ಪಿಯು ಫಲಿತಾಂಶ: ಕೋಲಾರ ಚೇತರಿಕೆ
ಕೋಲಾರ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೋಲಾರ ಜಿಲ್ಲೆ ಕೊಂಚ ಮಟ್ಟಿಗೆ ಚೇತರಿಕೆ ಕಂಡಿದೆ.
ಕಳೆದ ಬಾರಿ 22ನೇ ಸ್ಥಾನದಲ್ಲಿದ್ದ ಕೋಲಾರ ಈ ಸಾರಿ 19ನೇ ಸ್ಥಾನಕ್ಕೆ ಜಿಗಿದಿದೆ. ಪರೀಕ್ಷೆಗೆ 12342 ಹೊಸಬರು, 3178 ಪುನರಾವರ್ತಿಗಳು, 860 ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟು 16380 ವಿದ್ಯಾರ್ಥಿಗಳು ಕುಳಿತಿದ್ದರು. ವಾಣಿಜ್ಯ ವಿಭಾಗದಿಂದ 6502, ವಿಜ್ಞಾನ ವಿಭಾಗದಿಂದ 4383 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 8431 ಬಾಲಕರು, 7946 ಬಾಲಕಿಯರು ಪರೀಕ್ಷೆ ಬರೆದಿದ್ದರು. ಈ ಪೈಕಿ 9177 (ಶೇ.56.03) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಜಿಲ್ಲೆಗೆ 19ನೇ ಸ್ಥಾನ ದಕ್ಕಿದೆ.
ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಆದರೆ, ಪಿಯು ಇಲಾಖೆಯ ಉಪ ನಿರ್ದೇಶಕ ದೊರೆಸ್ವಾಮಿ ಅವರು ಫಲಿತಾಂಶ ಮಾಹಿತಿ ಕೇಳಲು ಹೋಗಿದ್ದ ಪತ್ರಕರ್ತರ ಬಳಿ ತಮ್ಮಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ಳುವ ಮೂಲಕ ಫಲಿತಾಂಶ ತಿಳಿಯಲು ಕಾತುರರಾಗಿದ್ದ ಜನರಿಗೆ ನಿರಾಸೆಯನ್ನು ಉಂಟು ಮಾಡಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಪಿಯು ಡಿಡಿಪಿಐ ಅವರು ಪಿಯು ಮಂಡಳಿಯಿಂದ ಫಲಿತಾಂಶ ತರಿಸಿಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ, ಕೋಲಾರ ಅಧಿಕಾರಿಗಳು ಮಾತ್ರ ಮಾಹಿತಿ ಇಲ್ಲ ಎಂದು ನುಣುಚಿಕೊಂಡರು.
ಜೆಎಸ್ಎಸ್ ಕಾಲೇಜಿಗೆ ಶೇ.94.2 ಫಲಿತಾಂಶ
ಮಾಲೂರು: ಇಲ್ಲಿನ ಜೆಎಸ್ಎಸ್ ಕಾಲೇಜು 2013-14 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.94.2 ರಷ್ಟು ಫಲಿತಾಂಶ ಪಡೆದಿದೆ. ಈ ಬಾರಿ ಪರೀಕ್ಷೆಗೆ ಕುಳಿತಿದ್ದ 192 ವಿದ್ಯಾರ್ಥಿಗಳಲ್ಲಿ 181 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರಲ್ಲಿ 54 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 108 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ.15 ವಿದ್ಯಾರ್ಥಿಗಳು ದ್ವೀತಿಯ ದರ್ಜೆಯಲ್ಲಿ ಹಾಗೂ ನಾಲ್ಕು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ಸಂಹಿತ 585(ಶೇ.97.5)ಅರ್ಚಿತ 577(ಶೇ.96.1) ಅಂಕ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಕುಮಾರಿ ರೇಖಾ ಯು.570 (ಶೇ.95), ವಿಶಾಲ್ ಬಿ.567(ಶೇ.94.5) ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಧನೆಗೈದ ಪ್ರತಿಭೆಗಳಿಗೆ ಮೈಸೂರಿನ ಜೆ.ಎಸ್.ಎಸ್. ಮಹಾ ವಿದ್ಯಾಪೀಠದ ಪರವಾಗಿ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿಗೆ ಶೇ.97.2
ಕೋಲಾರ: ನಗರದ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ 2013-14 ನೇ ಸಾಲಿನ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 599 ವಿದ್ಯಾರ್ಥಿಗಳ ಪೈಕಿ 582 (ಶೇ.97.02) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 536 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 521 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ 204 ಅತ್ಯುನ್ನತ ದರ್ಜೆಯಲ್ಲಿ, 296 ಪ್ರಥಮ ದರ್ಜೆಯಲ್ಲಿ, 19 ಮಂದಿ ದ್ವಿತೀಯ ದರ್ಜೆ ಹಾಗೂ 2 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆಂದು ಕಾಲೇಜಿನ ಅಧ್ಯಕ್ಷ ಉದಯಕುಮಾರ್ ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಾನಸ. ಬಿ. ಆನಂದ್ 600 ಅಂಕಗಳಿಗೆ 585ಅಂಕಗಳನ್ನು ಪಡೆದಿದ್ದು, ಭೌತಶಾಸ್ತ್ರ ಹಾಗೂ ಗಣಿತದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದು ಪ್ರಥಮ ಸ್ಥಾನದಲ್ಲಿದ್ದಾರೆ. ಮಧುಪ್ರಿಯ 584 ಅಂಕಗಳನ್ನು ಪಡೆದಿದ್ದು, ಗಣಿತ ಹಾಗೂ ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದು, ದ್ವಿತೀಯ ಸ್ಥಾನದಲ್ಲಿರುತ್ತಾರೆ. ಮತ್ತೊಬ್ಬ ವಿದ್ಯಾರ್ಥಿ ಜಿ.ವಿ.ಚರಣ್ ಸಹ 584 ಅಂಕಗಳನ್ನು ಪಡೆದು, ರಾಸಾಯನಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಬಿ.ಎಲ್.ಶ್ರೇಯಸ್ ಎಂಬ ವಿದ್ಯಾರ್ಥಿ 582ಅಂಕಗಳನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದು ತೃತೀಯ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 63 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, 36 ಪ್ರಥಮ ಹಾಗೂ 5 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಎನ್.ಎಲ್. ಶ್ರೀಗೀತಾ 600ಕ್ಕೆ 566 ಅಂಕಗಳನ್ನು ಪಡೆದಿದ್ದು, ಲೆಕ್ಕಶಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಹಾಗೆಯೇ ಎನ್. ಸುಧಾಮಣಿ ಎಂಬ ವಿದ್ಯಾರ್ಥಿನಿಯು 562 ಅಂಕಗಳನ್ನು ಪಡೆದಿದ್ದು ಲೆಕ್ಕಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದ ಫಲಿತಾಂಶ ಶೇ. 96.08 ಆಗಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.