ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಏಡುಗರ ಅಕ್ಕಮ್ಮ ದೇವಿ ಉಟ್ಲು ಪರಿಷೆ

Srinivasa Murthy VN
Updated On : 9 May 2014, 12:19 pm

ಗುಡಿಬಂಡೆ: ಏಳು ಗ್ರಾಮ ದೇವತೆಗಳ ಪೈಕಿ ಹಿರಿಯಳಾದ ಏಡುಗರ ಅಕ್ಕಮ್ಮ ದೇವತೆಗೆ ಜಾತ್ರೆಯ ಅಂಗವಾಗಿ ನಡೆದ ಉಟ್ಲು ಪರಿಷೆಗೆ ನೂರಾರು ಸಂಖ್ಯೆಯ ಜನರು ಭಾಗವಹಿಸಿ ವೈಭವದಿಂದ ಆಚರಿಸಿದರು. ಏಡುಗರ ಅಕ್ಕಮ ದೇವತೆಯ ಎರಡು ದಿನಗಳ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಬುಧವಾರ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಟ್ಲು ಪರಿಷೆಯಲ್ಲಿ ಎತ್ತರದ ಕಂಬದ ಮೇಲೆ ನಿರ್ಮಿಸಿರುವ ತಿರುಗುವ ತೊಟ್ಟಿಲಲ್ಲಿ ಕುಳಿತು ಉದ್ದವಾದ ಹಗ್ಗಕ್ಕೆ ತೆಂಗಿನ ಕಾಯಿ ಕಟ್ಟಿ ಒಡೆಯುವುದು ಇಲ್ಲಿನ ಜಾತ್ರೆಯ ವಿಶೇಷವಾಗಿತ್ತು. ಹತ್ತಾರು ಯುವಕರು ಉದ್ದನೆಯ ದೊಣ್ಣೆಗಳನ್ನು ಹಿಡಿದು ಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದು, ಕಾಯಿ ವೇಗವಾಗಿ ವಿವಿಧ ಎತ್ತರಗಳಲ್ಲಿ ತಿರುಗುತ್ತಿರುವ ಕಾಯಿಯನ್ನು ಒಡೆಯುವುದು ನೋಡುಗರಿಗೆ ಮನರಂಜನೆಯಾಗಿತ್ತು.

ಶಾಲೆಗಳಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶಾಖೆಗಳ ಸ್ಥಾಪನೆಗೆ ಸಲಹೆ
ಕೋಲಾರ:
ರಕ್ತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರತಿ ಶಾಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಶಾಖೆಗಳನ್ನು ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಸಮಾಜ ಸೇವಾ ಮನೋಭಾವ ಬಲಗೊಳಿಸುವ ಅಗತ್ಯವಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಸಮಿತಿ ಸದಸ್ಯ ಬಿ. ಸುರೇಶ್ ಅಭಿಪ್ರಾಯಪಟ್ಟರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ನಡೆಯುತ್ತಿರುವ ಚಿಣ್ಣರ ಬೇಸಿಗೆ ಶಿಬಿರದಲ್ಲಿ ವಿಶ್ವ ರೆಡ್‌ಕ್ರಾಸ್ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬರು ತಮ್ಮ ದೈನಂದಿನ ಕೆಲಸದ ಜೊತೆಗೆ ಒಂದಿಷ್ಟು ಸಮಾಜ ಸೇವೆಗೆ ಕಾಲ ಮೀಸಲಿಡಬೇಕೆಂದು ಸಲಹೆ ನೀಡಿದ ಅವರು, ವಿದ್ಯಾರ್ಥಿಗಳು ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂದು ಕಿವಿಮಾತು ಹೇಳಿದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ನಾಗರಾಜ್, ಗೃಹ ರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಮರಿಸ್ವಾಮಿ, ರೆಡ್‌ಕ್ರಾಸ್ ಸಂಸ್ಥೆ  ವಿ.ಪಿ. ಸೋಮಶೇಖರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾಸನ್ ಐ ಕೇರ್ ಸಂಸ್ಥೆಯಿಂದ ಬೇಸಿಗೆ ಶಿಬಿರದ ಚಿಣ್ಣರಿಗೆ ತಪಾಸಣೆ ನಡೆಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಮುರಳಿಮೋಹನ್, ನೌಕರರ ಸಂಘದ ಉಪಾಧ್ಯಕ್ಷ ಖಾದರ್ ಇಲಾಹಿ, ತರಬೇತುದಾರರಾದ ಲೀಲಾ, ಪ್ಲೂಡರ್ ಬೈಲೋ,ನಾಗಶೇಖರ್, ಬೀರೇಶ್ವರಿ ಇದ್ದರು.

ಪೊಲೀಸ್ ನೇಮಕಾತಿ ಸಂದರ್ಶನ ಮುಕ್ತಾಯ
ಕೋಲಾರ:
ನಾಗರೀಕ ಪೊಲೀಸ್ ನೇಮಕಾತಿಯ ಮುಂದುವರೆದ ಭಾಗವಾಗಿ 2ನೇ ದಿನದಂದು ಮಹಿಳೆಯರೂ ಸೇರಿದಂತೆ, ಉಳಿಕೆ ಪುರುಷರ ದೈಹಿಕ ಪರೀಕ್ಷೆಯು ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.ಮೇ8 ರಂದು 561 ಮಂದಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಕರೆ ನೀಡಲಾಗಿ ಇಲ್ಲಿ ನಡೆದ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಯಲ್ಲಿ, 359 ಮಂದಿ ಭಾಗವಹಿಸಿದ್ದು ಇದರಲ್ಲಿ 124 ಮಹಿಳೆಯರೂ, 4 ಮಂದಿ ಮಾಜಿ ಸೈನಿಕರೂ ಸೇರಿದಂತೆ 235 ಪುರುಷರು ಪಾಲ್ಗೊಂಡಿದ್ದರು.ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 20 ನಾಗರೀಕ ಪೊಲೀಸ್ ಕಾನ್ಸ್‌ಟೇಬಲ್ ಮತ್ತು 5 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 25 ಹುದ್ದೆಗಳ ನೇಮಕಾತಿಯ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಿಂದಲೂ ಒಟ್ಟು 1111 ಅರ್ಜಿಗಳು ಬಂದಿದ್ದವು.ಅದರಂತೆ ಮೇ 7 ರಂದು ಸುಮಾರು 550 ಮಂದಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಕರೆ ನೀಡಲಾಗಿ ಇದರಲ್ಲಿ 356 ಅಭ್ಯರ್ಥಿಗಳು ಹಾಜರಾಗಿದ್ದರು.

ವಾಸವಿ ಉತ್ಸವ
ಶಿಡ್ಲಘಟ್ಟ:
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ವಾಸವಿ ದೇವಾಲಯದಲ್ಲಿ ವಾಸವಿ ಜಯಂತೋತ್ಸವ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಹೃದಯ ಭಾಗದಲ್ಲಿರುವ ಈ ದೇವಾಲಯದಲ್ಲಿ ಆರ್ಯ ವೈಶ್ಯ ಮಂಡಳಿ, ವಾಸವಿ ಯುವಜನ ಸಂಘದವರಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ವಾಸವಿ ದೇವಿಯವರ ಹೂವಿನ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಿದ್ದರು.

ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ:
2013-14ನೇ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲಾ ಯುವ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ  ಪರಿಸರ ಸಂರಕ್ಷಣೆ, ಗ್ರಾಮ ನೈರ್ಮಲೀಕರಣ,  ಕೊಳಚೆ ನಿರ್ಮೂಲನೆ,  ಸಾಮೂಹಿಕ ವಿವಾಹ, ಆಟದ ಬಯಲುಗಳ ಅಭಿವೃದ್ಧಿ, ಕ್ರೀಡಾ ತರಬೇತಿ ಸಂಘಟನೆ ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧನೆ, ಸ್ಥಳೀಯ ಮಟ್ಟದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದು, ಜಾನಪದ ಕಲೆಗಳನ್ನು ಜನಪ್ರಿಯಗೊಳಿಸುವುದು, ಆರೋಗ್ಯ ಕಾರ್ಯಕ್ರಮ ಕುಟುಂಬ ಯೋಜನೆ ಶಿಬಿರಗಳನ್ನು ನಡೆಸುವುದು, ವೈಯಕ್ತಿಕ ವಿಕಸನ ತರಬೇತಿ ಶಿಬಿರಗಳನ್ನು ಆಯೋಜಿಸುವುದು. ಏಡ್ಸ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವುದು, ಸಾಮಾಜಿಕ ಪಿಡುಗುಗಳ ನಿವಾರಣೆ, ಯುವ ಮುಂದಾಳತ್ವ ತರಬೇತಿ ಶಿಬಿರಗಳನ್ನು ಆಯೋಜಿಸುವುದು,ಅರಣ್ಯೀಕರಣ, ಸಾರ್ವಜನಿಕ ಸ್ವತ್ತುಗಳ ಕಾಪಾಡುವಿಕೆ, ಹಳ್ಳಿಯ ಜನರಿಗೆ ಸರ್ಕಾರದ ಸೌಲಭ್ಯಗಳ ತಿಳಿವಳಿಕೆ ಮೂಡಿಸುವುದು. ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ, ಶಾಲೆ ಬಿಟ್ಟಿರುವ ಬಾಲಕ, ಬಾಲಕಿಯರನ್ನು ಶಾಲೆಗೆ ಸೇರಿಸುವುದು. ರಾಷ್ಟ್ರೀಯ ಭಾವಕ್ಯತಾ ಶಿಬಿರಗಳ ಯೋಜನೆ, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವ ತರಬೇತಿ ಶಿಬಿರ ನಡೆಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕ, ಯುವತಿ ಸಂಘ ಮತ್ತು ಮಂಡಳಿಗಳು(ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಕಚೇರಿಯಲ್ಲಿ ಹೊಸ ಕಾಯ್ದೆ ಅಡಿಯಲ್ಲಿ  ನೋಂದಾವಣೆ ಮಾಡಿರಬೇಕು) ಅರ್ಜಿಯನ್ನು ಮೇ 28 ರೊಳಗಾಗಿ ಪಡೆದುಕೊಂಡು ಭರ್ತಿ ಮಾಡಿ ಜೂ.20 ರೊಳಗಾಗಿ ಸಲ್ಲಿಸಬೇಕು. ಜಿಲ್ಲಾ ವೈಯಕ್ತಿಕ ಪ್ರಶಸ್ತಿಗಾಗಿ ತಲಾ ರೂ. 5,000 (ಒಟ್ಟು 5 ಸಂಘಕ್ಕೆ) ಜಿಲ್ಲಾ ಯುವ ಪ್ರಶಸ್ತಿ (ಸಂಘ) ಒಂದು ಯುವಕ ಸಂಘ ಮತ್ತು ಒಂದು ಯುವತಿ ಮಂಡಳಿಗೆ ತಲಾ 10 ಸಾವಿರ ರು. ನಂತೆ (ಒಟ್ಟು 2 ಸಂಘಕ್ಕೆ) ಜಿಲ್ಲಾ ಯುವ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರಿಕಾಂಬ ದೇವಾಲಯದಲ್ಲಿ ಕಾರ್ಯಕ್ರಮಗಳು
ಟೇಕಲ್:
ಸಮೀಪದ ಕೂಗಿಟಗಾನಹಳ್ಳಿಯಲ್ಲಿ ಮಾರಿಕಾಂಬದೇವಿ ನೂತನ ದೇವಾಲಯ ಜೀರ್ಣೋದ್ಧಾರ, ಸಂಪ್ರೋಕ್ಷಣೆ ಹಾಗೂ ನೂತನ ಸ್ಥಿರ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಬುಧವಾರ ಪ್ರಾರಂಭವಾಗಿದೆ. 8ರಂದು ವೇದಪಾರಾಯಣ, ಗಣಪತಿ ಪ್ರಾರ್ಥನೆ, 9ರ ಬೆಳಿಗ್ಗೆ 9 ರಿಂದ 10.30ರೊಳಗೆ ದೇವಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಅನುಮಾನಾಸ್ಪದವಾಗಿ ಮೃತಪಟ್ಟ ನವವಿವಾಹಿತೆ
ಶಿಡ್ಲಘಟ್ಟ:
ಕಳೆದ ಆರು ತಿಂಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತ ಮಹಿಳೆಯೊಬ್ಬಳು ಅನುಮಾನಾಸ್ಪದವಾದ ರೀತಿಯಲ್ಲಿ ಶವವಾಗಿ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದ್ದಾಳೆ.
ತಾಲೂಕಿನ ತುಮ್ಮನಹಳ್ಳಿ ಗ್ರಾಮದ ಮುನಿರೆಡ್ಡಿ, ಮುನಿತಾಯಮ್ಮ ಅವರ ಎರಡನೇ ಮಗಳಾದ ಚೈತ್ರ(20) ಮೃತಪಟ್ಟ ದುರ್ದೈವಿ. 6 ತಿಂಗಳ ಹಿಂದಷ್ಟೆ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸುಭ್ರಮಣಿ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಹಾಸಿಗೆಗಳು ಹಾಗೂ ಬೀರು ತಂದುಕೊಡುವಂತೆ ತನ್ನ ಕುಟುಂಬದವರಿಗೆ ದೂರವಾಣಿಯ ಮುಖಾಂತರ ಮಾತನಾಡಿದ್ದಳು. ಹುಟ್ಟಿದ ಮನೆಯವರು ಮಗಳಿಗೆ ಕೊಡಬೇಕಾಗಿದ್ದ ಎಲ್ಲಾ ವಸ್ತುಗಳನ್ನು ಕೊಟ್ಟಿದ್ದರು. ಆಗಾಗ ತನ್ನ ಮದುವೆಯ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಳು ಎನ್ನಲಾಗಿದೆ. ಎರಡು ದಿನಗಳಿಂದ ಮಗಳು ಕಾಣಿಸುತ್ತಿಲ್ಲವೆಂದು ಆಕೆಯ ಕುಟುಂಬದವರು ಗ್ರಾಮಾಂತರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರದ ಬಳಿ ನೀಲಗಿರಿ ತೋಪಿನಲ್ಲಿ ಆಕೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ತಹಸೀಲ್ದಾರ್ ಜಗದೀಶ್, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿಎಸ್‌ಐ ಹನುಮಂತಪ್ಪ, ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅರ್ಜಿ ಸ್ವೀಕಾರ, ಇತ್ಯರ್ಥದಲ್ಲಿ ಜಿಲ್ಲಾಡಳಿತಕ್ಕೆ ಪ್ರಥಮ ಸ್ಥಾನ
ಚಿಕ್ಕಬಳ್ಳಾಪುರ:
ರಾಜ್ಯದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಸಕಾಲ ಯೋಜನೆಯಡಿಯಲ್ಲಿ ಅರ್ಜಿ ಸ್ವೀಕಾರ ಮತ್ತು ಇತ್ಯರ್ಥದಲ್ಲಿ ಜಿಲ್ಲಾಡಳಿತ ಮತ್ತೆ ಸಾಧನೆ ಮಾಡಿದ್ದು ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆ 2013ನೇ ಸಾಲಿನಲ್ಲಿ ಸತತವಾಗಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ಮಾಹೆಗಳಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಥಮ, ನಂತರ 2014ನೇ ಸಾಲಿನಲ್ಲಿ ಸತತವಾಗಿ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ಮಾಹೆಗಳಲ್ಲಿ ಮೊದಲನೆಯ ಶ್ರೇಯಾಂಕ ಪಡೆದುಕೊಂಡಿದ್ದು ಹ್ಯಾಟ್ರಿಕ್ ಸಾಧನೆ ಮಾಡುವ ತವಕದಲ್ಲಿದೆ. ಕಳೆದ 8 ತಿಂಗಳಲ್ಲಿ 6 ಬಾರಿ ಪ್ರಥಮ ಸ್ಥಾನ ಪಡೆದು, ಡಿಸೆಂಬರ್ 2013 ಮತ್ತು ಜನವರಿ 2014 ರ ಮಾಹೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸಕಾಲ ಪ್ರಾರಂಭವಾದಾಗಿನಿಂದ ಕಂದಾಯ ಇಲಾಖೆಯ 5,97,836 ಸಕಾಲ ಅರ್ಜಿಗಳು ಸ್ವೀಕೃತವಾಗಿದ್ದು, 5,84,231 ಅರ್ಜಿಗಳನ್ನು ನಿಗದಿತ ಕಾಲ ಪರಿಮಿತಿಯೊಳಗೆ ವಿಲೇವಾರಿ ಮಾಡಿ ಸಕಾಲದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಇತ್ಯರ್ಥಪಡಿಸಲಾಗಿದೆ. ಏಪ್ರಿಲ್ 1 ರಿಂದ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 25 ಸೇವೆಗಳು ಸಕಾಲ ಯೋಜನೆಯಡಿಯಲ್ಲಿದ್ದು ವಿವಿಧ ಕಂದಾಯ ಇಲಾಖೆಯ ಸೇವೆಗಳಿಗೆ ಆನ್ ಲೈನ್ ಮೂಲಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಭೂಗಳ್ಳರ ವಿರುದ್ಧ ಕ್ರಮಕ್ಕೆ  ಸೇನೆ, ರೈತ ಸಂಘ ಆಗ್ರಹ
ಕೋಲಾರ:
ಜಿಲ್ಲೆಯ ನೀರಿನ ಸೆಲೆಗಳಾದ ಕೆರೆ, ಕುಂಟೆ, ಕಲ್ಯಾಣಿ ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕೆರೆ, ಕುಂಟೆಗಳು, ರಾಜಕಾಲುವೆಗಳ ಒತ್ತುವರಿ ಯಥೇಚ್ಚವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಹಣದ ಆಸೆಗೆ ಬಿದ್ದು ಭೂಮಾಫಿಯಾದವರ ಕೈಗೊಂಗೆಗಳಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಯಿತು.ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಲು ಕೆರೆ, ಕುಂಟೆಗಳು, ರಾಜಾಕಾಲುವೆಗಳು, ಕಲ್ಯಾಣಿಗಳ ಒತ್ತುವರಿಯೇ ಮುಖ್ಯ ಕಾರಣ ಆದರಿಂದ ಅಂತರ್ಜಲ ಕುಸಿತವಾಗಿದ್ದು, ಜನ ಜಾನುವಾರುಗಳು ಸಹ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿಗೆ ಬಂದು ನಿಂತಿದ್ದು ಒತ್ತುವರಿಗಳನ್ನು ತಡೆಯಬೇಕಾದ ಅಧಿಕಾರಿಗಳ ಕೈಕಟ್ಟಿ ಕುಳಿತಿದ್ದಾರೆ ಎಂದು ದೂರಲಾಯಿತು. ತಾನು ಮಾಡಿದ್ದು ತನಗೆ ಎಂಬಂತೆ ನಾವೇ ಈ ಬರಗಾಲ ಪರಿಸ್ಥಿತಿಗೆ ಕಾರಣವಾಗಿದ್ದು ಉಳಿದಿರುವ ಅಲ್ಪಸ್ವಲ್ಪ ಕರೆಕುಂಟೆಗಳು, ಕಲ್ಯಾಣಿಗಳು, ಮತ್ತು ರಾಜಾಕಾಲುವೆಗಳನ್ನು ಉಳಿಸಿಕೊಂಡು ಪುನಶ್ಚೇತನಗೊಳಿಸಿದರೆ ನೀರಿನ ಸಮಸ್ಯೆಯನ್ನು ಹೋಗಲಾಡಿಸಬಹುದೆಂದು ತಿಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement