ಬೇಕಾಬಿಟ್ಟಿ ರಸ್ತೆ ಅಗೆತ: ಜನರಿಗೆ ತೊಂದರೆ
ಬಂಗಾರಪೇಟೆ: ಪಟ್ಟಣದಲ್ಲಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಬಹುತೇಕ ಸಿಮೆಂಟ್ ರಸ್ತೆಗಳನ್ನು ಅಗೆದು ಸಂಪರ್ಕ ಪಡೆಯಲಾಗಿದೆ. ರಸ್ತೆ ತುಂಬೆಲ್ಲಾ ಹಳ್ಳಗಳಾಗಿದ್ದು ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಭಾರಿ ತೊಂದರೆಯುಂಟಾಗುತ್ತಿದೆ.
ಪಟ್ಟಣದಲ್ಲಿರುವ ರಸ್ತೆಗಳ ಸ್ಥಿತಿ ಮೊದಲೇ ಚೆನ್ನಾಗಿಲ್ಲ. ಅಂಥದ್ದರಲ್ಲಿ ನೀರಿನ ಪೈಪ್ಲೈನ್ ಹಾಕಲು ಚೆನ್ನಾಗಿರುವ ರಸ್ತೆಗಳನ್ನು ಅಗೆದು, ಹಾಗೇ ಬಿಡಲಾಗಿದೆ. ಕೆಲವೆಡೆ ಪುರಸಭೆ ಅನುಮತಿ ಇಲ್ಲದೆ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಮತ್ತೆ ಸಿಮೆಂಟ್ ಹಾಕಿ ಮುಚ್ಚುವ ಪ್ರಯತ್ನವಾಗಿಲ್ಲ. ಪುರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದರಿಂದ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ. ಪಟ್ಟಣದ ಮುನಿಯಮ್ಮ ಬಡಾವಣೆ ಮುಖ್ಯರಸ್ತೆಯ ಸುಮಾರು 150 ಮೀಟರ್ ಅಂತರದಲ್ಲೇ ಸುಮಾರು ಎರಡು ಕಡೆ ರಸ್ತೆ ಅಗೆಯಲಾಗಿದೆ ಎಂದು ಬಡಾವಣೆಯ ಜನರು ತಿಳಿಸಿದ್ದಾರೆ. ರಸ್ತೆ ಅಗೆಯುಲು ತೋರುವ ಕಾಳಜಿ ಮುಚ್ಚಲು ತೋರುತ್ತಿಲ್ಲ. ಹಾಗಾಗಿ ಪಟ್ಟಣದ ಬಹುತೇಕ ರಸ್ತೆಗಳು ಹದಗೆಡಲು ಮುಖ್ಯ ಕಾರಣವಾಗಿದೆ. ಇದರ ಮದ್ಯ ಬಿಎಸ್ಎನ್ಎಲ್ನವರು ಕೇಬಲ್ ಸಂಪರ್ಕಕ್ಕಾಗಿ ಬೇಕಾಬಿಟ್ಟಿಯಾಗಿ ರಸ್ತೆಗಳನ್ನು ಹಾಳು ಮಾಡುತ್ತಿದ್ದಾರೆ. ಇಷ್ಟೆಲ್ಲವಾದರೂ ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಜನರು ಆರೋಪಿಸಿದ್ದಾರೆ.