ಕಲೆಗೆ ಪ್ರತಿಭೆ ಮುಖ್ಯ, ಜಾತಿಯಲ್ಲ
ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ಲಕ್ಷ್ಮಣ್ ದಾಸ್
ಕ.ಪ್ರ.ವಾರ್ತೆ ಮಧುಗಿರಿ ಮೇ 9
ಕಲೆಗೆ ಪ್ರತಿಭೆ ಮುಖ್ಯ. ಕಲಾವಿದರು ಎತ್ತರಕ್ಕೆ ಬೆಳೆದಂತೆ ಎಲ್ಲರೂ ಹತ್ತಿರ ಬರುತ್ತಾರೆ ಎಂದು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ್‌ದಾಸ್ ಅಭಿಪ್ರಾಯಪಟ್ಟರು.
ತಾಲೂಕಿನ ಪುರವರ ಹೋಬಳಿ ಅರಳಾಪುರ ಚಾಮುಂಡೇಶ್ವರಿ ಗ್ರಾಮೀಣ ಜನಪದ ಯುವ ಕಲಾವೃಂದ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಚಾಮುಂಡೇಶ್ವರಿ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ 13ನೇ ವರ್ಷದ ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿ, ಚರ್ಮವಾದ್ಯ ಕಣ್ಮರೆಯಾಗುತ್ತಾ ಪೈಬರ್ ಕಾಲ ವಿಜೃಂಬಿಸುತ್ತಿದೆ. ಕಲೆ, ಕಲಾವಿದರಲ್ಲಿ ಪಾರದರ್ಶಕತೆ ಇರಬೇಕು. ಸ್ವಾಭಿಮಾನ ಪ್ರತಿಭೆಗೆ ಮೆರಗು ತರುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ ಜನಪದ ಕಲಾವಿದರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿ ಕಲೆ, ಸಂಸ್ಕೃತಿ ಉಳಿಸಿ ಬೆಳಸಬೇಕು.ಕಲಾವಿದರ ಬದುಕು ಹಸನು ಮಾಡಿದಾಗ ಕಲೆ ತಾನಾಗೆ ಉಳಿಯುತ್ತದೆ ಎಂದರು. ಎನ್. ಮಹಾಲಿಂಗೇಶ್, ಜನಪದ ಕಲೆ ಪೋತ್ಸಾಹಿಸಬೇಕು ಎಂದರು. ರಾಜ್ಯ ಕಲಾವಿದರ ಸಂಘದ ಅಧ್ಯಕ್ಷ ಕಂಟಲಗೆರೆ ಸಣ್ಣ ಹೊನ್ನಯ್ಯ ಪ್ರಾಸ್ಥಾವಿಕ ಭಾಷಣ ಮಾಡಿದರು. ಅಧ್ಯಕ್ಷತೆ ವಹಿಸಿ ಸಾಹಿತಿ ಪ್ರೊ.ಮ.ಲ.ನ. ಮೂರ್ತಿ ಮಾತನಾಡಿದರು.