ಜನ ವಸತಿಯಿಂದ ದೂರ ಠಾಣೆ ನಿರ್ಮಾಣ: ಆಕ್ರೋಶ
ಶಿಡ್ಲಘಟ್ಟ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯ ಪಾತ್ರ ಬಹಳ ಮುಖ್ಯ. ಅಂತಹ ಪೋಲಿಸ್ ಇಲಾಖೆಯು ಜನಸಂಪರ್ಕ ಹೆಚ್ಚಾಗಿರುವ ಕಡೆಗಳಲ್ಲಿ ಇರುವುದು ಸೂಕ್ತ. ಆದರೆ ಶಿಡ್ಲಘಟ್ಟ ಪಟ್ಟಣದ ಠಾಣೆಯನ್ನು ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಪೋಲಿಸ್ ವಸತಿ ಗೃಹಗಳ ಆರವರಣದಲ್ಲಿ ನಿರ್ಮಾಣ ಮಾಡಲು ಹೊರಟಿರುವುದನ್ನು ನಾಗರಿಕರು ಖಂಡಿಸಿದ್ದಾರೆ.
ಸದ್ಯ ಪಟ್ಟಣದ ಕೆನರಾ ಬ್ಯಾಂಕಿನ ಮುಂಭಾಗ ಖಾಸಗಿ ಕಟ್ಟಡದಲ್ಲಿ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಹೊಸ ಠಾಣೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆದರೆ, ಸ್ಥಳೀಯಾಡಳಿತ ಸೂಕ್ತವಾದ ನಿವೇಶನವನ್ನು ಕೊಡಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜನ ಸಂಪರ್ಕದಿಂದ ದೂರವಿರುವ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ಠಾಣೆ ನಿರ್ಮಿಸಲು ಉದ್ದೇಶಿಸಲಾಗಿದೆ.ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಕಪಾಳಮೋಕ್ಷ ಮಾಡಿದ ಅಧಿಕಾರಿಅಮಾನತು
ಕೆಜಿಎಫ್: ಹಿರಿಯ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ ಬೆಮೆಲ್ ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಬಿನೈಸರ್ ಅವರನ್ನು ಶುಕ್ರವಾರ ಬೆಮೆಲ್ ಆಡಳಿತ ವರ್ಗ ಅಮಾನತುಗೊಳಿಸಿದೆ. ಗುರುವಾರ ಬೆಳಗ್ಗೆ ನೀರು ಸರಬರಾಜು ಮಾಡುವ ವಿಷಯಕ್ಕೆ ಸಂಬಂಧಿಸಿ ಚರ್ಚಿಸಲು ಎಸ್ಟೇಟ್ ಕಚೇರಿಗೆ ಹೋದ ಎಬಿನೈಸರ್ ಸಹಾಯಕ ವ್ಯವಸ್ಥಾಪಕ ವಿಜಯಕುಮಾರ್ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ಕಾರ್ಮಿಕ ಸಂಘದ ಸದಸ್ಯನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಎಸ್ಟೇಟ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧವಾಗಿ ಆಡಳಿತ ವರ್ಗ ಅಮಾನತ್ತು ಆದೇಶ ಹೊರಡಿಸಿದೆ.
ಪಟಾಲಮ್ಮದೇವಿ ಜಾತ್ರಾ ಮಹೋತ್ಸವ
ಟೇಕಲ್: ಸಮೀಪದ ಹುಣಸಿಕೋಟೆ ಗ್ರಾಮದ ಪಟಾಲಮ್ಮದೇವಿ ಭಕ್ತ ಸೇವಾ ಮಂಡಳಿಯವರು 2ನೇ ವರ್ಷದ ಜಾತ್ರಾ ಮಹೋತ್ಸವವನ್ನು ಶನಿವಾರ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ಗ್ರಾಮದೇವರುಗಳಲ್ಲಿ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ತದನಂತರ ಸಂಜೆ 6 ಗಂಟೆಗೆ ಆರ್ಕೇಸ್ಟ್ರಾ, 9 ಗಂಟೆಗೆ ಸಕಲ ದೇವರುಗಳ ಪಲ್ಲಕ್ಕಿ ಉತ್ಸವಗಳು ನಡೆಯಲಿದೆ. ಶನಿವಾರ ರಾತ್ರಿ 1 ಗಂಟೆಗೆ ಮುದುವತ್ತಿ ಮುರುಳಿಯವರಿಂದ ಹೂವಿನ ಕರಗ ಮಹೋತ್ಸವ ನಡೆಯಲಿದ್ದು ಭಾನುವಾರ ಮುಂಜಾನೆ 6 ಗಂಟೆಗೆ ಅಗ್ನಿಕುಂಡ ಪ್ರವೇಶ ಹಾಗೂ ವಸಂತೋತ್ಸವ ನಡೆಯಲಿದೆ.
ಅಪಘಾತ: ದ್ವಿಚಕ್ರಸವಾರ ಸಾವು
ಮುಳಬಾಗಲು: ಪಟ್ಟಣದ ಟೀಚರ್ಸ್ ಕಾಲೋನಿಯ ಬಳಿ ದ್ವಿಚಕ್ರವಾಹನ ಅಪಘಾತಕ್ಕೀಡಾಗಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಸೊನ್ನವಾಡಿ ಗ್ರಾಮದ ಬಾಬು ಎಂದು ಗುರುತಿಸಲಾಗಿದೆ. ಬಾಬು ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಿ, ವಾಪಸ್ಸು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬಾಲ್ಯ ವಿವಾಹ ತಡೆದ ತಹಸೀಲ್ದಾರ್
ಮುಳಬಾಗಲು: ಪಟ್ಟಣದ ವಿರೋಪಾಕ್ಷಿ ರಸ್ತೆಯಲ್ಲಿ ಗೋಕುಲ್ನಗರದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ತಹಸೀಲ್ದಾರ್ ನೇತೃತ್ವದ ತಂಡ ತಡೆದಿದೆ. 9ನೇ ತರಗತಿ ವಿದ್ಯಾರ್ಥಿನಿಗೆ ತಾಲೂಕಿನ ಎಸ್.ಚದುಮನಹಳ್ಳಿ ಗ್ರಾಮದ ವರನೊಂದಿಗೆ ಮದುವೆ ನಿಶ್ಚಯವಾಗಿತ್ತು. ತಹಸೀಲ್ದಾರ್ ಏಕೇಶಬಾಬು ಮತ್ತು ಕಂದಾಯ ನಿರೀಕ್ಷಕ ಬಲರಾಮೇಗೌಡ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ, ಬಾಲ್ಯವಿವಾಹವನ್ನು ತಡೆದಿದ್ದಾರೆ. ವಧುವಿನ ಸಂಬಂಧಿ ಸುಬ್ರಮಣಿ 9 ಸಾವಿರ ಹಣ ಹಾಗೂ ಒಡವೆ ಪಡೆದು ನಾನು ಹೇಳಿದವರಿದಗೆ ನಿಮ್ಮ ಮಗಳನ್ನು ಮದುವೆ ಮಾಡಬೇಕು ಎಂಬ ಬೆದರಿಕೆ ಹಾಕುತ್ತಿದ್ದರು. ಹಾಗಾಗಿ ಮದುವೆ ನಿಶ್ಚಯ ಮಾಡಲಾಗಿತ್ತು ಎಂದು ಹುಡಗಿಯ ಪಾಲಕರು ತಿಳಿಸಿದ್ದಾರೆ. ಸುಬ್ರಮಣಿ ವಿರುದ್ಧ ಕ್ರಮಕೈಗೊಳ್ಳುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ.
ಮನೆಗೆ ಬೆಂಕಿ: ವ್ಯಕ್ತಿ ಮೃತ
ಚಿಂತಾಮಣಿ: ಮನಗೆ ಬಿದ್ದ ಬೆಂಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತ ಮೃತಪಟ್ಟಿರುವ ಘಟನೆ ತಾಲೂಕಿನ ಕೋರ್ಲಪರ್ತಿ ಪಂಚಾಯ್ತಿ ವ್ಯಾಪ್ತಿಯ ಪಾಪತಿಮ್ಮನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 28 ರಂದು ಮಧ್ಯರಾತ್ರಿ ಸಮಯದಲ್ಲಿ ದೇವಪ್ಪ ಎಂಬವವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಮನೆ ಭಸ್ಮವಾಗಿದೆ. ದೇವಪ್ಪ(45) ರವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವೆಂಕಟೇಶ್ಗೆ ಡಾಕ್ಟರೇಟ್
ಚಿಕ್ಕಬಳ್ಳಾಪುರ: ಕೆ.ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ವೆಂಕಟೇಶ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ವಿಶ್ವವಿದ್ಯಾನಿಲಯದ ಪ್ರಭಾರಿ ಉಪ ಕುಲಪತಿ ಡಾ. ಹೆಚ್. ನಾಗಲಿಂಗಪ್ಪನವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದ ಬುಡಕಟ್ಟು ಜನಾಂಗದ-ಕ್ರೀಡೆಗಳ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಆರ್. ವೆಂಕಟೇಶ್ ಪ್ರಬಂಧ ಮಂಡಿಸಿರುವುದಕ್ಕೆ (ಪಿ.ಹೆಚ್.ಡಿ) ಡಾಕ್ಟರೇಟ್ ನೀಡಲಾಗಿದೆ. ಶ್ರೀ ಕೆ.ವಿ.ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿ ಪ್ರಸ್ತುತ ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್, ಶೈಕ್ಷಣಿಕ ಕ್ಷೇತ್ರ ಮತ್ತು ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾಷನಲ್ ಕಾಲೇಜಿಗೆ ಉತ್ತಮ ಫಲಿತಾಂಶ
ಬಾಗೇಪಲ್ಲಿ: ಪಟ್ಟಣದ ನ್ಯಾಷನಲ್ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ. ಒಟ್ಟು 342 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 274 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಡಿಸ್ಟಿಂಕ್ಷನ್ 14, ಪ್ರಥಮ ದರ್ಜೆ 154, ದ್ವಿತೀಯ ದರ್ಜೆ 50, ತೃತೀಯ ದರ್ಜೆಯಲ್ಲಿ 56 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 109 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಡಿಸ್ಟಿಂಕ್ಷನ್ 5, ಪ್ರಥಮ ದರ್ಜೆ 38, ದ್ವಿತೀಯ ದರ್ಜೆ 7 ತೃತೀಯ 26 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದ 233 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ 9, ಪ್ರಥಮ ದರ್ಜೆ 116, ದ್ವಿತೀಯ ದರ್ಜೆ 43, ತೃತೀಯ ಸ್ಥಾನ 30 ವಿದ್ಯಾರ್ಥಿಗಳು ಪಾಸಾಗಿದ್ದು ಗಣಿತದಲ್ಲಿ 100 ಕ್ಕೆ 100 ಅಂಕಗಳನ್ನು ವಿಷ್ಣುವರ್ಧನ. ಕೆ, ವಾಣಿ ಪಡೆದಿದ್ದು ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರದಲ್ಲಿ ಎಲ್.ಕೆ. ಗೌತಮಿ 100 ಅಂಕಗಳನ್ನು ಪಡೆದಿದ್ದಾರೆ.
ಆರೋಗ್ಯ ಉಚಿತತಪಾಸಣೆ
ಕೋಲಾರ: ಆರ್ಯವೈಶ್ಯ ಕುಲದೇವತೆ ವಾಸವಿ ಜಯಂತಿ ಪ್ರಯುಕ್ತ ಕೋಲಾರದ ವಾಸವಿ ಸೇವಾ ಸಮಿತಿ ವತಿಯಿಂದ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ರೆಡಕ್ರಾಸ್ ಸಂಸ್ಥೆಯು ಸಹ ಸಹಕಾರಿಯಾಗಿ ರಕ್ತದಾನ ಶಿಬಿರ ಏರ್ಪಡಿಸಿದ್ದು, 65 ಜನ ರಕ್ತದಾನ ಮಾಡಿದರು. ವಾಸನ್ ಐಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. 170 ಜನ ತಪಾಸಣೆಗೆ ಒಳಪಟ್ಟರು. ಕೋಲಾರ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ವೆಂಕಟೇಶ್ರಿಂದ ಶಿಬಿರದ ಉದ್ಘಾಟನೆ ನೆರವೇರಿತು. ವಿ.ಪಿ.ಸೋಮಶೇಖರ್, ರಾಘವೇಂದ್ರ ಬಾಲಾಜಿ ಮತ್ತು ಜೆ.ಜಿ.ಶಿವಶೇಖರ್ ಶಿಬಿರದ ಉಸ್ತುವಾರಿಯನ್ನು ವಹಿಸಿದ್ದರು.
ವಾಸವಿ ಜಯಂತಿ
ಕೆಜಿಎಫ್: ನಗರದ ಶ್ರೀ ಕನಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಕನಿಕಾಪರಮೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆಗಳು, ಭಕ್ತಿ ಕೀರ್ತನೆಗಳು, ದೈವ ಆರಾಧನೆ, ತೀರ್ಥಪ್ರಸಾದ, ಅನ್ನಸಂತಾರ್ಪಣೆ ಕಾರ್ಯಕ್ರಮಗಳನ್ನು ಆರ್ಯಾ ವೈಶ್ಯಾ ಮಂಡಳಿ ವತಿಯಿಂದ ಏರ್ಪಡಿಸಲಾಗಿತ್ತು. ವಾಸವಿ ಜಯಂತಿ ಅಂಗವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ನೂರಾರು ಭಕ್ತಾದಿಗಳು ಶ್ರೀ ಕನಿಕಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಎ.ಕೋದಂಡರಾಮಯ್ಯಶೆಟ್ಟಿ, ಜಿಎಸ್.ಕಾರ್ತಿಕ್, ಬಿ.ನರಸಿಂಹಗುಪ್ತ, ನಿರ್ಮಲ್ ರಮೇಶ್, ಶ್ರೀಧರ್, ಸಂತೋಷ್, ನವೀನ್, ಸರವಣ, ಪ್ರಕಾಶ್ ಹಾಜರಿದ್ದರು.