ಬಸ್, ಟೋಲ್ ದರ ಹೆಚ್ಚಳ: ಪ್ರತಿಭಟನೆ
ಚಿಂತಾಮಣಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಬಸ್ ಹಾಗೂ ಟೋಲ್ ದರವನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಕನ್ನಡ ಜಾಗೃತಿ ವೇದಿಕೆ ತಾಲೂಕು ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಯೋಗಿನಾರಾಯಣ, ಗಜಾನ ವೃತ್ತಗಳು, ಎಂ.ಜಿ.ರಸ್ತೆ ಮೂಲಕ ಹಾಯ್ದು ತಾಲೂಕು ಕಚೇರಿ ಮುಂಭಾಗದಲ್ಲಿ ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವೇದಿಕೆಯ ತಾಲೂಕು ಅಧ್ಯಕ್ಷ ಆರ್. ನಾಗರಾಜ್ ಅವರು, ದರ ಏರಿಕೆಯಿಂದ ಜನ ಸಾಮಾನ್ಯ ಹಾಗೂ ಕೂಲಿ ಕಾರ್ಮಿಕರಿಗೆ ಭಾರಿ ತೊಂದರೆಯಾಗುತ್ತಿದೆ. ಏಕಾಏಕಿ ಬಸ್ ದರ ಹೆಚ್ಚಿಸಿರುವುದು ಖಂಡನೀಯ ಎಂದರು. ನಂತರ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಬಸ್ ಹಾಗೂ ಟೋಲ್ ದರವನ್ನು ಯಥಾಸ್ಥಿತಿಗೆ ಕಾಯ್ದುಕೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ವಿ.ನಾಗರಾಜ್, ಬಿ.ಮಂಜುಭಾರ್ಗವಿ, ಶಂಕರ್,ದೇವರಾಜ್, ಆರ್.ವಿ.ಶ್ರೀನಿವಾಸ್, ಶಿವಣ್ಣ, ದಾಕ್ಷಾಯಿಣಿ, ಮಂಜುನಾಥಗೌಡ, ರವಿಕುಮಾರ್, ಗುರಪ್ಪ, ಮುನಿರೆಡ್ಡಿ,ಅಶೋಕ್ಕುಮಾರ್, ಆರ್.ಶ್ರೀನಿವಾಸ್, ಅನಿಲ್ಕುಮಾರ್, ಚೌಡಪ್ಪ ಸೇರಿದಂತೆ ಅನೇಕರು ಹಾಜರಿದ್ದರು.