ಕೋಲಾರದಿಂದಲೇ ಜನಪದ ಕಲಾವಿದರ ಸಮೀಕ್ಷೆ
ಕೋಲಾರ: ನೆಲ ದೇವತೆಗಳ ಬೀಡಾದ ಕೋಲಾರ ಜಿಲ್ಲೆಯಿಂದಲೇ ಜನಪದ ಕಲೆಗಳು ಮತ್ತು ಕಲಾವಿದರ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ತಾಲೂಕು ಸಂಯೋಜಕರ ಸಭೆಯಲ್ಲಿ ಪಾಲ್ಗೊಂಡು ಸಮೀಕ್ಷೆಗೆ ಸಂಬಂಧಿಸಿದಂತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಕಲಾವಿದರಾಗಿರುವ ತಾವು ಜಾನಪದ ಅಕಾಡೆಮಿ ಅಧ್ಯಕ್ಷರಾದ ನಂತರ ರಾಜ್ಯಾದ್ಯಂತ ನೈಜ ಜಾನಪದ ಕಲೆ ಮತ್ತು ಕಲಾವಿದರನ್ನು ಗುರುತಿಸುವ ಸಲುವಾಗಿ ಸಮೀಕ್ಷಾ ಕಾರ್ಯ ನಡೆಸುವ ಯೋಜನೆಯನ್ನು ಪ್ರಕಟಿಸಿದ್ದು, ಇದರ ಭಾಗವಾಗಿ ಪ್ರಾಯೋಗಿಕವಾಗಿ ಈ ಸಮೀಕ್ಷಾ ಕಾರ್ಯವನ್ನು ತಮ್ಮ ತವರು ಜಿಲ್ಲೆ ಕೋಲಾರದಿಂದಲೇ ಆರಂಭಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದರು.
ಕೋಲಾರ ಜಿಲ್ಲೆಯಿಂದಲೇ ಸಮೀಕ್ಷೆಯನ್ನು ಆರಂಭಿಸುತ್ತಿರುವುದಕ್ಕೆ ವಿಶೇಷ ಕಾರಣಗಳು ಏನಿಲ್ಲವಾದರೂ, ಇದೇ ಜಿಲ್ಲೆಯವರಾದ ತಮಗೆ ಇಲ್ಲಿನ ಕಲೆ ಮತ್ತು ಕಲಾವಿದರ ಬಗ್ಗೆ ಅರಿವಿರುವುದರಿಂದ ಸುಲಭವಾಗಿ ಸಮಗ್ರ ಸಮೀಕ್ಷೆ ನಡೆಸಬಹುದು ಎಂಬುದಷ್ಟೇ ಕಾರಣವಾಗಿದೆ ಎಂದರು.
ಸ್ವಾಯತ್ತ ಸಂಸ್ಥೆಯಾಗಿರುವ ಜಾನಪದ ಆಕಾಡೆಮಿ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ತಾಲೂಕು ಸಂಯೋಜಕರು, ಪ್ರೇರಕ, ಉಪ ಪ್ರೇರಕರ ಸಹಕಾರದೊಂದಿಗೆ ಈ ಸಮೀಕ್ಷೆಯನ್ನು ನಡೆಸಿ, ಕಲೆ ಮತ್ತು ಕಲಾವಿದರ ಸಮಗ್ರ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರ ತರುವುದರ ಜೊತೆಗೆ, ಅಕಾಡೆಮಿಯ ವೆಬ್ ಸೈಟ್ನಲ್ಲಿಯೂ ಅಪಲೋಡ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಮೀಕ್ಷಾ ಕಾರ್ಯವು ಜೂನ್ ಮೊದಲ ವಾರದಿಂದ ಜುಲೈ ಮೊದಲ ವಾರದೊಳಗೆ ನಡೆಯಲಿದ್ದು, ಆಗಸ್ಟ್ ವೇಳೆಗೆ ಕಲಾವಿದರ ಮಾಹಿತಿ ಪುಸ್ತಕ ಸಿದ್ಧಪಡಿಸಿ, ಮುಖ್ಯಮಂತ್ರಿಗೆ ಸಲ್ಲಿಸುವ ಮೂಲಕ ಈ ರೀತಿಯ ಸಮೀಕ್ಷೆಯನ್ನು ಇಡೀ ರಾಜ್ಯದಲ್ಲಿ ನಡೆಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
ಈವರೆವಿಗೂ ದೇಶದಲ್ಲಿ ಇದೇ ಮೊದಲ ಬಾರಿಗೆ ಜಾನಪದ ಕಲಾವಿದರ ಸಮಗ್ರ ವಿವರಗಳ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದ್ದು, ಇದಕ್ಕೆ ಕೋಲಾರ ಜಿಲ್ಲೆಯ ಕಲಾವಿದರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.