ಬೆಸ್ಕಾಂ ನಿರ್ಲಕ್ಷ್ಯ: ಬತ್ತಿದ ಕೊಳವೆಬಾವಿ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 9
ಕುಡಿಯುವ ನೀರಿನ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಐದು ವರ್ಷಗಳ ಹಿಂದೆ ಬೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ವಿದ್ಯುತ್ ಸಂಪರ್ಕ ಕೊಡದ ಕಾರಣ ಸಾವಿರಾರು ರುಪಾಯಿ ಖರ್ಚು ಮಾಡಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರು ಬತ್ತಿಹೋಗಿದೆ ಎಂದು ಸುಗಟೂರು ಜಿಪಂ ಕ್ಷೇತ್ರದ ಮಾಜಿ ಸದಸ್ಯೆ ಸ್ವರ್ಣ ರಾಜಣ್ಣ ಹಾಗೂ ತೊಟ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎ.ಸಂಪತ್‌ಕುಮಾರ್ ಆರೋಪಿಸಿದ್ದಾರೆ.
ತಾಲೂಕಿನ ಕಿತ್ತಂಡೂರು ಗ್ರಾಮದಲ್ಲಿ ಜನರ ಅನುಕೂಲಕ್ಕಾಗಿ ಕೊಳವೆಬಾವಿ ಕೊರೆಸಲಾಗಿದ್ದು ಬೆಸ್ಕಾಂ ಅಧಿಕಾರಿಗಳು ಸಕಾಲಕ್ಕೆ ವಿದ್ಯುತ್ ಸಂಪರ್ಕ ನೀಡದೆ ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗಿರುವುದರಿಂದ ನಷ್ಟ ಉಂಟಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂತಹ ಹಲವಾರು ಪ್ರಕರಣಗಳು ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ- ನಿರ್ಲಕ್ಷ್ಯದಿಂದ ನಡೆದಿದ್ದು ಗ್ರಾಮೀಣ ಪ್ರದೇಶದ ರೈತಾಪಿ ಮತ್ತು ಸಾಮಾನ್ಯ ಜನರು ಕುಡಿಯುವ ನೀರು ಮತ್ತು ಕೃಷಿ ಕಾರ್ಯ ಬೆಳೆಗಳಿಗೆ ಸಕಾಲಕ್ಕೆ ನೀರು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆಂದು ದೂರಿದ್ದಾರೆ.
ಗ್ರಾಮೀಣ ಪ್ರದೇಶದ ಆನೇಕ ಗ್ರಾಮಗಳನ್ನು ಇಡೀ ರಾತ್ರಿ ನಿದ್ದೆಗೆಟ್ಟು ಕಾದರೂ 2 ಬಿಂದಿಗೆ ನೀರು ಸಿಗದ ದು-ಸ್ಥಿತಿ ಉಂಟಾಗಿತೆ. ಹಿಂದೆಂದೂ ಕಾಣದಷ್ಟು ಬರಗಾಲ ಎದುರಾಗಿ ನೀರು-ಮೇವಿಗೆ ಹಾಹಾಕಾರ ಏರ್ಪಟ್ಟಿದೆ. ನೀರಿಲ್ಲದೆ ಆನೇಕ ಜಾನುವಾರುಗಳು ಸಾಯುತ್ತಿವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿ ಜನತೆಯ ನೆರವಿಗೆ ಬರಬೇಕು,ಆದರೆ, ಕರ್ತವ್ಯ ಪ್ರಜ್ಞೆಯನ್ನು ಬೆಸ್ಕಾಂ ಅಧಿಕಾರಿಗಳು ಮರೆತಿರುವುದರಿಂದ ರೈತರಿಗೆ ಕಷ್ಟವಾಗುತ್ತಿದೆ. ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಅಧಿಕಾರಿಗಳ ಬಗ್ಗೆ ಶಾಸಕ ರಮೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಮಾತ್ರಕ್ಕೆ ಪ್ರತಿಭಟನೆಗಳನ್ನು ನಡೆಸಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ತಿಳಿಸಿದ್ದಾರೆ.
ರೈತನ ತೋಟದಲ್ಲಿರುವ ವಿದ್ಯುತ್ ಕಂಬ ತೆಗೆಯಲು. ವಾಲಿದ ಕಂಬ ಸರಿಪಡಿಸಲು ಹಾಗೂ ಹಳೆಯ ಕಂಬಗಳನ್ನು ಬದಲಾಯಿಸಲು ಅರ್ಜಿ ಕೊಟ್ಟರೂ ಅಧಿಕಾರಿಗಳು ಸಕಾಲಕ್ಕೆ ಕ್ರಮ ಜರುಗಿಸುವುದಿಲ್ಲ. ಈ ಹಿಂದೆ ಕಣಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಬೈರೇಗೌಡರ ಕಾಲದಲ್ಲಿ ಆಡಳಿತ ಬಿಗಿಯಾಗಿತ್ತು. ಈಗ ಕರ್ತವ್ಯಲೋಪವೆಸಗುವ ಅಧಿಕಾರಿಗಳ ಬಗ್ಗೆ ಮಾತನಾಡಿದರೆ ತಪ್ಪು ಎನ್ನುವಂತಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಡಳಿತದಲ್ಲಿ ಬಿಗಿ ಇಲ್ಲ. ರಮೇಶ್‌ಕುಮಾರ್ ರಂತಹ ಹಿರಿಯ ನಾಯಕರು ಅಧಿಕಾರಿಗಳ ಗಮನ ಸೆಳೆದ ಮಾತ್ರಕ್ಕೆ ಅವರ ಮೇಲೆ ಇಲ್ಲ ಸಲ್ಲದ ಆರೋಪವೆಸಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ, ಬೆಸ್ಕಾಂ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಂಡು ಜನಪರವಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಡಿಸಿ ಕಚೇರಿಗೆ ಮುತ್ತಿಗೆ: ವಿದ್ಯುತ್ ಇಲಾಖೆ ತನ್ನ ಧೋರಣೆ ಕೈಬಿಡದಿದ್ದರೆ, ಶೀಘ್ರದಲ್ಲಿ ಬೆಸ್ಕಾಂ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ರೈತರ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಸಂಪತ್‌ಕುಮಾರ್ ಹಾಗೂ ಸ್ವರ್ಣರಾಜಣ್ಣ ಎಚ್ಚರಿಸಿದ್ದಾರೆ.