ಸ್ವಚ್ಛತೆ ಮರೆತ ಅಧಿಕಾರಿಗಳು: ಮಿಟ್ಟೇಮರಿ ಗ್ರಾಮಸ್ಥರ ಆರೋಪ
ಬಾಗೇಪಲ್ಲಿ: ಗ್ರಾಮದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಗ್ರಾ.ಪಂ. ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ತಾಲೂಕಿನ ಮಿಟ್ಟೇಮರಿ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಹೋಬಳಿ ಕೇಂದ್ರ ಹಾಗೂ ಗ್ರಾ.ಪಂ ಕೇಂದ್ರವಾಗಿರುವ ಮಿಟ್ಟೇಮರಿ ಗ್ರಾಮದಲ್ಲಿ ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಚರಂಡಿಯಲ್ಲಿ ಹರಿಯಬೇಕಾಗಿದ್ದ ಕೊಳಚೆ ನೀರು ಬಾಗೇಪಲ್ಲಿ-ಚಿಂತಾಮಣಿ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಶೇಖರಣೆಯಾಗುತ್ತಿದೆ. ಇದೇ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಜನಸಂಣಿ ಹೆಚ್ಚಾಗಿರುವುದರಿಂದ ರಸ್ತೆಯ ಮಧ್ಯಭಾಗದಲ್ಲಿ ಶೇಖರಣೆಯಾಗಿರುವ ಕೊಳಚೆಯ ನೀರು ಚಲಿಸುವ ವಾಹನಗಳ ರಭಸಕ್ಕೆ ಸಾರ್ವಜನಿಕರ ಮೇಲೆ ಬೀಳುತ್ತಿದೆ. ಅಲ್ಲದೇ ಈ ಕಲುಷಿತ ನೀರು ಗಬ್ಬುನಾತ ಬೀರುತ್ತಿರುವುದರಿಂದ ಸುತ್ತಮುತ್ತಲಿನ ಜನರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಲೇರಿಯಾ, ಚಿಕುಂ ಗುನ್ಯಾ ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಗ್ರಾಮದ ಗ್ರಾಮಸ್ಥರು ಬಲಿಯಾಗಬೇಕಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಗ್ರಾ.ಪಂ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೇ ರಸ್ತೆಯ ಮೂಲಕ ಈ ಗ್ರಾ.ಪಂ. ಅಧಿಕಾರಿಗಳು ಪ್ರತಿ ನಿತ್ಯವೂ ಓಡಾಡುತ್ತಿದ್ದರೂ ಗ್ರಾಮದ ಚರಂಡಿಗಳಿಂದ ಮುಖ್ಯ ರಸ್ತೆಗೆ ಕೊಳಚೆ ನೀರು ಶೇಖರಣೆಯಾಗಿರುವುದನ್ನು ನೋಡಿ ನೋಡದಂತೆ ಹೋಗುವ ಮೂಲಕ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ದೂರಿರುವ ಗ್ರಾಮಸ್ಥರು, ಈಗಲಾದರೂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಮುಖ್ಯ ರಸ್ತೆಯಲ್ಲಿ ಶೇಖರಣೆಯಾಗಿರುವ ಚರಂಡಿಯ ಕೊಳಚೆ ನೀರನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.