ಒಣ ಮೇವು ದುಬಾರಿ
ಜಾನುವಾರುಗಳಿಗೆ ನೀರು ಕೊರತೆ ಮಧ್ಯೆ ಮೇವು ಇಲ್ಲ
ಟೇಕಲ್: ಬೇಸಿಗೆಯಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಅಲ್ಲದೆ ದನಕರುಗಳಿಗೆ ಮೇವಿನ ಕೊರತೆಯು ಉಂಟಾಗಿದೆ. ಮೇವಿನ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಉಚಿತವಾಗಿ ಮೇವು ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಒಣ ಜೋಳದ ಮೇವು ದೂರದ ನೆರೆಯೂರು ಹಾಗೂ ರಾಜ್ಯದ ಆಂಧ್ರದಿಂದ ಹಾಗೂ ಇತರೆ ಜಿಲ್ಲೆಗಳಿಂದ ರೈತರೆ ಒಂದಕ್ಕೆ ಮೂರು ಪಟ್ಟು ನೀಡಿ ತರಿಸಿಕೊಳ್ಳುತ್ತಿದ್ದಾರೆ. ಕೊಳವೆ ಬಾವಿಗಳು ಬತ್ತಿಹೋಗಿದ್ದು ಸಿಗುತ್ತಿರುವ ಅಲ್ಪಸ್ವಲ್ಪ ನೀರು ಹಾಯಿಸಲು ವಿದ್ಯುತ್ ತೊಂದರೆ ಕೂಡುತ್ತಿದೆ. ಇದರಿಂದ ಮೇವಿನ ಕೊರತೆ ಹೆಚ್ಚಾಗಿದ್ದು, ಪ್ರಸ್ತುತ ರೈತರು ತಾಲೂಕಿನಲ್ಲಿ ಒಂದು ಟ್ರ್ಯಾಕ್ಟರ್ ಮೇವಿಗೆ 8 ರಿಂದ 10 ಸಾವಿರಕ್ಕೂ ಹೆಚ್ಚು ಹಣ ನೀಡಿ ಕೊಳ್ಳುತ್ತಿದ್ದಾರೆ.
ಟೇಕಲ್, ಮಾಸ್ತಿ, ಕಸಬಾ ಮತ್ತು ನಗರ ಪ್ರದೇಶಗಳಲ್ಲಿ ಮೇವಿನ ಬರ ಹೆಚ್ಚಾಗುತ್ತಾ ಬರುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಮೇವು ಕೊಳ್ಳಲಾಗದೆ ಜಾನುವಾರುಗಳನ್ನು ಕಸಾಯಿಖಾನೆಗೆ ತಳ್ಳುವ ಸ್ಥಿತಿ ಎದುರಿಸುವಂತಿದೆ. ಕಳೆದ ವರ್ಷ 4 ರಿಂದ 5 ಸಾವಿರಕ್ಕೆ ಸಿಗುತ್ತಿದ್ದ ಮೇವು ಈಗ ದುಬಾರಿಯಾಗಿದೆ.
ತಾಲೂಕಿನಲ್ಲಿ ಒಟ್ಟು 36 ಸಾವಿರ ಜಾನುವಾರಗಳಿವೆ. ಮೇವು ಸರಬರಾಜಾಗಿದ್ದು ಈ ವಾರಾಂತ್ಯದಲ್ಲಿ ಇಲಾಖೆಯ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುವುದು.
-ಡಾ.ಸತೀಶ್, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ