ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ'
ಕೋಲಾರ: ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕೆಂದು, ಬೆಂಗಳೂರು ಮಲ್ಲೇಶ್ವರಂನ ಓಂ ಇನ್ಸಿಟಿಟ್ಯೂಟ್ ಡ್ಯಾನ್ಸ್ ಅಂಡ್ ಮ್ಯಾಜಿಕ್ ಶಾಲೆಯ ಖ್ಯಾತ ವಿಧೂಷಿ ಗಾಯತ್ರಿ ಪರಮೇಶ್ವರ್ ಅಭಿಪ್ರಾಯಪಟ್ಟರು. ಇಲ್ಲಿನ ಮುನೇಶ್ವರ ನಗರದಲ್ಲಿರುವ ಡ್ಯಾನ್ಸ್ ಸ್ಪಾಟರ್ನ್ಸ್ ನೃತ್ಯ ಶಾಲೆಯ ವಾರ್ಷಿಕೋತ್ಸವ ವಿಶ್ವ ನೃತ್ಯ ದಿನಾಚರಣ, ಮತ್ತು ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ನೃತ್ಯ ಶಾಲೆಯು ಕೊಲಾರದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದು ಜಿಲ್ಲೆಯಲ್ಲಿನ ಆಸಕ್ತ ಮಕ್ಕಳಿಗೆ ನೃತ್ಯವನ್ನು ಕಲಿಸುವುದರ ಮೂಲಕ ಶಾಲೆಯ ಕೀರ್ತಿ ಇನ್ನು ಹೆಚ್ಚಲಿ ಎಂದು ಕರೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಪರಮೇಶ್ವರ ಈಗಾಗಲೇ ಡ್ಯಾನ್ಸ್ ಸ್ಪಾಟರ್ನ್ಸ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಪ್ರದರ್ಶನ ನೀಡಿ ಹೆಸರುವಾಸಿಯಾಗಿದ್ದು, ನೃತ್ಯ ಶಾಲೆಯ ಅಧ್ಯಕ್ಷ ಸ್ಕ್ಯಾನ್ವಿ ಎಂ.ಜೆ. ಅವರ ನೇತೃತ್ವದಲ್ಲಿ ಇನ್ನು ಮುಂದೆಯು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನು ನೀಡಿ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಸಾಕಮ್ಮ, ನೃತ್ಯ ಶಾಲೆಯ ಅಧ್ಯಕ್ಷ ಸ್ಕ್ಯಾನ್ವಿ ಎಂ.ಜೆ, ಭರತನಾಟ್ಯ ಕಲಾವಿದೆ ಸುರಕ್ಷಾ ಸ್ಕ್ಯಾನ್ವಿ, ಆರೋಗ್ಯ ಇಲಾಖೆಯ ಬಾಬು, ಶಿವಮ್ಮ ಇದ್ದರು.
ಯುವಕ ಸಾವು
ಕೋಲಾರ: ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಅರಹಳ್ಳಿ ಗೇಟ್ ಸಮೀಪ ನಡೆದಿದೆ. ತಾಲೂಕಿನ ಬೀರಂಡಹಳ್ಳಿ ಗ್ರಾಮದ ವಾಸಿ ಸರ್ವೆಯರ್ ಮಹೇಶ್ (22) ಮೃತ ವ್ಯಕ್ತಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ ಕೆಲ ನಿಮಿಷಗಳ ನಂತರ ಮಹೇಶ್ ಅವರು ಮೃತಪಟ್ಟಿದ್ದಾರೆ. ಸಂಚಾರಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಗೊಂಡಿದ್ದಾರೆ.
ಜೂ.1ಕ್ಕೆ ಸಾಮೂಹಿಕ ಉಪನಯನ
ಕೋಲಾರ: ಕೋಲಾರ ಬ್ರಾಹ್ಮಣರ ಸಂಘದಿಂದ ಜೂನ್ 1ರಂದು ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಈ ಸಾಮೂಹಿಕ ಉಪನಯನದಲ್ಲಿ ಪಾಲ್ಗೊಂಡು ಬ್ರಹ್ಮೋಪದೇಶ ಪಡೆಯಲು ಇಚ್ಛಿಸುವ ತ್ರಿಮತಸ್ಥ ಬ್ರಾಹ್ಮಣ ವಟುಗಳು ನಗರದ ಪಿ.ಸಿ.ಬಡಾವಣೆಯಲ್ಲಿರುವ ಗಾಯತ್ರಿ ಪ್ರಾರ್ಥನಾ ಮಂದಿರದ ಕಚೇರಿಯಲ್ಲಿ ಹೆಸರು ನೊಂದಾಯಿಸುವಂತೆ ಕೋರಲಾಗಿದೆ. ಸಾಮೂಹಿಕ ಉಪನಯನಕ್ಕೆ ವಟುಗಳು ಹೆಸರು ನೊಂದಾಯಿಸಲು ಮೇ 20 ಕಡೆ ದಿನ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ-9448080574 ಅಥವಾ 9731040800ರಲ್ಲಿ ಸಂಪರ್ಕಿಸಲು ಸಂಘದ ಕಾರ್ಯದರ್ಶಿಗಳು ಕೋರಿದ್ದಾರೆ.
ಧರ್ಮರಾಯಸ್ವಾಮಿ ಹೂವಿನ ಕರಗ 11ಕ್ಕೆ
ಬಂಗಾರಪೇಟೆ: ಪಟ್ಟಣದ ಪುರಾಣ ಪ್ರಸಿದ್ಧ 68ನೇ ವರ್ಷದ ದ್ರೌಪತಮ್ಮ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಇದೇ 11ರಿಂದ 17ರವರೆಗೂ ಅತ್ಯಂತ ವೈಭವವಾಗಿ ನಡೆಯಲಿದೆ ಎಂದು ಧರ್ಮರಾಯಸ್ವಾಮಿ ಕ್ಷೇಮಾಭಿವೃದ್ಧಿ ಸಮಿತಿ ಮುಖ್ಯಸ್ಥ ಎ. ಜಯರಾಮ್ ತಿಳಿಸಿದ್ದಾರೆ. 11ರಂದು ಧ್ವಜಾರೋಹಣ,12ರಂದು ದೇವಾಲಯಗಳಲ್ಲಿ ಆರತಿ ದೀಪೋತ್ಸವ, 13 ರಂದು ಹಸೀಕರಗ, ಮ14ರಂದು ಉಟ್ಲು ಜಾತ್ರೆ, 15ರಂದು ಬೇತಮಂಗಲದ ಕೃಷ್ಣಮೂರ್ತಿರಿಂದ ಹೂವಿನ ಕರಗ 16ರಂದು ಅಗ್ನಿಕುಂಡ ಪ್ರವೇಶ ಮತ್ತು 17ರಂದು ವಸಂತೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಿಸಿಯೂಟ ನೌಕರಿಗೆ ಅರ್ಜಿ ಆಹ್ವಾನ
ಗುಡಿಬಂಡೆ: ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಮುಖ್ಯ ಅಡುಗೆಯವರ ಅವಶ್ಯಕತೆಯಿರುವುದರಿಂದ ಸದರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯಳ್ಳವರು ತಮ್ಮ ವಾಸಸ್ಥಳ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವ ಚಿತ್ರ, ಪಡಿತರ ಚೀಟಿ ಹಾಗೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಜೊತೆಯಲ್ಲಿ 7ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಪ್ರಮಾಣ ಪತ್ರವನ್ನು ಮೇ 22 ರೊಳಗೆ ಸ್ಥಳೀಯ ಪ.ಪ. ಕಚೇರಿಗೆ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.