ರಾಜಾ ಕಾಲುವೆಗಳ ಸ್ವಚ್ಛತೆಗೆ ಶ್ರಮದಾನ
ಕೋಲಾರ: ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶ ದ್ವಾರದಲ್ಲಿನ ರಾಜಾ ಕಾಲುವೆ ಸೇರಿದಂತೆ ಕೋಲಾರದ ನಗರದಲ್ಲಿನ ಎಲ್ಲಾ ರಾಜಾ ಕಾಲುವೆಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದ ಬಳಿ ಇರುವ ರಾಜಾ ಕಾಲುವೆಯಲ್ಲಿ ಪ್ಲಾಸ್ಟಿಕ್ ತುಂಬಿಕೊಂಡಿದೆ. ಮಳೆಗಾಲದಲ್ಲಿ ಇದರಿಂದ ತೊಂದರೆ ಆಗುತ್ತದೆ ಎಂದು ಗುರುವಾರ ತಮ್ಮನ್ನು ಭೇಟಿಯಾಗಿದ್ದ ಪತ್ರಕರ್ತರು ಗಮನ ಸೆಳೆದಾಗ, ತಕ್ಷಣ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ರಾಜಾಕಾಲುವೆಗಳಲ್ಲಿ ಪ್ಲಾಸ್ಟಿಕ್ ತೆರವು ಮಾಡಿಸುವುದು ಅತಿ ಮುಖ್ಯವಾಗಿದೆ. ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಜೊತೆಗೂಡಿ ಶ್ರಮದಾನ ಮೂಲಕ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸುವುದು ಸೂಕ್ತವೆಂದರು.
ಶ್ರಮದಾನದಲ್ಲಿ ತಾವು ಸಹ ಭಾಗವಹಿಸಲಿದ್ದು ಸಂಘ ಸಂಸ್ಥೆಗಳ ಮುಖಂಡರು ದಿನ ನಿಗದಿ ಮಾಡಿದಲ್ಲಿ ಕಾಲುವೆಗಳ ಸ್ವಚ್ಛತೆಗೆ ಬೇಕಾದ ಪರಿಕರಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ನಗರದಲ್ಲಿನ ಎಲ್ಲಾ ರಾಜಾ ಕಾಲುವೆಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಿದರೆ ಮಳೆಗಾಲದಲ್ಲಿ ನೀರು ಸುಲಲಿತವಾಗಿ ಹರಿಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯರಗೋಳ್ ಡ್ಯಾಮ್: ಕುಡಿಯುವ ನೀರಿಗಾಗಿ ರೂಪಿಸಿರುವ ಯರಗೋಳ್ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ಚುನಾವಣೆ ಹಿನ್ನಲೆಯಲ್ಲಿ ಅಣೆಕಟ್ಟೆ ನಿರ್ಮಾಣ ಸ್ಥಳದಲ್ಲಿ ಕಲ್ಲು ಬಂಡೆಗಳ ಸ್ಫೋಟ ನಿಷೇಧಿಸಿರುವುದರಿಂದ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಪತ್ರಕರ್ತರು ತಿಳಿಸಿದಾಗ, ಕಾಮಗಾರಿ ನಿಂತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಚುನಾವಣೆ ಮುಗಿದಿರುವುದರಿಂದ ಕಲ್ಲು ಬಂಡೆಗಳ ಸ್ಪೋಟಕ್ಕೆ ಅನುಮತಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ, ಅಣೆಕಟ್ಟೆ ನಿರ್ಮಾಣ ಕಾಮಗಾರಿ ಚಾಲನೆಗೆ ಸೂಚಿಸುವುದಾಗಿ ತಿಳಿಸಿದರು. ರಾಜಾ ಕಾಲುವೆಗಳಲ್ಲಿ ಪ್ಲಾಸ್ಟಿಕ್ ಸುರಿದಿರುವುದು ಹಾಗೂ ಯರಗೋಳ್ ಕಾಮಗಾರಿ ಸ್ಥಗಿತದ ಬಗ್ಗೆ ಕನ್ನಡಪ್ರಭದಲ್ಲಿ ಇತ್ತೀಚೆಗೆ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ರೈತನ ವಿರುದ್ಧ ಕೇಸು
ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಅಮ್ಮೇರಹಳ್ಳಿ ಕೆರೆಯ ಏರಿಯನ್ನು ಒಡೆದು ಜಮೀನು ಸಹಮಟ್ಟು ಮಾಡಿಕೊಂಡಿರುವ ರೈತ ರಾಮಚಂದ್ರ ವಿರುದ್ಧ ಪ್ರಕರಣ ದಾಖಲು ಮಾಡಲು ನಗರಸಭೆಗೆ ತಿಳಿಸಲಾಗಿದೆ.
ಏರಿಯನ್ನು ನಾಶ ಮಾಡಿರುವ ರೈತನೇ ತನ್ನ ಸ್ವಂತ ಹಣದಲ್ಲಿ ದುರಸ್ತಿ ಮಾಡಿಸಬೇಕು. ಒಂದು ವೇಳೆ ಆದೇಶ ಪಾಲಿಸದಿದ್ದರೆ ನಗರಸಭೆಯವರು ಏರಿಯನ್ನು ದುರಸ್ತಿ ಮಾಡಿಸಿ ಬಿಲ್ ನೀಡಲಿದ್ದು ಈ ಹಣವನ್ನು ರೈತ ನೀಡಬೇಕಾಗುತ್ತದೆ ಎಂದರು. ಈಗಾಗಲೇ ತನ್ನ ವ್ಯಾಪ್ತಿಗೆ ಸೇರಿದ 14 ಎಕರೆ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯದ ರೈತ ರಾಮಚಂದ್ರ ಕೆರೆಯ ಏರಿಯನ್ನು ಒಡೆದು ಹಾಕಿರುವುದು ದುರಾಸೆಯ ಪರಮಾವಧಿಯಾಗಿದೆ ಎಂದು ಟೀಕಿಸಿದರು.
ಏರಿ ದುರಸ್ತಿಗೆ ಒಪ್ಪಿಗೆ
ತನ್ನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿ ಸೂಚಿಸಿರುವ ವಿಷಯ ಗೊತ್ತಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳ ಬಳಿ ದೌಡಯಿಸಿ ಬಂದ ರೈತ ರಾಮಚಂದ್ರ ನನ್ನಿಂದ ತಪ್ಪಿಗಿದೆ, ಕೆರೆಯ ಏರಿಯನ್ನು ನಾನೇ ದುರಸ್ತಿ ಮಾಡಿಸುತ್ತೇನೆ. ಕ್ರಿಮಿನಲ್ ಮೊಕದ್ದಮೆ ಬೇಡವೆಂದು ಅಂಗಲಾಚಿದ.
ಸಾರ್ವಜನಿಕರ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಕಾನೂನು ಬಾಹಿರ, ಮಾಡಿದ ತಪ್ಪು ತಿದ್ದಿಕೊಂಡು ನಾಳೆಯೇ ಏರಿಯನ್ನು ದುರಸ್ತಿ ಮಾಡಿಸು, ಮಾತು ತಪ್ಪಿದರೆ ಜೈಲಿಗೆ ಹೋಗುವುದು ಗ್ಯಾರೆಂಟಿ ಎಂದು ಜಿಲ್ಲಾಧಿಕಾರಿಗಳು ಹೇಳಿ ಕಳುಹಿಸಿದರು.