ಜೆಡಿಎಸ್‌ನ ಗೋಪಾಲಪ್ಪ ಅವಿರೋಧ ಆಯ್ಕೆ?
ಕೋಲಾರ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಮೇ 13ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಚುನಾವಣೆ ನಿಗದಿಯಾಗಿದೆ.
ಜೆಡಿಎಸ್‌ನ ಕುರ್ಕಿ ರಾಜರಾಜೇಶ್ವರಿಯವರು ಒಪ್ಪಂದದ ಪ್ರಕಾರ ತಮ್ಮ ಅವಧಿ ಮುಗಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಕೋಲಾರ ಎಪಿಎಂಸಿಯಲ್ಲಿ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿರಲಿಲ್ಲ.
ನೀತಿ ಸಂಹಿತೆ ತೆರವುಗೊಂಡಿರುವ ಹಿನ್ನಲೆಯಲ್ಲಿ ಜೆಡಿಎಸ್ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಕೋರಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೋಲಾರ ತಾಲೂಕು ತಹಸೀಲ್ದಾರ್ ಅವರು ಮೇ.13ಕ್ಕೆ ಚುನಾವಣೆ ನಿಗದಿ ಮಾಡಿ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮೇ 13ರಂದು ಬೆಳಿಗ್ಗೆ 10.30ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ, 11.15ರಿಂದ 11.30ರವರೆಗೆ ನಾಮಪತ್ರ ಪರಿಶೀಲನೆ, 11.30ರಿಂದ 11.45ರವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದ್ದು. ಅಗತ್ಯವಿದ್ದರೆ 11.45ಕ್ಕೆ ಮತದಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋಲಾರ ಎಪಿಎಂಸಿಯಲ್ಲಿ ಜೆಡಿಎಸ್ ಬಹುಮತ ಹೊಂದಿದ್ದು ಅಧ್ಯಕ್ಷ ಸ್ಥಾನ ಜೆಡಿಎಸ್ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ರಾಜರಾಜೇಶ್ವರಿಯವರು ರಾಜಿನಾಮೆ ನೀಡಿದ ನಂತರ ಜೆಡಿಎಸ್‌ನ ಎಂ. ಗೋಪಾಲಪ್ಪನವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪಂದವಾಗಿತ್ತು. ಅದರಂತೆ ಎಲ್ಲಾ ಸದಸ್ಯರು ಒಮ್ಮತಕ್ಕೆ ಬಂದಿರುವುದರಿಂದ ಮತ್ತೊಮ್ಮೆ ಜೆಡಿಎಸ್ ಕೋಲಾರ ಎಪಿಎಂಸಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಖಚಿತವಾಗಿದೆ. ಉಪಾಧ್ಯಕ್ಷರಾಗಿರುವ ವಡಗೂರು ರಾಮು ತಮ್ಮ ಸ್ಥಾನದಲ್ಲಿ ಮುಂದುವರೆಯುವುದಕ್ಕೂ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಸಹಮತವಿರುವುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಬಾಧಕವಿರುವುದಿಲ್ಲ.