ ನೀಡಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಯುವ ಸಮಾಜಸೇವಾ ಕಾರ್ಯಕರ್ತರು ಜನರಲ್ಲಿ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಿ, ಸಾಲದ ಸದ್ಬಳಕೆ ಮತ್ತು ಮರುಪಾವತಿಯತ್ತ ಸಾಲಗಾರರ ಗಮನಹರಿಸುವಂತೆ ಮಾಡಬೇಕಾಗಿದೆ ಎಂದು ಡಾ.ಸಿದ್ದೇಗೌಡ ನುಡಿದರು. ತುಮಕೂರು ವಿವಿ ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ.ಬಿ.ರಮೇಶ್, ಜಿ.ಎಚ್. ಬಸವರಾಜು ಮಾತನಾಡಿದರು. ಗುರುಶ್ರೀ ಕಾಲೇಜ್ ಅಫ್ ಕಾಮರ್ಸ್ ಅಂಡ್ ಸಮಾಜಕಾರ್ಯ ವಿಭಾಗ ಪ್ರಾಂಶುಪಾಲ ಪ್ರೊ. ಟಿ.ಗಂಗಾಧರಯ್ಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪ್ರೊ. ಶಂಕರಯ್ಯ, ಡಾ.ಪರುಶುರಾಮ್ ಉಪಸ್ಥಿತರಿದ್ದರು. ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯದ ವಿವಿಧ ಸಮಾಜಕಾರ್ಯ ವಿಭಾಗದ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.